ADVERTISEMENT

ಸೇತುವೆ ಹಾನಿ: ಬಸ್‌ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 8:57 IST
Last Updated 21 ಅಕ್ಟೋಬರ್ 2017, 8:57 IST

ಹಟ್ಟಿ ಚಿನ್ನದ ಗಣಿ: ಸಮೀಪದ ಕೋಠಾ ಗ್ರಾಮದ ಹಿರೇಹಳ್ಳಕ್ಕೆ ನಿರ್ಮಿಸಿದ ಸೇತುವೆ ಕೊಚ್ಚಿ ಹೋಗಿದ್ದು, ಬಸ್‌ ಸಂಚಾರ ಸ್ಥಗಿತಗೊಂಡಿದೆ. ಇದರ ಪರಿಣಾಮ ವಿದ್ಯಾರ್ಥಿಗಳಿಗೆ, ರೈತರಿಗೆ ಹಾಗೂ ಕಾರ್ಮಿಕರು ತೊಂದರೆಯಾಗಿದೆ.

ಈಚೆಗೆ ಸುರಿದ ಭಾರಿ ಮಳೆಯಿಂದ ಹಳ್ಳ ತುಂಬಿ ಹರಿದು ಸೇತುವೆ ಕೊಚ್ಚಿಕೊಂಡು ಹೋಗಿದೆ. ಸೇತುವೆಯ ಸ್ವಲ್ಪ ಉಳಿದ ಭಾಗ ಮೇಲೆ ಬೈಕ್‌, ಆಟೋ ಮತ್ತು ಕಾರುಗಳು ಮಾತ್ರ ಸಂಚರಿಸುತ್ತವೆ. ಕೋಠಾ ಗ್ರಾಮದ ಮಾರ್ಗವಾಗಿ ಐದಬಾವಿ, ಲಿಂಗಸುಗೂರು, ತಾಳಿಕೋಟ, ವಿಜಯಪುರ, ಕಲಬುರ್ಗಿ ಹೋಗುವ ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ.

ಇದರಿಂದ ರೈತರು ಗುರುಗುಂಟಾದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಹಟ್ಟಿ, ಕೋಠಾ ಸೇರಿದಂತೆ ಗೆಜ್ಜಲಗಟ್ಟಾ, ಆನ್ವರಿ, ಹಿರೇನಗನೂರು, ವೀರಾಪುರ, ನಿಲೋಗಲ್‌,ಚುಕನಟ್ಟಿ ಗ್ರಾಮದ ರೈತರು ಹೋಗಲು ಆಗುತ್ತಿಲ್ಲ. ಕೃಷಿ ಪರಿಕರಗಳು ತರಲು ಆಗುತ್ತಿಲ್ಲ. ಗುರುಗುಂಟಾ, ಪೈದೊಡ್ಡಿ, ರಾಯದುರ್ಗ, ಐದಬಾವಿ, ಗುಂತುಕೋಳ, ಟಣಮಕಲ್‌ ಗ್ರಾಮದಿಂದ ಹಟ್ಟಿ ಚಿನ್ನದ ಗಣಿ ಕಾರ್ಮಿಕರು ಸುತ್ತುಬಳಸಿ ಕೆಲಸಕ್ಕೆ ಬಂದು ಹೋಗಬೇಕಿದೆ.

ADVERTISEMENT

‘ಗುರುಗುಂಟಾ ಹಾಗೂ ಹಟ್ಟಿಗೆ ಹೋಗಬೇಕಾದರೆ ಖಾಸಗಿ ವಾಹನಗಳಲ್ಲಿ ದುಬಾರಿ ದರ ನೀಡ ಹೋಗಬೇಕು. ವಿದ್ಯಾರ್ಥಿಗಳು ವಿಶೇಷ ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ. ಜನರಿಗೆ ಖಾಸಗಿ ವಾಹನಗಳೇ ಗತಿ.

ಚುನಾಯಿತ ಪ್ರತಿನಿಧಿಗಳು, ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಬರೀ ಭರವಸೆಗಳನ್ನು ನೀಡುತ್ತಾರೆ’ ಎಂದು ಖಯುಂ ಹಾಜಿಮಲಂಗ, ಮೋಹಿನುದ್ದೀನ್‌ ಪಾಶಾ ಮಲ್ಲೇಶ ಮ್ಯಾಗೇರಿ, ಸದ್ದಾಂ ಹುಸೇನ್‌ ಆರೋಪಿಸುತ್ತಾರೆ.

‘ಗ್ರಾಮ ಪಂಚಾಯಿತಿಯವರು ತಾತ್ಕಾಲಿಕವಾಗಿ ಸೇತುಯನ್ನು ದುರಸ್ತಿ ಮಾಡಬೇಕು. ಗುರುಗುಂಟಾ ಹಟ್ಟಿ ರಸ್ತೆ ಮೇಲ್ದರ್ಜೆಗೇರಿಸಬೇಕು. ಸೇತುವೆಯನ್ನು ಎತ್ತರಿಸಬೇಕು. ವಾರದೊಳಗಾಗಿ ರಸ್ತೆ ಮತ್ತು ಸೇತುವೆ ಕಾಮಗಾರಿ ಆರಂಭಿಸಬೇಕು. ಇಲ್ಲದಿದ್ದರೆ ರಸ್ತೆ ತಡೆ ಕೈಗೊಂಡು ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.