ADVERTISEMENT

ರೋಗಗ್ರಸ್ತ ಕೆರೆಗೆ ಚಿಕಿತ್ಸೆ ನೀಡದ ವೈದ್ಯರು!

ಅತಿಕ್ರಮಣಕ್ಕೆ ಕಡಿವಾಣ ಹಾಕದ ಜನಪ್ರತಿನಿಧಿಗಳು, ಅಧಿಕಾರಿಗಳು

ನಾಗರಾಜ ಚಿನಗುಂಡಿ
Published 28 ಮೇ 2018, 9:36 IST
Last Updated 28 ಮೇ 2018, 9:36 IST
ರಾಯಚೂರಿನ ಮಾವಿನ ಕೆರೆಯಲ್ಲಿ ಸತ್ತು ಬಿದ್ದಿರುವ ಮೀನುಗಳು
ರಾಯಚೂರಿನ ಮಾವಿನ ಕೆರೆಯಲ್ಲಿ ಸತ್ತು ಬಿದ್ದಿರುವ ಮೀನುಗಳು   

ರಾಯಚೂರು: ನಗರದ ಮಧ್ಯ ಭಾಗದಲ್ಲಿರುವ ಮಾವಿನಕೆರೆಯು ರೋಗ ಹರಡುವ ತಾಣವಾಗಿ ಬದ ಲಾದರೂ ಅದನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾಡುತ್ತಿಲ್ಲ.

ಕೆರೆಗೆ ಹೊಂದಿಕೊಂಡ ಉದ್ಯಾನದ ಭಾಗದಲ್ಲಿ ಮಾತ್ರ ಬಂಡುಗಳನ್ನು ನಿರ್ಮಿಸಲಾಗಿದೆ. ಶೇ 80ರಷ್ಟು ಕೆರೆಯ ಭಾಗಕ್ಕೆ ಬಂಡು ಇಲ್ಲ. ನಗರಸಭೆಯು ಕೆರೆ ಸಂರಕ್ಷಣೆಯ ಹೊಣೆಗಾರಿಕೆಯನ್ನು ಕಡತಗಳಲ್ಲಿ ಮಾತ್ರ ಮಾಡುತ್ತಾ ಬರುತ್ತಿದೆ. ಅತಿಕ್ರಮಣಕ್ಕೆ ಖೊಟ್ಟಿ ದಾಖಲೆಗಳನ್ನು ಮಾಡಿಕೊಂಡು ಬರುವವರಿಗೆ ತೆರೆಮರೆಯಲ್ಲಿ ನಗರಸಭೆ ಅಧಿಕಾರಿಗಳೇ ಮೊಹರು ಹಾಕುತ್ತಿದ್ದಾರೆ ಎನ್ನುವ ಆರೋಪ ಸಾಮಾನ್ಯವಾಗಿದೆ. ಕೆರೆಗೆ ಗಡಿಯನ್ನು ಗುರುತಿಸಿ ಅತಿಕ್ರಮಣ ತಡೆಯುವ ಕೆಲಸ ಮಾಡುತ್ತಿಲ್ಲ.

ಕೆರೆ ಸಂರಕ್ಷಣೆ ಮಾಡದಿರುವುದು ಒಂದೆಡೆಯಾದರೆ, ಅದು ರೋಗಗ್ರಸ್ತ ವಾಗಿರುವುದನ್ನು ಯಾರೂ ಗಂಭೀರ ವಾಗಿ ಪರಿಗಣಿಸಿಲ್ಲ. ಕೆರೆಯಲ್ಲಿ ನೀರು ಕಡಿಮೆಯಾಗಿ ಮೀನುಗಳು ಸತ್ತು ಬಿದ್ದಿವೆ. ಮೊದಲೇ ದುರ್ನಾತ ಹರಡಲು ಕಾರಣವಾದ ಕೊಳಚೆ ನೀರಿನೊಂದಿಗೆ ಮೀನುಗಳ ದುರ್ಗಂಧವು ಈಗ ಸೇರ್ಪಡೆಯಾಗಿದೆ. ಕೆರೆ ಸಮೀಪ ಹೋದವರಿಗೆ ವಾಕರಿಕೆ ಬರುತ್ತಿದೆ. ಸುತ್ತಮುತ್ತಲಿನ ಬಡಾ ವಣೆಗಳ ಜನರ ಬವಣೆ ಹೇಳತಿರದು. ಶುದ್ಧ ಗಾಳಿಯಿಲ್ಲದೆ ಪರೋಕ್ಷವಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ADVERTISEMENT

ಕೆರೆಯ ಕೊಳಚೆ ನೀರಿನಲ್ಲಿ ಸೊಳ್ಳೆಗಳ ಉತ್ಪತ್ತಿ ನಿರಂತರವಾಗಿದೆ. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿಷ್ಪತ್ತಿ ಮಾಡಬೇಕಿದ್ದ ಜಿಲ್ಲಾ ಆರೋಗ್ಯ ಇಲಾಖೆ ಕೂಡಾ ನಗರಸಭೆಯ ಜೊತೆ ಗೂಡಿ ನಿದ್ದೆಗೆ ಜಾರಿದೆ ಎನ್ನುವುದು ಜನರ ಆರೋಪ.

ಡೆಂಗಿ, ಮಲೇರಿಯಾ ಹರಡದಂತೆ ಕೆರೆಯ ಭಾಗದಲ್ಲಿ ಕೈಗೊಳ್ಳಬೇಕಿದ್ದ ಮುನ್ನಚ್ಚರಿಕೆ ಕ್ರಮಗಳು ಕಡತಕ್ಕೆ ಸೀಮಿತವಾಗಿವೆ. ಸೊಳ್ಳೆ ನಿಷ್ಪತ್ತಿಗಾಗಿ ಫಾಗಿಂಗ್ ಮಾಡಿಸುತ್ತಿಲ್ಲ. ಫಾಗಿಂಗ್ ಯಂತ್ರ ಖರೀದಿ ಮಾಡಲಾಗುತ್ತದೆ ಎನ್ನುವ ಆಶ್ವಾಸನೆಯನ್ನು ನಗರಸಭೆ ಅಧಿಕಾರಿಗಳು ಹಲವು ವರ್ಷಗಳಿಂದ ಹೇಳುತ್ತಾ ಬರುತ್ತಿದ್ದಾರೆ.

ಕೆರೆಯ ಅಂಗಳವನ್ನು ಕೊಳಚೆ ಪ್ರದೇಶ ವಿಸ್ತರಿಸಿಕೊಳ್ಳುವುದಕ್ಕೂ ಅತಿ ಕ್ರಮಣ ಮಾಡುತ್ತಿದ್ದಾರೆ. ಅಲ್ಲದೆ, ಬಲಾಢ್ಯರು ಕೂಡಾ ದೊಡ್ಡ ದೊಡ್ಡ ಕಟ್ಟಡಗಳನ್ನು ನಿರ್ಮಿಸಿಕೊಳ್ಳುವುದಕ್ಕೆ ಎಡೆಮಾಡಿದೆ. ಅತಿಕ್ರಮಣವು ಕಣ್ಣು ಮುಂದೆ ನಡೆದರೂ ನಗರಸಭೆ ಸದಸ್ಯರು ಮೌನವಹಿಸಿದ್ದಾರೆ.

ಶಾಸಕ, ಜಿಲ್ಲಾಧಿಕಾರಿ ಇಬ್ಬರೂ ವೈದ್ಯರು

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಮತ್ತು ಶಾಸಕ ಡಾ.ಶಿವರಾಜ ಪಾಟೀಲ ಇಬ್ಬರೂ ವೈದ್ಯರು. ಜನರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ ಎನ್ನುವ ಸಾಮಾನ್ಯ ನಿರೀಕ್ಷೆ ಜನರಲ್ಲಿದೆ.

ರೋಗಗ್ರಸ್ತವಾಗಿರುವ ಮಾವಿನ ಕೆರೆ ಅಭಿವೃದ್ಧಿ ಮಾಡಿ, ಆರೋಗ್ಯವಂತ ಪರಿಸರ ನಿರ್ಮಿಸುತ್ತಾರೆ ಎನ್ನುವ ಜನರ ಆಸೆಯೂ ಕಳೆದ ಹಣಕಾಸು ವರ್ಷ ಸಾಧ್ಯವಾಗಿಲ್ಲ. ಈಗಲಾದರೂ ಇಬ್ಬರೂ ವೈದ್ಯರು ಸುಂದರ ಮತ್ತು ನಿರ್ಮಲವಾದ ಕೆರೆ ಮಾಡಿಕೊಡಬೇಕು ಎನ್ನುವುದು ಜನರ ಬೇಡಿಕೆ.

**
ಮಾವಿನ ಕೆರೆ ಸಮಗ್ರ ಅಭಿವೃದ್ಧಿಗಾಗಿ ದೂರದೃಷ್ಟಿ ಯೋಜನೆಯೊಂದನ್ನು ರೂಪಿಸಲಾಗಿದ್ದು, ಅನುದಾನಕ್ಕಾಗಿ ಎಚ್ ಕೆಆರ್‌ಡಿಬಿಗೆ ಪ್ರಸ್ತಾವ ಸಲ್ಲಿಸಲಾಗುವುದು 
ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.