ADVERTISEMENT

ರಸಪ್ರಶ್ನೆ: ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

ರಾಯಚೂರು: ರಸಪ್ರಶ್ನೆ ಎಂಬುದು ಕೇವಲ ತರಗತಿಗೆ ಮಾತ್ರ ಸೀಮಿತವಲ್ಲ. ಪಠ್ಯೇತರ ಚಟುವಟಿಕೆಯಾಗಿಯೂ ಉಪಯುಕ್ತವಾಗಿದೆ. ರಸಪ್ರಶ್ನೆಯ ಬಗ್ಗೆ ಆಸಕ್ತಿ ಹೊಂದಿರುವ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ವನ್ನು ಶಿಕ್ಷಕರು ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿ ಕಾರ್ಜುನ ಹೇಳಿದರು. ಇಲ್ಲಿನ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನ ಶಿಕ್ಷಣ ಟ್ರಸ್ಟ್ ರಾಯಚೂರು ಜಿಲ್ಲೆ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮವನ್ನ್ನು ಉದ್ಘಾಟಿಸಿ ಮಾತನಾಡಿದರು.

ಶಾಲಾ ಮಕ್ಕಳಲ್ಲಿ ಸಾಮಾನ್ಯ ಜ್ಞಾನದ ಹೆಚ್ಚಿಸುವ ದಿಶೆಯಲ್ಲಿ ರಸಪ್ರಶ್ನೆ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಮುಖ್ಯ ಅತಿಥಿಯಾಗಿದ್ದ ವಿಜ್ಞಾನ ವಿಷಯ ಪರಿವೀಕ್ಷಕ ಎಸ್.ಕೆ.ಎಂ. ಪೀರಜಾದೆ ಹೇಳಿದರು. ರಸಪ್ರಶ್ನೆ ಎಂಬುದು ಮಕ್ಕಳು ಸ್ವಯಂ ಪ್ರೇರಿತ ಕಲಿಕೆಗೆ ಪ್ರೋತ್ಸಾಹ ನೀಡುತ್ತದೆ. ತಾವೇ ಹೊಸ ವಿಚಾರಗಳ ಬಗ್ಗೆ ಅರಿಯುವ ಪ್ರಯತ್ನ ಮಾಡುತ್ತಾರೆ. ಇದರಿಂದ ಕಲಿಕೆಯೂ ಅರ್ಥಪೂರ್ಣವಾಗಿರುತ್ತದೆ ಎಂದು ಮತ್ತೊಬ್ಬ ಅತಿಥಿ, ಗಣಿತ ವಿಷಯ ಪರಿವೀಕ್ಷಕ ಮಲ್ಲಯ್ಯ ನಾಗೋಲಿ ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಜ್ಞಾನ ಕೇಂದ್ರದ ಗೌರವ ಕಾರ್ಯದರ್ಶಿ ಪ್ರೊ ಸಿ.ಡಿ ಪಾಟೀಲ್, ವಿದ್ಯಾರ್ಥಿಗಳು ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮುಕ್ತವಾಗಿ ಪಾಲ್ಗೊಂಡು ತಮ್ಮ ಬುದ್ಧಿಮಟ್ಟ ಹೆಚ್ಚಿಸಿಕೊಳ್ಳಬೇಕು. ನಿರ್ಣಾಯಕರು ನ್ಯಾಯಯುತವಾಗಿ ತೀರ್ಮಾನಿಸಿ ಮಕ್ಕಳ ಪ್ರತಿಭೆ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಬಸಪ್ಪ ಗದ್ದಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ಗ್ರಾಮೀಣ ಭಾಗದ 5 ಹಾಗೂ ನಗರ ಪ್ರದೇಶದ 5 ತಂಡ ಸೇರಿ ಒಟ್ಟು 10 ವಿದ್ಯಾರ್ಥಿ ತಂಡಗಳು ಪಾಲ್ಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT