ADVERTISEMENT

ವಾರ್ಷಿಕೋತ್ಸವ: ಮಕ್ಕಳ ಕಲೆ ಅನಾವರಣ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 8:04 IST
Last Updated 11 ಡಿಸೆಂಬರ್ 2013, 8:04 IST

ಲಿಂಗಸುಗೂರು(ಮುದಗಲ್ಲು): ಮರಿಯಾ ಅನುಭವಿಸುವ ನೋವು, ಯಾತನೆ, ಗರ್ಭಿಣಿ ಅನುಭವಿಸುವ ನೋವು, ಮರಿಯಾ ದನದ ಕೊಟ್ಟಿಗೆಯಲ್ಲಿ ಏಸುವಿಗೆ ಜನ್ಮ ನೀಡಿದ್ದು,  ದೇವ ಸ್ವರೂಪಿ ಬಾಲಕನ ಜನನ ಮಾಹಿತಿ ಅರಿತು ಸಂಹಾರ ಮಾಡಲು ಸಿದ್ಧರಾಗಿದ್ದ ರಾಜ ಮತ್ತು ಸೈನ್ಯಪಡೆಯ ಕ್ರಿಸ್‌ಮಸ್‌ ರೂಪಕ ಕಥೆ ದೃಶ್ಯಗಳು ವೇದಿಕೆಯ ಮೇಲೆ ಒಂದರ ಬೆನ್ನಹಿಂದೆ ಒಂದು ಬಿಚ್ಚಿಕೊಳ್ಳುವ ಪಾತ್ರಗಳನ್ನು ನೆರೆದಿದ್ದ ಜನರಿಗೆ ಭಾವುಕ ಕ್ಷಣವನ್ನು ಕಟ್ಟಿಕೊಟ್ಟಿತ್ತು.

ಲಿಂಗಸುಗೂರು ತಾಲ್ಲೂಕಿನ ಮುದಗಲ್ಲು ಪಟ್ಟಣದ ಸಂತಅನ್ನಮ್ಮ ಶಿಕ್ಷಣ ಸಂಸ್ಥೆ ಕ್ರಿಸ್ತಜ್ಯೋತಿ ಪ್ರೌಢಶಾಲಾ ಮಕ್ಕಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕವಾಗಿ ಶಾಲಾ ವಾರ್ಷಿಕೋತ್ಸವ ವೇದಿಕೆಯಲ್ಲಿ ತಮ್ಮ ಪ್ರತಿಭೆಗಳನ್ನು ನಟನೆಯ ಮೂಲಕವಾಗಿ ತೆರೆದಿಟ್ಟಿದ್ದಾರೆ.

ಕ್ರಿಸ್ತಜ್ಯೋತಿ ಪ್ರೌಢಶಾಲೆ 16ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹೊಸ್ತಿಲ್ಲಲ್ಲಿ ಇದರ ಭಾಗವಾಗಿ 5 ವರ್ಷಗಳಿಗೊಮ್ಮೆ ನಡೆಸುವ ಶಾಲಾ ವಾರ್ಷಿಕೋತ್ಸವ ನಡೆಯುತ್ತಿರುವುದು ಇಲ್ಲಿ ಸಂಭ್ರಮಕ್ಕೆ ಮುನ್ನುಡಿ ಬರೆದಿತ್ತು. ಶಾಲೆಯ ಮಕ್ಕಳು ಶೈಕ್ಷಣಿಕ ಪಠ್ಯ ಚಟುವಟಿಕೆಗಳ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮುಂದೇ ಇದ್ದಾರೆ.

ಸಂಸ್ಥೆಯಲ್ಲಿ ವ್ಯಾಸಂಗಕ್ಕ ಬರುವ ವಿದ್ಯಾರ್ಥಿಗಳು ಶಿಕ್ಷಣ, ಆಟದ ಜತೆ ಸಾಂಸ್ಕೃತಿಕ ಚಟುವಟಿಕೆಯಲ್ಲು ಮುಂದಿದ್ದಾರೆ. ವಾರ್ಷಿಕೋತ್ಸವದಲ್ಲಿ ಬಂಜಾರ ಹಾಡು, ಮಲೆನಾಡಿನ ಸನ್ನಿವೇಶ, ಬಂಗಾರ ತೆನೆ ತೆನೆ ತುಂಬಾ, ರಿಮಿಕ್ಸ, ಬೆಳ್ಳಿ ಮೂಡಿತೋ, ಪಂಜಾಬಿ ಹಾಗೂ ಧನ್ಯವಾದ ಹಾಡುಗಳಿಗೆ ಮಕ್ಕಳ ಹೆಜ್ಜೆ ಹಾಕಿದರು.

ವೇದಿಕೆಯ ಮೇಲೆ ವಿಶಿಷ್ವವಾದ ಡಾನ್ಸ್‌, ಏಕಪಾತ್ರ ಅಭಿನಯ, ನಾಟಕ, ಜಾನಪದ ಹಾಡುಗಾರಿಕೆ, ಹೊಸ, ಹಳೆಯ ಚಿತ್ರಗೀತೆಗಳಿಗೆ ಮಕ್ಕಳ ನೃತ್ಯ ಮಾಡುವ ದೃಶ್ಯಗಳು ನೋಡುಗರ ಮನಸ್ಸಿಗೆ ಖುಷಿ ನೀಡಿದವು. ಪ್ರತಿಯೊಂದು ಹಾಡು, ಮಕ್ಕಳ ನೃತ್ಯಕ್ಕೆ ನಾಗರಿಕರು ಚಪ್ಪಾಳೆ ತಟ್ಟಿ ಕೇಕೆ ಹಾಕಿ ಸಂತೋಷ ಪಟ್ಟರು.

ಪರಿಸರ ರಕ್ಷಣೆ ಕುರಿತಂತೆ ನಡೆಸಿಕೊಟ್ಟ ರೂಪದ ಸೇವ್‌ ಗ್ರೀನ್‌ ಪರಿಸರ ರಕ್ಷಣೆ ಜಾಗೃತಿ ಬಗ್ಗೆ ಮಾಹಿತಿ ನೀಡಿತು. ಸಮಾಜದ ಪ್ರತಿಯೊಂದು ರಂಗದಲ್ಲಿ ಮಕ್ಕಳು ಕಾಳಜಿ ಹಾಗೂ ಸುಂದರ ಸಮಾಜ ನಿರ್ಮಾಣದಲ್ಲಿ ಮಕ್ಕಳ ಪಾತ್ರ, ಪರಸ್ಪರ ಸಹಕಾರ ಮನೋಭಾವ, ದುಶ್ಚಟಗಳ ಬಗ್ಗೆ ಜಾಗೃತಿ ಕುರಿತಂತೆ ಮಕ್ಕಳು ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. 
–ಬಿ.ಎ. ನಂದಿಕೋಲಮಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT