ADVERTISEMENT

ಮಾಸಾಶನ ವಿತರಣೆ ವಿಳಂಬ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 6:45 IST
Last Updated 4 ಏಪ್ರಿಲ್ 2013, 6:45 IST

ಸಿಂಧನೂರು: ಅಂಗವಿಕಲರು, ವೃದ್ಧರು, ವಿಧವೆಯರಿಗೆ ನೀಡಲಾಗುವ ಮಾಸಾಶನವನ್ನು ಈಚೆಗೆ ತಿಂಗಳಿಗೆ ಸರಿಯಾಗಿ ನೀಡದೆ ವಿಳಂಬ ಮಾಡಲಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಅಖಿಲ ಕರ್ನಾಟಕ ಕನ್ನಡ ಚಳವಳಿ ಸಮಿತಿ ರಾಜ್ಯ ಸಂಚಾಲಕ ಕೆ.ಬಾಳಪ್ಪ ಆಗ್ರಹಿಸಿದ್ದಾರೆ.

ಮಂಗಳವೇ ಅವರು ಹೇಳಿಕೆ ನೀಡಿ ಪ್ರತಿ ತಿಂಗಳು ನೀಡಲಾಗುತ್ತಿದ್ದ ಮಾಸಾಶನವನ್ನು ಇತ್ತೀಚೆಗೆ ಮೂರು ತಿಂಗಳಿಗೊಮ್ಮೆ ವಿತರಿಸಲಾಗುತ್ತಿದೆ. ಮಾಸಾಶನದಿಂದಲೇ ಜೀವನ ಕಂಡುಕೊಂಡಿರುವ ಹಲವರು ಪರಿತಪಿಸುವಂತಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಹರಿಸಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ವೇತನಕ್ಕಾಗಿ ದಿನನಿತ್ಯ ಅಂಚೆ ಕಚೇರಿಗೆ ಅಲೆದಾಡಿದರೂ ಅಲ್ಲಿಯ ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಅವರಿಗೆ ಬೇಕಾಗಿರುವ ಮಾಹಿತಿಯನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಅಲ್ಲದೇ ಮಾಸಾಶನ ವಿತರಿಸುವ ಪೋಸ್ಟ್‌ಮ್ಯಾನ್‌ಗಳು 100 ರೂ.ಗೆ 100 ರೂ. ಕಮೀಷನ್ ಪಡೆಯುತ್ತಿದ್ದಾರೆ ಎಂದರು.

ಬಡವರ ಹಣಕ್ಕೂ ಕೈಚಾಚುವ ಪ್ರವೃತ್ತಿ ಬೆಳೆಸಿಕೊಂಡಿರುವ ಇಂತಹ ನೌಕರರ ವಿರುದ್ಧ ಕ್ರಮಕೈಗೊಳ್ಳಬೇಕು, ಪ್ರತಿ ತಿಂಗಳು ಸರಿಯಾಗಿ ಮಾಸಾಶನ ವಿತರಿಸಬೇಕು. ಇಲ್ಲವಾದಲ್ಲಿ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಸಮಿತಿಯ ಎಂ.ಯೇಸುರಾಜು, ರಡ್ಡೆಪ್ಪ ತೂಗೆಮನಿ, ಯಂಕಪ್ಪ ಹೆಡಗಿನಾಳ, ಹಸನ್ ಟೇಲರ್, ನಾಗೇಶ ಜಾಲಗಾರ, ರಮೇಶ ನಾಗಲೀಕರ, ಆಂಜನೇಯ ಗುರುಗುಂಟಾ, ವೆಂಕಟೇಶ ಕಟ್ಟಿಮನಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.