ADVERTISEMENT

ಸರ್ಕಾರವೇ ಸೃಷ್ಟಿಸಿದ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 7:05 IST
Last Updated 14 ಅಕ್ಟೋಬರ್ 2011, 7:05 IST

ರಾಯಚೂರು: ರಾಜ್ಯದಲ್ಲಿನ ವಿದ್ಯುತ್ ಸಮಸ್ಯೆಗೆ ಕಲ್ಲಿದ್ದಲು ಕೊರತೆ ಕಾರಣ ಎಂಬುದು ಸರ್ಕಾರ ಹೇಳುತ್ತಿರುವ ಅಪ್ಪಟ್ಟ ಸುಳ್ಳು. ಸರ್ಕಾರವೇ ಕೃತವಾಗಿ ಸೃಷ್ಟಿಸಿದ ಸಮಸ್ಯೆ ಇದು. ಸಿಂಗರೇಣಿಯಿಂದ ಕಲ್ಲಿದ್ದಲು ಪೂರೈಕೆ ಸ್ಥಗಿತಗೊಂಡಿದ್ದರೂ ಬೇರೆ ಕಡೆಯಿಂದ ದುಪ್ಪಟ್ಟು ಕಲ್ಲಿದ್ದಲನ್ನು ಮೂರು ತಿಂಗಳ ಹಿಂದಿನಿಂದಲೇ ಖರೀದಿಸುತ್ತಿದೆ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಎಸ್. ಸಿದ್ದರಾಮಯ್ಯ ಹೇಳಿದರು.

ಗುರುವಾರ ಮಧ್ಯಾಹ್ನ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಆರ್‌ಟಿಪಿಎಸ್‌ಗೆ ತೆಲಂಗಾಣ ಹೋರಾಟ, ಬಂದ್‌ನಿಂದ ಈಗ ಕಲ್ಲಿದ್ದಲು ಪೂರೈಕೆ ಸ್ಥಗಿತಗೊಂಡಿದೆ. ಆದರೆ, ಅದರ ಬದಲಾಗಿ ಮಹಾರಾಷ್ಟ್ರದ ವೆಸ್ಟ್ ಕೋಲ್ ಮೈನ್ ಹಾಗೂ ಇತರ ಕಡೆಯಿಂದ ದುಪ್ಪಟ್ಟು ಪ್ರಮಾಣದ ಕಲ್ಲಿದ್ದಲನ್ನು ಕರ್ನಾಟಕ ವಿದ್ಯುತ್ ನಿಗಮ ಖರೀದಿಸಿದೆ. ಸರ್ಕಾರ ನೀಡಿರುವ ಅಂಕಿ ಅಂಶಗಳೇ ಇದಕ್ಕೆ ಆಧಾರ ಎಂದರು.

ಮಹಾರಾಷ್ಟ್ರದ ವೆಸ್ಟ್ ಕೋಲ್ ಮೈನ್‌ನಿಂದ ಕಳೆದ ಜುಲೈ ತಿಂಗಳಲ್ಲಿ ಆರ್‌ಟಿಪಿಎಸ್ ಕಲ್ಲಿದ್ದಲು ಪೂರೈಕೆ ಪ್ರಮಾಣ ನಿಗದಿಯಾಗಿದ್ದು 1 ಲಕ್ಷ 88 ಸಾವಿರ ಮೆಟ್ರಿಕ್ ಟನ್. ಆದರೆ 2 ಲಕ್ಷ 81,923 ಮೆಟ್ರಿಕ್ ಟನ್ ಪೂರೈಕೆ ಆಗಿದೆ. ಆಗಸ್ಟ್ ತಿಂಗಳಲ್ಲಿ ಪೂರೈಕೆ ಪ್ರಮಾಣ ನಿಗದಿಯಾಗಿದ್ದು 1,81, 500 ಮೆಟ್ರಿಕ್ ಟನ್. ಆದರೆ 2 ,97,214 ಮೆಟ್ರಿಕ್ ಟನ್ ಖರೀದಿಸಿದೆ. ಅದೇ ರೀತಿ ಈಗ ಸೆಪ್ಟೆಂಬರ್ 11ರವರೆಗೆ ಪೂರೈಕೆ ಪ್ರಮಾಣ ನಿಗದಿಯಾಗಿದ್ದು 1,75,450 ಮೆಟ್ರಿಕ್ ಟನ್. ಖರೀದಿಸಿದ್ದು 2,18,240 ಮೆಟ್ರಿಕ್ ಟನ್. ಇದು ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕರೇ ತಮಗೆ ಕೊಟ್ಟ ಅಂಕಿ ಅಂಶಗಳು ಎಂದು ಹೇಳಿದರು.

ಸಿಂಗರೇಣಿಯಿಂದ ಈಗ ಸುಮಾರು 20 ದಿನಗಳಿಂದ ಕಲ್ಲಿದ್ದಲು ಪೂರೈಕೆ ಬಂದ್ ಆಗಿರಬಹುದು. ಆದರೆ, ಸರ್ಕಾರ ಮೂರು ತಿಂಗಳು ಹಿಂದಿನಿಂದಲೇ ಬೇರೆ ಕಡೆಯಿಂದ ಖರೀದಿ ಮಾಡಿದೆ. ಇದರಿಂದ ಸ್ಪಷ್ಟವಾಗುತ್ತದೆ. ಇದು ಕಲ್ಲಿದ್ದಲು ಪೂರೈಕೆ ಸಮಸ್ಯೆ ಅಲ್ಲ. ತೆಲಂಗಾಣ ಹೋರಾಟ, ಸಿಂಗರೇಣಿ ಕಲ್ಲಿದ್ದಲು ಗಣಿ ಬಂದ್ ಸಮಸ್ಯೆಯೂ ಅಲ್ಲ. ಸರ್ಕಾರವೇ ಸೃಷ್ಟಿಸಿದ ಸಮಸ್ಯೆ ಎಂದು ಆರೋಪಿಸಿದರು.

ಕಲ್ಲಿದ್ದಲು ಸಂಗ್ರಹಕ್ಕೆ ಒತ್ತು ಕೊಟ್ಟಿಲ್ಲ: ಕಲ್ಲಿದ್ದಲು ಸಂಗ್ರಹಕ್ಕೆ ರಾಜ್ಯ ಸರ್ಕಾರ ಮುಂಜಾಗ್ರತೆ ಕ್ರಮವಾಗಿ ಒತ್ತು ಕೊಟ್ಟಿಲ್ಲ. ಆಯಾ ದಿನ ದುಡಿದು ಆ ದಿನ ಮಾತ್ರ ಊಟ ಮಾಡಲು ಬಡ ಕೂಲಿಕಾರರ ಮನೆ ಸ್ಥಿತಿ ಅಲ್ಲ.

ಮುಂಜಾಗ್ರತೆ ಕ್ರಮ ಕೈಗೊಳ್ಳುವಲ್ಲಿ ಲೋಪವೆಸಗಿದೆ. ಆರ್‌ಟಿಪಿಎಸ್ 8ನೇ ಘಟಕ ಶುರುವಾಗಿ 10 ತಿಂಗಳಾಗಿದೆ. ನಿಮಿತ್ತ ಮಾತ್ರ ಶುರುವಾಗಿದ್ದು ಬಿಟ್ಟರೆ ವಿದ್ಯುತ್ ಉತ್ಪಾದನೆ ಆಗಿಲ್ಲ. ತಾಂತ್ರಿಕ ಸಮಸ್ಯೆ ತುರ್ತು ಪರಿಹರಿಸಿಲ್ಲ. ಯರಮರಸ್, ಯದ್ಲಾಪುರ ಘಟಕಗಳ ಆರಂಭಕ್ಕೆ ಗಮನಹರಿಸಿಲ್ಲ. ಬಿಜಾಪುರ, ಉಡುಪಿ ಶಾಖೋತ್ಪನ್ನ ಘಟಕಗಳನ್ನು ಸರ್ಕಾರ ಮರೆತೇ ಬಿಟ್ಟಿದೆ ಎಂದು ಟೀಕಿಸಿದರು.

ತೊಳೆದ ಕಲ್ಲಿದ್ದಲು: ಈ ಮೊದಲು ತೊಳೆದ ಕಲ್ಲಿದ್ದಲು ಬಳಕೆ ಮಾಡಲಾಗುತ್ತಿತ್ತು. ಈಗ ಕಚ್ಚಾ ಕಲ್ಲಿದ್ದಲು ಬಳಕೆ ಮಾಡಲಾಗುತ್ತಿದೆ. ಆಗಲೂ ಇಷ್ಟೇ ಪ್ರಮಾಣದ ವಿದ್ಯುತ್. ಈಗಲೂ ಅಷ್ಟೇ ಪ್ರಮಾಣದ ವಿದ್ಯುತ್ ಉತ್ಪಾದನೆ ಆಗುತ್ತಿದೆ. ತಾಂತ್ರಿಕ ದುರಸ್ತಿಗೆ ಗಮನಹರಿಸಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.