ಕವಿತಾಳ: ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಿದ ಸರ್ಕಾರ ಸಮವಸ್ತ್ರ ಹೊಲಿಗೆ ಕೂಲಿ ಎಂದು ಕೇವಲ ರೂ.3.55 ನೀಡುವ ಮೂಲಕ ಅಚ್ಚರಿ ಮತ್ತು ಗೊಂದಲ ಮೂಡಿಸಿದೆ.
2012-13ನೇ ಸಾಲಿನಲ್ಲಿ 1ರಿಂದ8ನೇ ತರಗತಿಯ ಪ್ರತಿ ವಿದ್ಯಾರ್ಥಿಯ ಸಮವಸ್ತ್ರಕ್ಕೆ ತಗುಲುವ ವೆಚ್ಚದ ಮಾಹಿತಿ ನೀಡಿ ಕ್ರಮ ಕೈಗೊಳ್ಳಲು ಸೂಚಿಸಿರುವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಆದೇಶ ಆತಂಕ ಸೃಷ್ಟಿಸಿದೆ.
ವಿದ್ಯಾರ್ಥಿಯ ಒಂದು ಜತೆ ಚಡ್ಡಿ ಮತ್ತು ಅಂಗಿ ಹಾಗೂ ವಿದ್ಯಾರ್ಥಿನಿಯ ಒಂದು ಜತೆ ಲಂಗ ಮತ್ತು ಅಂಗಿಗೆ ಕ್ರಮವಾಗಿ 1,2ನೇ ತರಗತಿಗೆ ರೂ.102.81, ರೂ.75.19, 3.4ನೇ ತರಗತಿಗೆ ರೂ. 93.51, ಮತ್ತು ರೂ.56.68, 5.6ಮತ್ತು 7ನೇ ತರಗತಿಗೆ ರೂ.79.66 ಮತ್ತು ರೂ.19.76 ನಿಗದಿ ಪಡಿಸಲಾಗಿದ್ದು, 8ನೇ ತರಗತಿಗೆ ಕೇವಲ ರೂ.5.72, ರೂ.3.55 ಎಂದು ನಿಗದಿ ಪಡಿಸಿ ಆಯಾ ತರಗತಿಯ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಒಟ್ಟು ಮೊತ್ತವನ್ನು ಶಾಲೆಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಶಾಲೆಗಳಲ್ಲಿ ಈಗಾಗಲೇ ಸಮವಸ್ತ್ರ ವಿತರಿಸಿದ್ದು ಇದೀಗ ಹೊಲಿಗೆ ಕೂಲಿ ನೀಡುವ ವಿಷಯದಲ್ಲಿ ಎಸ್‌ಡಿಎಂಸಿ ಪದಾಧಿಕಾರಿಗಳು ಮತ್ತು ಶಿಕ್ಷಕರಲ್ಲಿ ಗೊಂದಲ ಉಂಟಾಗಿದೆ.
ಸಮೀಪದ ವಟಗಲ್ ಗ್ರಾಮದಲ್ಲಿ ಹೊಲಿಗೆ ಕೂಲಿ ಎಂದು ಅಂದಾಜು 300 ಮಕ್ಕಳಿಗೆ ರೂ.9325 ಹಣ ಜಮಾ ಮಾಡಲಾಗಿದ್ದು ಮಂಜೂರಾದ ಒಟ್ಟು ಮೊತ್ತವನ್ನು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ತಲಾವಾರು ವಿತರಸಲು ಎಸ್‌ಡಿಎಂಸಿಯವರು ಆಸಕ್ತಿ ತೋರಿಸುತ್ತ್ದ್ದಿದಾರೆ.
ಇಲಾಖೆ ನಿಯಮದಂತೆ ಆಯಾ ತರಗತಿಗೆ ಅನುಸಾರವಾಗಿ ವಿತರಿಸಬೇಕು ಎನ್ನುವುದು ಶಿಕ್ಷಕರ ಅಭಿಮತ. ಗ್ರಾಮೀಣ ಭಾಗದಲ್ಲೂ ಒಂದು ಜತೆ ಚಡ್ಡಿ, ಅಂಗಿ ಮತ್ತು ಲಂಗ, ಅಂಗಿಯ ಹೊಲಿಗೆ ಕೂಲಿ ಕ್ರಮವಾಗಿ ರೂ.150, 200 ಇದೆ ಮೂರು ರೂಪಾಯಿಗೆ ಒಂದು ದಾರ, ಗುಂಡಿಗಳು, ಅಥವಾ ಜಿಪ್ ಸಹಿತ ಸಿಗುವುದಿಲ್ಲ ಅಧಿಕಾರಿಗಳು ಯಾವ ಮಾನದಂಡ ಅನುಸರಿಸಿ ಹೊಲಿಗೆ ಕೂಲಿ ನಿಗದಿಪಡಿಸಿದ್ದಾರೆ ಎಂದು ಎಸ್‌ಡಿಎಂಸಿ ಅಧ್ಯಕ್ಷೆ ಪಾರ್ವತಮ್ಮ ಮಲ್ಲೇಶಯ್ಯ ಪ್ರಶ್ನಿಸಿದ್ದಾರೆ.
ಕೇವಲ ರೂ.3 ಹೊಲಿಗೆ ಕೂಲಿ ವಿತರಿಸಲು ಮುಂದಾದರೆ ಪಾಲಕರ ವಿರೋಧ ಎದುರಿಸಬೇಕಾಗುತ್ತದೆ ಎಂದು ಪಾರ್ವತಮ್ಮ ಮಲ್ಲೇಶಯ್ಯ ಹೇಳಿದ್ದಾರೆ. ಪ್ರತಿ ವಿದ್ಯಾರ್ಥಿಯ ಸಮವಸ್ತ್ರಕ್ಕೆ ಸರ್ಕಾರ ರೂ.200 ನಿಗದಿಪಡಿಸಿದ್ದು 1ನೇ ತರಗತಿ ಮಕ್ಕಳಿಗೆ ಕಡಿಮೆ ಪ್ರಮಾಣದ ಬಟ್ಟೆ ಬೇಕಾಗುವುದರಿಂದ ಬಟ್ಟೆಗೆ ರೂ.97.19 ಮತ್ತು ಕೂಲಿಗೆ 102.81 ಮತ್ತು 8ನೇ ತರಗತಿ ವಿದ್ಯಾರ್ಥಿಗೆ ಹೆಚ್ಚಿನ ಪ್ರಮಾಣದ ಬಟ್ಟೆ ಅವಶ್ಯವಿದ್ದು, ಬಟ್ಟೆಗೆ ರೂ.196.45 ಮತ್ತು ಹೊಲಿಗೆ ಕೂಲಿ 3.55 ನಿಗದಿ ಮಾಡಿದ್ದಾಗಿ ಅಧಿಕಾರಿಗಳು ಲಿಖಿತ ಆದೇಶ ನೀಡಿದ್ದಾರೆ. ಬಟ್ಟೆ ಸರಬರಾಜು ಮಾಡಿದ್ದು ಬೇರೆಯವರು ಇದೀಗ ಹೊಲಿಗೆ ಮಾಡಬೇಕಾದವರು ಬೇರೆಯವರು ಈ ವ್ಯತ್ಯಾಸವನ್ನು ಹೇಗೆ ಸರಿಪಡಿಸಬೇಕು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. `ಸರ್ವ ಶಿಕ್ಷಣ ಅಭಿಯಾನ ಯೋಜನೆಯ ಅಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮವಸ್ತ್ರ ವಿತರಿಸಿದ್ದು, ಇದೇ ಪ್ರಥಮ ಬಾರಿಗೆ ಸಮವಸ್ತ್ರಕ್ಕೆ ತಗುಲಿದ ವೆಚ್ಚ ಬಿಟ್ಟು ಉಳಿದ ಮೊತ್ತವನ್ನು ವಿದ್ಯಾರ್ಥಿಗಳಿಗೆ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ ಇದು ಇಡೀ ರಾಜ್ಯಕ್ಕೆ ಅನ್ವಯವಾದ ಆದೇಶ' ಎಂದು ಸಿಆರ್‌ಪಿ ಧನ್ನೂರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.