ADVERTISEMENT

`ಶಾದಿ ಮಹಲ್ ಕಾಮಗಾರಿ: ಅವ್ಯವಹಾರ ನಡೆದಿಲ್ಲ'

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 10:15 IST
Last Updated 1 ಏಪ್ರಿಲ್ 2013, 10:15 IST

ಕವಿತಾಳ: ಪಟ್ಟಣದ ಪಂಚ್ ಮಸೀದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮಸೀದಿ ಕಾಮಗಾರಿ ಕುರಿತು ದೂರು ಸಲ್ಲಿಕೆ ಮತ್ತು ಸ್ಥಳೀಯ ಪತ್ರಿಕೆಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಸೈಯದ್ ಅಬ್ದುಲ್ ಸತ್ತಾರ್‌ಸಾಬ್ ಅವರನ್ನು ಮುಸ್ಲಿಂ ಸಮಾಜದ ಮುಖಂಡರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಭಾನುವಾರ ನಡೆಯಿತು.

ಸಮಾಜದ ಮುಖಂಡ ಸಮದ್‌ಪಾಶಾ ಈ ಸಂದರ್ಭದಲ್ಲಿ ಮಾತನಾಡಿ, ಕಾಮಗಾರಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದರು.
ಶಾದಿ ಮಹಲ್ ನಿರ್ಮಾಣಕ್ಕೆ 2003-04ರಲ್ಲಿ ಶಾಸಕರು ನೀಡಿದ ರೂ.3 ಲಕ್ಷ ಅನುದಾನದಲ್ಲಿ ಕೇವಲ ರೂ.2.55 ಲಕ್ಷ ಮಾತ್ರ ಬಿಲ್ ಪಡೆಯಲಾಗಿದೆ.

ಹೆಚ್‌ಕೆಡಿಬಿ ಮಂಜೂರು ಮಾಡಿದ ರೂ.2ಲಕ್ಷ ಅನುದಾನವನ್ನು ಪಡೆದುಕೊಂಡಿಲ್ಲ ನಂತರ ಯಾವುದೇ ಅನುದಾನ ಲಭ್ಯವಾಗದ ಕಾರಣ ಸಮಾಜದ ವತಿಯಿಂದ ಶೇ.50 ದೇಣಿಗೆ ಸಂಗ್ರಹಿಸುವ ಇಲಾಖೆ ನಿಯಮ ಅನುಸರಿಸಿ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮಕ್ಕೆ ರೂ.20 ಲಕ್ಷ ಅನುದಾನದ ಬೇಡಿಕೆ ಸಲ್ಲಿಸಲಾಗಿತ್ತು. ಅದರಂತೆ ಎರಡು ಪ್ರತ್ಯೇಕ ಕಂತುಗಳಲ್ಲಿ ಇಲಾಖೆ ರೂ.10 ಲಕ್ಷ ಬಿಡುಗಡೆ ಮಾಡ್ದ್ದಿದು ಶಾದಿ ಮಹಲ್ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

ಈ ಕುರಿತು ಸೈಯದ್ ಅಬ್ದುಲ್ ಸತ್ತಾರ್‌ಸಾಬ್ ಮತ್ತು ಎಸ್.ಎಂ.ಜಿಲಾನಿ ಎನ್ನುವವರು ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಆದರೆ ವಿಚಾರಣೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ ಎಂದು ಹೇಳಿದರು.

ರೂ.20 ಲಕ್ಷದ ಕೋರಿಕೆ ನಂತರ ಕಟ್ಟಡದ ವಿಸ್ತೀರ್ಣ ಹೆಚ್ಚಿಸಲಾಗಿದೆ ಮತ್ತು ಮಸೀದಿ ಸ್ಥಳದಲ್ಲಿ ಮೊಬೈಲ್ ಸ್ಥಾವರ ನಿರ್ಮಾಣದಲ್ಲೂ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.  ದೂರುದಾರ ಸತ್ತಾರಸಾಬ್ ಹೆಚ್‌ಕೆಡಿಬಿಯಿಂದ ರೂ.10 ಲಕ್ಷ ಪಡೆಯಲಾಗಿದೆ ಎಂದು  ಪ್ರಕಟವಾದ ವರದಿ ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಒಪ್ಪಿಕೊಂಡರು.

ಮಸೀದಿಯಲ್ಲಿ ಸಭೆ ನಡೆಸಿದ ಮುಖಂಡರು ರಾಜಿ ಸಂಧಾನ ಮಾಡಿದರು. ಲಿಯಾಖತ್ ಅಲೀ, ರಿಯಾಜ್, ಇಮ್ತಿಯಾಜ್ ವಕೀಲ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬುರಾನುದ್ದೀನ್ ಜಹಗೀರ್‌ದಾರ್, ನಬೀಸಾಬ್, ಆನ್ವರ್‌ಪಾಶಾ, ಡಾ.ಸರಮಸ್ತಧಣಿ, ದಿಲೀಪ್‌ಸಾಬ್, ರಫಿ ಜಮಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.