ADVERTISEMENT

ರೈತರ ಸಂಘಟಿತ ಹೋರಾಟ ಅಗತ್ಯ

ರೈತ ಸಂಘದ ಸಭೆಯಲ್ಲಿ ಜಡಿಯಪ್ಪ ದೇಸಾಯಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 10:29 IST
Last Updated 13 ಮಾರ್ಚ್ 2018, 10:29 IST

ಸಿಂಧನೂರು: ‘ಹಲವಾರು ವರ್ಷಗಳಿಂದ ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ಪಕ್ಷಗಳು ಭರವಸೆಗಳನ್ನು ನೀಡಿ ವಂಚನೆ ಮಾಡುತ್ತಲೇ ಬಂದಿವೆ. ಅನ್ಯಾಯ ತಡೆಯಲು ರೈತರು ಸಂಘಟಿತ ಹೋರಾಟಕ್ಕೆ ಸಿದ್ಧರಾಗಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಉಪಾ ಧ್ಯಕ್ಷ ಜಡಿಯಪ್ಪ ದೇಸಾಯಿ ಹೇಳಿದರು.

ನಗರದ ಕಮ್ಮವಾರಿ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೈತ ಸಂಘದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಜಾಗತೀಕರಣದ ಪರಿಣಾಮವಾಗಿ ರೈತರ ಸ್ಥಿತಿ ಚಿಂತಾಜನಕವಾಗಿದೆ. ಬೆಳೆದ ಬೆಳೆಗೆ ಬೆಲೆ ಇಲ್ಲವಾಗಿದೆ. ಬೀಜ, ರಸಗೊಬ್ಬರದ ದರಗಳು ಗಗನಕ್ಕೇರಿರು ವುದರಿಂದ ಕಂಪನಿ ಗಳ ಲಾಭಕ್ಕಾಗಿಯೇ ರೈತರು ದುಡಿಯಬೇಕಾದ ಪರಿಸ್ಥಿತಿ ಬಂದಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ರೈತರ ಸಾಲಮನ್ನಾ, ಕೃಷಿಭಾಗ್ಯ, ಪ್ರತ್ಯೇಕ ಕೃಷಿ ಬಜೆಟ್ ಇಂತಹ ಹಲವಾರು ಯೋಜನೆಗಳ ಮೂಲಕ ರೈತರನ್ನು ಉದ್ಧಾರ ಮಾಡುವ ನೆಪ ಹೇಳುತ್ತಿರುವ ಸರ್ಕಾರಗಳು ಸ್ವಾಮಿನಾಥನ್ ವರದಿಯನ್ನು ಅನುಷ್ಠಾನಗೊಳಿಸಲು ಹಿಂಜರಿಯುತ್ತಿರುವುದು ಏಕೆ’ ಎಂದು ಪ್ರಶ್ನಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಮೂರು ವರ್ಷ ಗತಿಸಿದರೂ ಇಲ್ಲಿಯವರೆಗೆ ರೈತರ ಪರವಾದ ಯಾವುದೇ ರಚನಾತ್ಮಕ ಯೋಜನೆಗಳನ್ನು ಹಮ್ಮಿಕೊಳ್ಳದೆ ರೈತರಿಗೆ ಮೋಸ ಮಾಡಿದ್ದಾರೆ. ಅಲ್ಲದೆ ರೈತರ ಸಾಲಮನ್ನಾ ಮಾಡಲು ಹಿಂದೇಟು ಹಾಕಿ, ಕಾರ್ಪೋರೇಟ್ ಸಂಸ್ಥೆಗಳ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡಿದ್ದಾರೆ’ ಎಂದು ದೂರಿದರು.

ಹೈದರಾಬಾದ್ ಕರ್ನಾಟಕದ ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ ಹೊಳೆಯಾಚೆ, ರಾಜ್ಯ ಸಮಿತಿ ಸದಸ್ಯರಾದ ಸಿದ್ಧಲಿಂಗೇಶಗೌಡ, ಜಿಲ್ಲಾ ಸಮಿತಿ ಸಂಚಾಲಕಿ ಮಾಧವಿ ಶ್ರೀನಿವಾಸ, ಜಿಲ್ಲಾ ಘಟಕದ ಅಧ್ಯಕ್ಷ ವಾಸುದೇವ ಮೇಟಿ, ರಾಯಚೂರು ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ರಡ್ಡಿ, ಲಿಂಗಸುಗೂರು ತಾಲ್ಲೂಕು ಘಟಕದ ಅಧ್ಯಕ್ಷ ಬಸನಗೌಡ ಪಾಟೀಲ್, ಮಸ್ಕಿ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಡಿ.ಜಿ.ನಾಯಕ ಮತ್ತು ಸಿಂಧನೂರು ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಶರಣಪ್ಪ ಜಂಗಮರಹಟ್ಟಿ ಮಾತನಾಡಿದರು.

ಪದಾಧಿಕಾರಿಗಳ ಆಯ್ಕೆ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಿಂಧನೂರು ತಾಲ್ಲೂಕು ಘಟಕಕ್ಕೆ ಎಂ.ಶರಣಪ್ಪ ಜಂಗಮರಹಟ್ಟಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಹುಲಗಪ್ಪ ತಿಮ್ಮಾಪುರ, ನಾಗರಾಜ ಸೋಮಲಾಪುರ, ಶಿವರಾಜ ಸಾಸಲಮರಿ , ಶರಣೇಗೌಡ ಎಲೆಕೂಡ್ಲಿಗಿ (ಉಪಾಧ್ಯಕ್ಷರು), ಮಂಜುನಾಥ ಮುದ್ದಾಪುರ (ಕಾರ್ಯದರ್ಶಿ), ಮಂಜುನಾಥ ಹಾರಾಪುರ (ಸಂಘಟನಾ ಕಾರ್ಯದರ್ಶಿ), ನಿರುಪಾದೆಪ್ಪ ಅಡ್ಡಿ (ಖಜಾಂಚಿ), ಸುಕುಮುನಿಸ್ವಾಮಿ ಮಾಟೂರು (ಸಂಚಾಲಕ), ನಾಗಮ್ಮ ಹಂಚಿನಾಳ (ಮಹಿಳಾ ಘಟಕದ ಅಧ್ಯಕ್ಷೆ), ಶಿವಮ್ಮ ಮಸ್ಕಿ (ಉಪಾಧ್ಯಕ್ಷೆ) ಅವರನ್ನು ನೇಮಕ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.