ADVERTISEMENT

ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್ ಜವಾಬ್ದಾರಿ ಸ್ಥಾನ ಕೊಡಲಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 5:30 IST
Last Updated 3 ಏಪ್ರಿಲ್ 2012, 5:30 IST

ರಾಯಚೂರು: ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಅಭಿವೃದ್ಧಿಗೆ ಆದ್ಯತೆ ಕೊಟ್ಟಿದ್ದರು. ವಿವಿಧ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕಲ್ಪಿಸಿದ್ದರಿಂದ ಕೆಲಸ ಕಾರ್ಯಗಳಾಗಿವೆ. ಈಗ ಅವರಿಗೆ ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನವನ್ನು ಬಿಜೆಪಿ ಹೈಕಮಾಂಡ್ ಕಲ್ಪಿಸಿದರೆ ಪಕ್ಷದಲ್ಲಿನ ಆಂತರಿಕ ಸಂಘರ್ಷ ದೂರವಾಗಲು ಸಾಧ್ಯವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಆಂಧ್ರಪ್ರದೇಶದ ಚೇಗುಂಟ ಧರ್ಮ ಸಮಾರಂಭಕ್ಕೆ ಹೋಗುವ ಪೂರ್ವ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರಲ್ಲಿಯೂ ಕೆಲ ಲೋಪದೋಷಗಳಿವೆ. ಸಿಟ್ಟು ಕಡಿಮೆ ಮಾಡಿಕೊಳ್ಳಬೇಕು. ತಾಳ್ಮೆಯಿಂದ ನಡೆದುಕೊಳ್ಳಬೇಕು. ಈ ಹಿಂದಿನ ಮುಖ್ಯಮಂತ್ರಿಗಳ ಅವಧಿಯಲ್ಲಿ ಆಗದೇ ಇರುವಷ್ಟು ಅವರು ಮುಖ್ಯಮಂತ್ರಿ ಆಗಿದ್ದಾಗ ಮಾಡಿದ್ದಾರೆ. ಡಾ.ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನಕ್ಕೆ, ವಿಧಾನಸಭಾ ಕ್ಷೇತ್ರವಾರು ಅನುದಾನ ಹೆಚ್ಚು ದೊರಕಿಸಿದ್ದಾರೆ ಎಂದರು.

ಈ ರೀತಿ ಅಭಿವೃದ್ಧಿ ಕೆಲಸ ಮಾಡಿದ ವ್ಯಕ್ತಿಗೆ ಆ ಪಕ್ಷದ ಹೈಕಮಾಂಡ್ ಒಂದು ಜವಾಬ್ದಾರಿ ವಹಿಸಿಕೊಡಬೇಕು ಎಂಬುದು ನಮ್ಮ ಅಭಿಪ್ರಾಯ. ಕೊಡಲೇಬೇಕು ಎಂಬ ಸೂಚನೆಯಲ್ಲ ಎಂದು ಹೇಳಿದರು.

ಧಾರ್ಮಿಕ ರಂಗವನ್ನೊಳಗೊಂಡು ಎಲ್ಲ ರಂಗದಲ್ಲೂ ಸಂಘರ್ಷದ ವಾತಾವರಣ ಹೆಚ್ಚು ಕಾಣುತ್ತಿದೆ. ಧಾರ್ಮಿಕ ರಂಗ ಮೊದಲ್ಗೊಂಡು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಮಾನವನ ಬದುಕಿನಲ್ಲಿ ಒತ್ತಡ ಹೆಚ್ಚಾಗಿದೆ. ಎಲ್ಲ ರಂಗ ವಿಫಲವಾದಾಗ ಜನತೆ ಧರ್ಮದ ಬಗ್ಗೆ ನಂಬಿಕೆ ಇಟ್ಟು ಪರಿಹಾರ ಕಂಡುಕೊಳ್ಳುತ್ತಾರೆ ಎಂದರು.

ಮಠಗಳು ನೇರವಾಗಿ ರಾಜಕೀಯದಲ್ಲಿ ಪಾಲ್ಗೊಳ್ಳುವುದನ್ನು ಬಿಡಬೇಕು. ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ರಾಜಕೀಯ ವಲಯ, ವ್ಯಕ್ತಿಗಳು ದಾರಿ ತಪ್ಪಿದಾಗ ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು ಎಂದು ಆಶಿಸಿದರು.

ರಾಜ್ಯದಲ್ಲಿ ಬರಗಾಲ ಸ್ಥಿತಿ ಗಂಭೀರವಾಗಿದೆ. ಜನ-ಜಾನುವಾರುಗಳ ಬದುಕು ಕಷ್ಟವಾಗುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಪರಿಹಾರ ಕಾರ್ಯ ಕೈಗೊಳ್ಳಬೇಕು. ಸರ್ಕಾರ ಹಣ ದೊರಕಿಸಿ ಸುಮ್ಮನೆ ಇರಬಾರದು. ಅನುಷ್ಠಾನದ ಬಗ್ಗೆ ಗಮನಹರಿಸಬೇಕು. ಅಂದಾಗ ಕಷ್ಟದಲ್ಲಿರುವ ಜನತೆಗೆ ಸಹಾಯವಾಗುತ್ತದೆ ಎಂದು ತಿಳಿಸಿದರು.
ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು, ಗುತ್ತಿಗೆದಾರ ಕೇಶವರೆಡ್ಡಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.