ADVERTISEMENT

ಸಂವಿಧಾನ ಬದಲಾವಣೆ ನಿರ್ಧರಿಸುವ ಚುನಾವಣೆ

ಕಾಂಗ್ರೆಸ್‌ ಪಕ್ಷದ ಪ್ರಚಾರ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಮೇ 2018, 13:22 IST
Last Updated 7 ಮೇ 2018, 13:22 IST

ರಾಯಚೂರು: ದೇಶದ ಸಂವಿಧಾನ ಬದಲಾವಣೆ ಮಾಡಬೇಕೋ ಅಥವಾ ಬೇಡವೋ ಎಂಬುದನ್ನು ಈ ಚುನಾವಣೆಯಲ್ಲಿ ನಿರ್ಧಾರವಾಗಬೇಕಿದ್ದು, ಮತದಾರರು ಎಚ್ಚರಿಕೆಯಿಂದ ಮತ ಚಲಾಯಿಸಬೇಕು ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನಗರದ ಮಹಿಳಾ ಸಮಾಜದ ಆವರಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ವಿಧಾನಸಭೆ ಚುನಾವಣೆಯ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ದೇಶದಲ್ಲಿ ಬಿಜೆಪಿ ಪಕ್ಷ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದ್ದು, ಸಮಾಜದಲ್ಲಿ ಗೊಂದಲ ಮೂಡಿಸುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೀತಿಗಳು ದ್ವಂದ್ವದಿಂದ ಕೂಡಿವೆ ಎಂದರು.

ADVERTISEMENT

ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಿಂದ ಬಡ ಕುಟುಂಬದಿಂದ ಬಂದ ತಾನು ಪ್ರಧಾನಿಯಾಗಲು ಸಾಧ್ಯವಾಗಿದೆ ಎಂದು ಹೇಳುತ್ತಾರೆ. ಆದರೆ, ಸಂವಿಧಾನ ಬದಲಾವಣೆ ಮಾಡಬೇಕು ಎನ್ನುವವರನ್ನು ಸಂಪುಟದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಟೀಕಿಸಿದರು.

ಮಹಿಳೆಯರು ಧರಿಸುವ ಉಡುಪುಗಳು ಅತ್ಯಾಚಾರಕ್ಕೆ ಕಾರಣ ಎಂಬ ಚರ್ಚೆಯನ್ನು ಹುಟ್ಟು ಹಾಕಲಾಗಿದೆ. ಇಂಥ ಚರ್ಚೆಗಳ ಮೂಲಕ ಇಂತಹ ಬಟ್ಟೆಗಳನ್ನೇ ಧರಿಸಬೇಕು ಹಾಗೂ ಆಹಾರ ಸೇವಿಸಬೇಕು ಎಂಬು ದನ್ನು ಹೇರುವುದಾದರೆ ಸಂವಿಧಾನದ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಿದೇಶದಲ್ಲಿನ ಕಪ್ಪುಹಣ ತಂದು ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಣ ಜಮಾ ಮಾಡುವುದಾಗಿ ಹೇಳಿದ್ದ ನರೇಂದ್ರ ಮೋದಿ ಅವರನ್ನು ಜನರು ಪ್ರಶ್ನೆ ಮಾಡಿ, ಈ ಚುನಾವಣೆಯಲ್ಲಿ ₹7.5 ಲಕ್ಷ ಮುಂಬರುವ ಲೋಕಸಭಾ ಚುನಾವಣೆ ವೇಳೆಗೆ ₹7.5ಲಕ್ಷದಂತೆ ಕಂತಿನಲ್ಲಿ ಹಣ ನೀಡಲು ಒತ್ತಾಯಿಸಬೇಕು ಎಂದರು.

ಸಂವಿಧಾನದ ಬದಲಾವಣೆ ಮಾಡಬೇಕು ಎನ್ನುವ ಬಿಜೆಪಿಯವರು ಒಂದುಕಡೆ, ಸಂವಿಧಾನದ ರಕ್ಷಣೆ ಮಾಡಬೇಕು ಎನ್ನುವ ಕಾಂಗ್ರೆಸ್ ಇನ್ನೊಂದೆಡೆ ಇದ್ದು, ಎರಡು ತತ್ವಗಳ ನಡುವಿನ ಸಂಘರ್ಷ ಚುನಾವಣೆಯ ವಿಷಯವಾಗಿದೆ. ಎಚ್ಚರಿಕೆಯಿಂದ ಮತ ಚಲಾಯಿಸದಿದ್ದರೆ ಅಪಾಯ ಎದುರಿಸಬೇಕಾಗುತ್ತದೆ ಎಂದರು.

ಆಂಧ್ರಪ್ರದೇಶದ ಕಾಂಗ್ರೆಸ್ ಮಹಿಳಾ ಘಟಕದ ಪದ್ಮಶ್ರೀ, ಡಿ.ಕೆ.ಅರುಣಾ, ಸಂಸದ ಬಿ.ವಿ ನಾಯಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ, ಕಾರ್ಯದರ್ಶಿ ಯಂಕಣ್ಣ ಯಾದವ, ರಾಮಣ್ಣ ಇರಬಗೇರಾ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಪಾಟೀಲ್ ಇಟಗಿ, ಶರಣಪ್ಪ ಮಟ್ಟೂರು, ನಗರ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಯಾಸೀನ್, ಜಯಣ್ಣ, ರುದ್ರಪ್ಪ ಅಂಗಡಿ, ಜಿ.ಬಸವರಾಜರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.