ADVERTISEMENT

ರಾಯಚೂರು ನಗರಸಭೆ ವಿಸರ್ಜನೆಗೆ ಶಿಫಾರಸ್ಸು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 5:30 IST
Last Updated 16 ಮಾರ್ಚ್ 2012, 5:30 IST

ರಾಯಚೂರು: ರಾಯಚೂರು ನಗರಸಭೆಯಲ್ಲಿ ನಡೆದಿದೆ ಎನ್ನಲಾದ ವ್ಯವಹಾರ ಕುರಿತ ದೂರುಗಳ ಬಗ್ಗೆ ಪೌರಾಡಳಿತ ನಿರ್ದೇಶನಾಲಯ ಪರಿಶೀಲನಾ ತಂಡ ನೀಡಿದ ವರದಿ, ಪುರಸಭೆ ತಹಸೀಲದಾರರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ವರದಿ ಅಂಶಗಳ ಹಿನ್ನೆಲೆಯಲ್ಲಿ ರಾಯಚೂರು ನಗರಸಭೆ ವಿಸರ್ಜಿಸಿ ಆಡಳಿತಾಧಿಕಾರಿಯನ್ನು ನೇಮಿಸುವುದು ಸೂಕ್ತ ಎಂದು ರಾಜ್ಯ ಪೌರಾಡಳಿತ ನಿರ್ದೇಶನಾಲಯದ ಆಯುಕ್ತರು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಿಗೆ `ಶಿಫಾರಸ್ಸು~ ಮಾಡಿ ಪತ್ರ ಬರೆದಿದ್ದಾರೆ.

ಮಾರ್ಚ್ 1ರಂದೇ ಆಯುಕ್ತರು ಈ ಪತ್ರ ಬರೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಯಚೂರು ನಗರಸಭೆಯು ಪ್ರತಿ ತಿಂಗಳು ಸಾಮಾನ್ಯ ಸಭೆ ನಡೆಸಿ ಜನರ ಸಮಸ್ಯೆಗಳಿಗೆ ಸ್ಪಂದಿಸದೇ ವಿಫಲಗೊಂಡು ಕರ್ನಾಟಕ ಪುರಸಭೆ ಕಾಯ್ದೆ 1964ರ ಕಲಂ 47(1)ನ್ನು ಉಲ್ಲಂಘಿಸಿರುತ್ತದೆ ಎಂದು ಶಿಫಾರಸ್ಸು ಪತ್ರದಲ್ಲಿ ಹೇಳಿದ್ದಾರೆ.

ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳುವಲ್ಲಿಯೂ ವಿಫಲಗೊಂಡಿರುತ್ತದೆ.  ಈ ಎಲ್ಲ ಕಾರಣಗಳಿಂದಾಗಿ  ಕರ್ನಾಟಕ ಪುರಸಭೆಯ 1964ರ ಕಲಂ 316ರ ಪ್ರಕಾರ ರಾಯಚೂರು ನಗರಸಭೆಯನ್ನು ವಿಸರ್ಜಿಸಿ ಆಡಳಿತಾಧಿಕಾರಿಯನ್ನು  ನೇಮಿಸುವುದು ಸೂಕ್ತವಾಗಿದೆ ಎಂದು ಪೌರಾಡಳಿತ ನಿರ್ದೇಶನಾಲಯ ಆಯುಕ್ತರು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಿಗೆ ಬರೆದ ಶಿಫಾರಸ್ಸು ಪತ್ರದಲ್ಲಿ ತಿಳಿಸಿದ್ದಾರೆ.

ಪತ್ರಕ್ಕೆ ಉಲ್ಲೇಖ: ಇದಕ್ಕೆ  ಡಿಸೆಂಬರ್-27-2011ರಂದು ರಾಜ್ಯ ಪೌರಾಡಳಿತ ನಿರ್ದೇಶನಾಲಯ ತಂಡವು ರಾಯಚೂರು ನಗರಸಭೆಗೆ ಭೇಟಿ ನೀಡಿ ತಪಾಸಣೆ ನಡೆಸಿ ಬಳಿಕ ಸಲ್ಲಿಸಿರುವ ವರದಿ, ಪುರಸಭೆ ತಹಸೀಲ್ದಾರರು ರಾಯಚೂರು ಜಿಲ್ಲಾಧಿಕಾರಿಗಳಿಗೆ ಡಿಸೆಂಬರ್ 15- 2011ರಂದು ಸಲ್ಲಿಸಿದ ವರದಿ ಹಾಗೂ ಫೆಬ್ರುವರಿ 29-2012ರಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಲ್ಲಿಸಿದ ವರದಿಯ ಅಂಶಗಳನ್ನು ಪತ್ರದಲ್ಲಿ ಆಯುಕ್ತರು ಉಲ್ಲೇಖಿಸಿದ್ದಾರೆ.

ಪತ್ರದ ವಿವರಣೆ: ನಗರಸಭಾ ನಿಧಿಯಿಂದ ತೆಗೆದುಕೊಂಡ ಕಾಮಗಾರಿಗಳಿಗೆ ಕ್ರಿಯಾ ಯೋಜನೆಯನ್ನು ತಯಾರಿಸದೇ ಟೆಂಡರ್ ಕರೆದಿರುವುದು ನಿಯಮಬಾಹಿರವಾಗಿರುತ್ತದೆ. ನಗರಸಭಾ ನಿಧಿಯಲ್ಲಿ  52.97 ಲಕ್ಷಗಳ ಮೊತ್ತ ಇದ್ದು, ಆದರೆ, 351 ಲಕ್ಷಗಳ ಕಾಮಗಾರಿಗಳನ್ನು ತೆಗೆದುಕೊಳ್ಳಲು ಟೆಂಡರ್ ಕರೆದಿರುತ್ತಾರೆ. ಇದು ಸುತ್ತೋಲೆ ವ್ಯತಿರಿಕ್ತವಾಗಿರುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ನಗರಸಭೆಯ ಶೇ 22.75ರ ಯೋಜನೆ ಅನುದಾನದಡಿಯಲ್ಲಿ 2008ರಿಂದ 2011ನೇ ಸಾಲಿನಲ್ಲಿ ಕಾನೂನು ಉಲ್ಲಂಘನೆ ಮಾಡಿ ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ರಾಯಚೂರು ನಗರಸಭೆಗೆ ಬಿಡುಗಡೆಯಾದ 3,000 ಲಕ್ಷ ಅನುದಾನದಡಿ 53 ಕಾಮಗಾರಿಗಳಿಗೆ ಕ್ರಿಯಾ ಯೋಜನೆಗೆ ಅನುಮೋದನೆ ದೊರತಿದ್ದು, ಇಲ್ಲಿಯವರೆಗೂ 1200.77 ಲಕ್ಷ ಮಾತ್ರ ಖರ್ಚಾಗಿದ್ದು, ಒಟ್ಟು 27 ಕಾಮಗಾರಿಗಳು ಪೂರ್ಣಗೊಂಡಿರುತ್ತದೆ.

  ಜನವರಿ 2012ರ ಅಂತ್ಯದವರೆಗೆ ಈ ಯೋಜನೆಯ ಕಾಮಗಾರಿಗಳು ಮಂದಗತಿಯಲ್ಲಿರುತ್ತದೆ ಎಂದು ತಮಗೆ ಸಲ್ಲಿಸಿದ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.ತೆರಿಗೆ ವಸೂಲಾತಿಯಲ್ಲಿ 2012ರ ಜನವರಿ  ಅಂತ್ಯದವರೆಗೆ  ಒಟ್ಟು ವಸೂಲಾತಿ ಬೇಡಿಕೆ  212 ಲಕ್ಷ ಇದ್ದು, ಶೇ 72.13 ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ನಿಗದಿತ ಗುರಿ ತಲುಪುವಲ್ಲಿ ವಿಫಲಗೊಂಡಿದೆ.

ಅದೇ ರೀತಿ ನಗರಸಭೆಯ ನೀರಿನ ತೆರಿಗೆ (ಬೇಡಿಕೆ ವಸೂಲಾತಿ ಮತ್ತು ಬಾಕಿ)  ಬೇಡಿಕೆ  ಒಟ್ಟು 110.13 ಲಕ್ಷ ರಷ್ಟು ಇದ್ದು, ಇದರಲ್ಲಿ ಶೇ 57.03ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ನಿಗದಿತ ಗುರಿ ತಲುಪುವಲ್ಲಿ ವಿಫಲವಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ. ಹೀಗೆ ಒಟ್ಟು 8 ಪ್ರಮುಖ ಅಂಶಗಳ ಬಗ್ಗೆ ವಿವರಿಸಿರುವ ಆಯುಕ್ತರು ರಾಯಚೂರು ನಗರಸಭೆ ವಿಸರ್ಜನೆಗೆ ಶಿಫಾರಸ್ಸು ಪತ್ರ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.