ADVERTISEMENT

ರೈತರಿಗೆ ಬಡ್ಡಿ ರಹಿತ ಸಾಲ ನೀಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 6:41 IST
Last Updated 24 ಸೆಪ್ಟೆಂಬರ್ 2013, 6:41 IST

ಮಸ್ಕಿ: ರೈತರ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಪಹಣಿ ಇರುವ ಎಲ್ಲ ರೈತರಿಗೂ ಬಡ್ಡಿ ರಹಿತ ಸಾಲ ನೀಡುವಂತೆ ನಾಗಲಾಪುರ ಜಿಲ್ಲಾ ಪಂಚಾಯಿತಿ ಸದಸ್ಯ ಮಹಾದೇವಪ್ಪ­ಗೌಡ ಪೊ. ಪಾಟೀಲ ಸೋಮವಾರ ಸಲಹೆ ನೀಡಿದರು.

ಪಟ್ಟಣದ ವೆಂಕಟೇಶ್ವರ ದೇವಸ್ಥಾನ­ದಲ್ಲಿ ನಡೆದ ರೈತರ ಸೇವಾ ಸಹಕಾರಿ ಬ್ಯಾಂಕ್‌ನ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ ರೈತರಿಗಾಗಿ ಸರ್ಕಾರ ಬಡ್ಡಿ ರಹಿತ ಸಾಲ ಯೋಜನೆ ಜಾರಿಗೆ ತಂದಿದೆ. ಆದರೆ, ಈ ಸಾಲ ಸೌಲಭ್ಯ ಎಲ್ಲಾ ರೈತರಿಗೆ ಮುಟ್ಟುವಂತೆ ಆಗಬೇಕು ಎಂದರು. ಸಹಕಾರಿ ಬ್ಯಾಂಕ್‌ 9 ಲಕ್ಷ ರೂಪಾಯಿ ನಿವ್ವಳ ಲಾಭಗಳಿಸಿ­ರುವುದು ಹೆಮ್ಮೆಯ ಸಂಗತಿ ಎಂದರು.

ಯಶಸ್ವಿನಿ ಯೋಜನೆ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ರೈತರು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಬ್ಯಾಂಕ್‌ನ ಅಧ್ಯಕ್ಷ ಎಂ. ಶಿವಶರಣ ಮಾತನಾಡಿ ಸಹಕಾರಿಯಲ್ಲಿ 2700 ಶೇರುದಾರರಿದ್ದು ಅದರಲ್ಲಿ 1200 ಜನ ರೈತರು ಪಹಣಿಹೊಂದಿದ್ದಾರೆಂದರು. 23 ಲಕ್ಷ ರೂ. ಶೇರು ಬಂಡವಾಳ ಇದೆ ಎಂದ ಅವರು ಸರ್ಕಾರದ ಬಡ್ಡಿ ರಹಿತ ಸಾಲ ಯೋಜನೆ ಮೂಲಕ ಅರ್ಹ ರೈತರಿಗೆ ಇದುವರೆಗೆ 1 ಕೋಟಿ 50 ಲಕ್ಷ ರೂಪಾಯಿ ವಿತರಿಸಲಾಗಿದೆ ಎಂದರು.

ಸಾಲ ವಸೂಲಾತಿಯಲ್ಲಿ ಶೇ. 96ರಷ್ಟು ಗುರಿ ತಲುಪಿದ್ದು ಬ್ಯಾಂಕ್‌ 9 ಲಕ್ಷ 21 ಸಾವಿರ ರೂ. ನಿವ್ವಳ ಲಾಭ ಗಳಿಸಿದೆ ಎಂದರು. ಆಡಳಿತ ಮಂಡಳಿ ಹಾಗೂ ಶೇರುದಾರರ, ರೈತರ ಸಹಕಾರ ಬ್ಯಾಂಕ್‌ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ಬ್ಯಾಂಕ್‌ನ ಮಾಜಿ ಅಧ್ಯಕ್ಷ ಬಸನಗೌಡ ಪೊ. ಪಾಟೀಲ, ಬ್ಯಾಂಕ್‌ ವ್ಯವಸ್ಥಾಪಕ ಬಿ.ಜಿ. ನಾಯಕ ಮಾತನಾಡಿದರು. ರೈತರ ಸೇವಾ ಸಹಕಾರಿ ಬ್ಯಾಂಕ್‌ ಅಸ್ತಿತ್ವಕ್ಕೆ ಬಂದ ನಂತರ ಅಧ್ಯಕ್ಷರಾಗಿ ಸೇವೆ ಸಲ್ಲಿದ 11 ಜನ ಮಾಜಿ ಅಧ್ಯಕ್ಷರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.

ಬ್ಯಾಂಕ್‌ನ ಅಡಳಿತ ಮಂಡಳಿ ಸದಸ್ಯರಾದ ಮೌನೇಶ ನಾಯಕ, ಮಂಜುನಾಥ ಸಾಲಿಮಠ, ಮಂಜುನಾಥಗೌಡ, ಬಸ್ಸಪ್ಪ ಬ್ಯಾಳಿ, ಕರಿಯಪ್ಪ ಕೊಡ್ಲಿ, ಶಾಂತಮಲ್ಲಯ್ಯ, ಬಸವರಾಜಪ್ಪ ಹುಲ್ಲೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.