ADVERTISEMENT

‘ರಾಯಚೂರು ನಗರ ಕ್ಷೇತ್ರಕ್ಕೆ ಮುಸ್ಲಿಮರಿಗೆ ಆದ್ಯತೆ ನೀಡಿ’

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 9:35 IST
Last Updated 16 ಮಾರ್ಚ್ 2018, 9:35 IST

ಲಿಂಗಸುಗೂರು: ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಮೊದಲಿನಂತೆ ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದವರಿಗೆ ಟಿಕೆಟ್‌ ನೀಡ ಬೇಕು’ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಮುಖಂಡ ಬಸವರಾಜ ಪಾಟೀಲ ಅನ್ವರಿ ಒತ್ತಾಯಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಚೆಗೆ ರಾಯಚೂರು ಜಿಲ್ಲೆ ಕೆಲ ಕ್ಷೇತ್ರಗಳಲ್ಲಿನ ಆಕಾಂಕ್ಷಿ ಅಭ್ಯರ್ಥಿಗಳ ಆದ್ಯತೆ ಪಟ್ಟಿ ಪ್ರಕಟಗೊಂಡಿದೆ. ಜಿಲ್ಲೆಯ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಮಾದಿಗ, ಛಲವಾದಿ ಬೆಂಬಲಿತ ಸಮುದಾಯದ ಅಸ್ಪೃಶ್ಯರ ಹೆಸರು ಸೇರ್ಪಡೆ ಮಾಡಿದ್ದು ಸ್ವಾಗತಾರ್ಹ ಕ್ರಮವಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

‘ಆದರೆ, ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿ ಜೊತೆ ಹಿಂದುಳಿದ ವರ್ಗಗಳ ಕೆಲವರ ಹೆಸರು ಶಿಫಾರಸು ಆಗಿರುವುದು ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡಿದಂತಾಗಿದೆ. ಎಂತಹದೆ ಕಠಿಣ ಪರಿಸ್ಥಿತಿ ಎದುರಾದರೂ ಮುಸ್ಲಿಂ ಸಮುದಾಯ ಕೈಬಿಡಬಾರದು. ಹೈಕಮಾಂಡ್‌ ನಿರ್ಲಕ್ಷ್ಯ ವಹಿಸಿದಲ್ಲಿ ಪಕ್ಷಕ್ಕೆ ಜಿಲ್ಲೆಯಲ್ಲಿ ಭಾರಿ ಹಿನ್ನಡೆ ಆಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ರಾಜ್ಯ ಸರ್ಕಾರ ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಹರಿಸುವಲ್ಲಿ ಅನುಸರಿಸುತ್ತಿರುವ ತಂತ್ರಗಾರಿಕೆ ಪಕ್ಷದ ಮೇಲೆ ಕೆಟ್ಟ ಪರಿಣಾಮ ಬೀಳುವ ಸಾಧ್ಯತೆಗಳು ಹೆಚ್ಚಾಗಿವೆ. ಹೋರಾಟ ನಡೆಸಿದಾಗ ನೀರು ಹರಿಸುತ್ತಿರುವ ಪದ್ಧತಿ ವಿರೋಧ ಪಕ್ಷಗಳಿಗೆ ಅಸ್ತ್ರವಾಗುವ ಸಾಧ್ಯತೆಗಳಿವೆ. ನೀರಿನ ಲಭ್ಯತೆ ಆಧರಿಸಿ ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.