ADVERTISEMENT

ಶಿಕ್ಷಕರ ಕೊರತೆ: ಕ್ರಮಕೈಗೊಳ್ಳದ ಇಲಾಖೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 9:40 IST
Last Updated 13 ಅಕ್ಟೋಬರ್ 2012, 9:40 IST

ಹಟ್ಟಿ ಚಿನ್ನದ ಗಣಿ: ಇಲ್ಲಿಗೆ ಸಮೀಪದ ಬಂಡೆಬಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಲವು ವರ್ಷಗಳಿಂದ ಶಿಕ್ಷಕರ ಕೊರತೆ ಎದುರಿಸುತ್ತಿದೆ. ಆದರೆ ಶಿಕ್ಷಣ ಇಲಾಖೆಯು ಕೊರತೆಯನ್ನು ನೀಗುವುಸ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳದೆ ನಿದ್ರೆಗೆ ಜಾರಿದಎ ಎಂದು ಗ್ರಾಮಸ್ಥರ ಆರೋಪವಾಗಿದೆ.

ಶಿಕ್ಷಣದ ಹಕ್ಕು ಅಡಿಯಲ್ಲಿ ಕಡ್ಡಾಯವಾಗಿ ಎಲ್ಲರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡುವ ಜವಾಬ್ದಾರಿ ಸರ್ಕಾರದ ಶಿಕ್ಷಣ ಇಲಾಖೆಯ ಮೇಲಿದೆ. ಆದರೆ ಇಲಾಖೆಯು ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಲಭ್ಯಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ಈ ಶಾಲೆಯ್ಲ್ಲಲ್ಲಿ ಒಟ್ಟು 110 ಜನ ಮಕ್ಕಳಿದ್ದಾರೆ. ಇವರಲ್ಲಿ 86 ಮಕ್ಕಳು ಪರಿಶಿಷ್ಟ ಪಂಗಡಕ್ಕೆ ಸೇರಿದವರಿದ್ದಾರೆ. ಇವರಿಗೆ ಪಾಠ ಮಾಡಲು ಕೇವಲ ಎರಡೇ ಶಿಕ್ಷಕರಿದ್ದಾರೆ. 25 ಮಕ್ಕಳಿಗೆ ಒಬ್ಬ ಶಿಕ್ಷಕ ಇರಬೇಕೆಂದು ಇಲಾಖೆಯ ನಿಯಮ ಹೇಳುತ್ತದೆ. ಆದರೆ ಈ ನಿಯಮ ಇಲ್ಲಿ ಪಾಲೆನೆಯಾಗಿಲ್ಲ.
 
ಶಿಕ್ಷಕರ ಕೊರತೆಯಿಂದಾಗಿ ಗ್ರಾಮದ ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪಟ್ಟಣದಲ್ಲಿರುವ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ ಶಿಕ್ಷಕರ ಸಂಖ್ಯೆ ಹೆಚ್ಚಿದೆ. ಇಲಾಖೆಯ ಅಧಿಕಾರಿಗಳು ಗ್ರಾಮೀಣ ಶಾಲೆಗಳಿಗೆ ಸಮರ್ಪಕವಾಗಿ ಶಿಕ್ಷಕರನ್ನು ಒದಗಿಸಿ ಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ದೂರುತ್ತಾರೆ. ಶಾಲೆಗೆ ಶಿಕ್ಷಕರನ್ನು ನೇಮಕ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಹಲವು ಸಲ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಕೋಠಾ ಹನುಮಂತ ಹಾಗೂ ಇಮಾಬ್ ಸಾಬ್ ಹೇಳುತ್ತಾರೆ.

ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತವಾರಿ ಸಮಿತಿ(ಎಸ್‌ಡಿಎಂಸಿ) ರಚನೆಯಾಗದ ಕಾರಣ ಶಾಲೆಗೆ ಬಂದ ಅನುದಾನ ಬಳಕೆಯಾಗದೆ ವಾಪಸ ಹೋಗುತ್ತದೆ. ಎಸ್‌ಡಿಎಂಸಿ ರಚನೆಗಾಗಿ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇಲಾಖೆಯ ಉನ್ನತಾಧಿಕಾರಿಗಳು ದೈಹಿಕ ಶಿಕ್ಷಕ ಸೇರಿ ಉಳಿದೆಲ್ಲ ಶಿಕ್ಷಕರನ್ನು ನೇಮಕ ಮಾಡಬೇಕು. ಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ಕೈಗೊಳ್ಳಲು ಎಸ್‌ಡಿಎಂಸಿ ರಚನೆಗೆ ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.