ADVERTISEMENT

ವಲಸಿಗರಿಗೆ ಮಣೆ ಹಾಕಬೇಡಿ: ಸುಂಕಾರಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 10:10 IST
Last Updated 8 ಏಪ್ರಿಲ್ 2013, 10:10 IST

ರಾಯಚೂರು: ಲಿಂಗಸುಗೂರು ಪರಿಶಿಷ್ಟ ಜಾತಿ ಮೀಸಲು ವಿಧಾನ ಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದ ಏಕೈಕ ಅಭ್ಯರ್ಥಿ ತಾವಾಗಿದ್ದು, ಕೊನೆ ಗಳಿಗೆಯಲ್ಲಿ ಬೇರೆ ಪಕ್ಷದಿಂದ ಬಿಜೆಪಿ ಟಿಕೆಟ್ ಬಯಸಿ ಬರುವವರಿಗೆ ಬಿಜೆಪಿ ಪಕ್ಷದ ರಾಜ್ಯ ಮುಖಂಡರು ಮಣೆ ಹಾಕುವ ಆತಂಕ ಈಗ ಎದುರಾಗಿದೆ. ಪಕ್ಷ ಸಂಘಟನೆಗೆ ಶ್ರಮಿಸಿದ ತಮ್ಮನ್ನು ಉಪೇಕ್ಷೆ ಮಾಡಿ ಬೇರೆ ಪಕ್ಷದಿಂದ ವಲಸೆ ಬರುವವರಿಗೆ ಟಿಕೆಟ್ ಕೊಡಬಾರದು ಎಂದು ಬಿಜೆಪಿ ಮುಖಂಡ ಜಗನ್ನಾಥ ಸುಂಕಾರಿ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ವಂಚಿತರಾದ ಟಿ.ಆರ್ ನಾಯಕ ಹಾಗೂ ಡಿ.ಎಸ್ ಹೂಲಗೇರಿ ಅವರು ಬಿಜೆಪಿ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. ತಮ್ಮ ಪಕ್ಷದ ರಾಜ್ಯ ಮುಖಂಡರ ಜೊತೆ ಚರ್ಚೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ಈವರೆಗೂ ಬಿಜೆಪಿ ಪಕ್ಷದ ಏಕೈಕ ಅಭ್ಯರ್ಥಿಯಾಗಿದ್ದ ತಮಗೆ ಆತಂಕ ಶುರುವಾಗಿದೆ ಎಂದು ತಿಳಿಸಿದರು.

ತಮ್ಮನ್ನು ಬಿಟ್ಟರೆ ಲಿಂಗಸುಗೂರು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಲ್ಲಿ ಬೇರೆಯವರು ಟಿಕೆಟ್ ಕೇಳಿಲ್ಲ. ಬದಲಾಗಿ ಟಿಕೆಟ್ ಆಕಾಂಕ್ಷಿಯಾದ ತಮಗೆ ಎಲ್ಲರೂ ಬೆಂಬಲ ನೀಡುವ ಭರವಸೆ ಕೊಟ್ಟಿದ್ದಾರೆ. ಬಿಜೆಪಿ ಜಿಲ್ಲಾ ಮಟ್ಟದಲ್ಲಿ ತಮಗೆ ಟಿಕೆಟ್ ತಪ್ಪಿಸುವ ಪ್ರಯತ್ನವನ್ನು ಯಾವ ಮುಖಂಡರು ಮಾಡಿಲ್ಲ. ಆದರೆ, ರಾಜ್ಯ ಮಟ್ಟದ ಮುಖಂಡರು ಟಿಕೆಟ್ ಬಯಸಿ ಬಂದಿರುವ ಅಭ್ಯರ್ಥಿಗಳ ಒತ್ತಡ, ಹಣದ ಪ್ರಭಾವಕ್ಕೆ ಒಳಗಾಗಿ ಟಿಕೆಟ್ ಕೊಡಬಾರದು. ಈ ಬಗ್ಗೆ ರಾಜ್ಯ ಮಟ್ಟದ ಮುಖಂಡರಿಗೂ ಮನವಿ ಮಾಡಲಾಗಿದೆ.

ಟಿಕೆಟ್ ತಮಗೆ ಕೊಡುವುದಾಗಿ ರಾಜ್ಯ ಮಟ್ಟದ ನಾಯಕರು ಭರವಸೆ ನೀಡುತ್ತಿದ್ದಾರೆ. ಆದರೆ, ಈವರೆಗೂ ಟಿಕೆಟ್ ಘೋಷಣೆ ಮಾಡಿಲ್ಲದಿರುವುದು ಟಿಕೆಟ್ ತಪ್ಪೀತೇ ಎಂಬುದರ ಆತಂಕ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ ಎಂದು ಹೇಳಿದರು.

ರಾಯಚೂರು ನಗರ ವಿಧಾನ ಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್‌ನ್ನು ತ್ರಿವಿಕ್ರಮ ಜೋಶಿ ಅವರಿಗೆ ಕೊಟ್ಟಿರುವುದು ಬಿಜೆಪಿ ಪಕ್ಷಕ್ಕೆ ಹಾನಿ ಆಗಲಿದೆ. ಪಕ್ಷ ಗೆಲ್ಲಿಸುವ ಅಭ್ಯರ್ಥಿ ಕಣಕ್ಕಿಳಿಸಬಹುದಿತ್ತು. ಪಾಪಾರೆಡ್ಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿ ಜೋಶಿ ಅವರಿಗೆ ಟಿಕೆಟ್ ಕೊಟ್ಟಿದ್ದರೆ ಪಕ್ಷಕ್ಕೂ ಒಳ್ಳೆಯದು. ಚುನಾವಣೆಯಲ್ಲಿ ಕಣಕ್ಕಿಳಿದ ಅಭ್ಯರ್ಥಿ ಗೆಲ್ಲುವುದಕ್ಕೂ ಹೆಚ್ಚಿನ ಅನುಕೂಲ ಆಗಬಹುದಿತ್ತು ಎಂಬುದು ತಮ್ಮ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.