ADVERTISEMENT

ಶವ ಕಳ್ಳತನಕ್ಕೆ ಹೊಸ ತಿರುವು: ಗೋರಿ ಮೇಲೆ ಶಿಶುವಿನ ಶವ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 9:05 IST
Last Updated 23 ಫೆಬ್ರುವರಿ 2012, 9:05 IST

ದೇವದುರ್ಗ: ಪಟ್ಟಣದ ಖಬರಸ್ಥಾನದಲ್ಲಿ ಸೋಮವಾರ ರಾತ್ರಿ ಪುರುಷರ ಎರಡು ಶವ ಹಾಗೂ ಶಿಶುವಿನ ಒಂದು ಶವವನ್ನು ಗೋರಿ ಅಗೆದು ಕಳವು ಮಾಡಿದ ಪ್ರಕರಣ ನಡೆದಿದ್ದು, ಬುಧವಾರ ಮಧ್ಯಾಹ್ನ ಶಿಶುವಿನ ಶವ ಗೋರಿ ಮೇಲೆ ಬಿದ್ದಿರುವುದರಿಂದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಮುಸ್ಲಿಂ ಸಮುದಾಯ ಸೇರಿದಂತೆ ಜಿಲ್ಲೆ ಮತ್ತು ತಾಲ್ಲೂಕಿನ ಜನತೆಯಲ್ಲಿ ತಲ್ಲಣಗೊಳಿಸಿದ್ದ ಶವ ಕಳವು ಪ್ರಕರಣ ಎರಡು ದಿನಗಳಿಂದ ಚರ್ಚೆಗೆ ಗ್ರಾಸವಾಗಿರುವ ಬೆನ್ನಹಿಂದೆಯೇ ಶಿಶುವಿನ ಶವ ಪತ್ತೆಯಾಗಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಮುದ್ದೆ ಅಕಾರ: ಕಳೆದ 15 ದಿನಗಳ ಹಿಂದೆ ಜನಿಸಿ ಕೆಲವೇ ಸಮಯದಲ್ಲಿ ಮೃತಪಟ್ಟಿದ್ದ ಶಿಶುವಿನ ಶವವನ್ನು ಖಬರಸ್ಥಾನ ಗೇಟ್‌ನಿಂದ ಕೆಲವು ಅಂತರದಲ್ಲಿ ಇಡಲಾಗಿತ್ತು. ಸೋಮವಾರ ರಾತ್ರಿ ನಡೆದ ಶವ ಕಳವು ಪ್ರಕರಣದಲ್ಲಿ ಸದರಿ ಶಿಶುವಿನ ಗೋರಿ ಅಗೆದು ಮೊದಲು ಇದ್ದ ಆಕಾರವನ್ನು ಬದಲಿಸಲಾಗಿತ್ತು. ಗೋರಿಗೆ ಇಡಲಾಗಿದ್ದ ಎರಡು ಶಾಹಬಾದಿ ಬಂಡಿ ದೂರ ಎಸೆಯಲಾಗಿತ್ತು. ಈ ಎಲ್ಲ ಬೆಳವಣಿಗೆಗಳಿಂದ ಶಿಶುವಿನ ಶವವನ್ನು ಯಾವುದೋ ಮಾಟ, ಮಂತ್ರಕ್ಕಾಗಿ ತೆಗೆದುಕೊಂಡು ಹೋಗಿರಬಹುದು ಎಂದು ಬಲವಾಗಿ ನಂಬಲಾಗಿತ್ತು. ಆದರೆ ಬುಧವಾರ ಮಧ್ಯಾಹ್ನ ಅದೇ ಸ್ಥಳದಲ್ಲಿ ಹೊಸ ಬಟ್ಟೆಯೊಂದರಲ್ಲಿ ಕೊಳೆತ ಮಾಂಸದ (ಗುರುತು ಹಿಡಿಯಲಾಗದಷ್ಟು) ವಸ್ತು ಪತ್ತೆಯಾಗಿದ್ದು, ಗೋರಿಯಲ್ಲಿದ್ದ ಮಣ್ಣನ್ನು ಚೆಲ್ಲಾಪಿಲ್ಲಿಯಾಗಿ ಎಸೆಯಲಾಗಿದೆ.

ಶಂಕೆ: ದುಷ್ಕರ್ಮಿಗಳು ಸೋಮವಾರ ರಾತ್ರಿ ಶಿಶುವಿನ ಗೋರಿ ಅಗೆದು ತಮ್ಮಗೆ ಬೇಕಾದ ಕೆಲವು ಅಂಗಾಗಳನ್ನು ಮಾತ್ರ ಪಡೆದು ನಂತರ ಅದೇ ಗೋರಿಯಲ್ಲಿ ಇಟ್ಟು ಅರೆಬರೆಯಲಾಗಿ ಮುಚ್ಚಿ ಹೋಗಿದ್ದಾರೆ. ಮಂಗಳವಾರ ರಾತ್ರಿ ಖಬರಸ್ಥಾನದಲ್ಲಿ ಓಡಾಡುವ ಕೆಲವು ಪ್ರಾಣಿಗಳು ವಾಸನೆ ಪತ್ತೆ ಹಚ್ಚಿ ಗೋರಿಯನ್ನು ಕಾಲಿನಿಂದ ಅಗೆದು ಒಳಗಿದ್ದ ವಸ್ತುವನ್ನು ಹೊರಹಾಕಿರಬಹುದು ಎಂದು ಶಂಕಿಸಲಾಗಿದ್ದರೂ ಎಲ್ಲಕ್ಕೂ ಪೊಲೀಸರ ತನಿಖೆಯಿಂದ ಪ್ರಕರಣ ಬಯಲಾಗುವುದನ್ನು ಜನರು ಕಾಯುತ್ತಿದ್ದಾರೆ.

ಆರೋಪ: ಮಂಗಳವಾರ ಶವ ಕಳವು ಪ್ರಕರಣ ಹೊರ ಬಿದ್ದ ಕೂಡಲೇ ಪಟ್ಟಣದ ಜಾಮೀಯಾ ಮಸೀದಿ ಸಮಿತಿಯ ಅಧ್ಯಕ್ಷ ಅನ್ವರ ಹುಸೇನ್ ಕಟಕಟಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ತಹಸೀಲ್ದಾರರಿಗೆ ಲಿಖಿತ ದೂರು ಸಲ್ಲಿಸಿ ಕೂಡಲೇ ಶವಗಳ ಕಳವು ಕುರಿತು ಸ್ಥಳ ಪರಿಶೀಲನೆ ಮಾಡುವ ಜತೆಗೆ ಶವಗಳ ನಾಪತ್ತೆಯಾಗಿರುವ ಬಗ್ಗೆ ಖಚಿತವಾದ ವರದಿ ನೀಡಲು ಕೇಳಿಕೊಂಡಿದ್ದರೂ ಅಧಿಕಾರಿಗಳು ಬೆಲೆ ನೀಡಿಲ್ಲ ಎಂದು  ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.