ADVERTISEMENT

ಸೌಕರ್ಯ ಕಲ್ಪಿಸಲು ಆಗ್ರಹಿಸಿ ಮನವಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 6:47 IST
Last Updated 18 ಜುಲೈ 2013, 6:47 IST

ಲಿಂಗಸುಗೂರ: ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿ ವಸತಿ ನಿಲಯಗಳು ಅವ್ಯವಸ್ಥೆಯ ಆಗರವಾಗಿವೆ. ಸರ್ಕಾರದ ಸೌಲಭ್ಯ ಇಂದಿಗೂ ಸಮರ್ಪಕವಾಗಿ ತಲಪುತ್ತಿಲ್ಲ. ಕಳಪೆ ಆಹಾರ ಧಾನ್ಯ ಪೂರೈಕೆ ಆಗುತ್ತಿವೆ. ಶೌಚಾಲಯ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಮೂರ್ತಿ ಬಣ) ಪದಾಧಿಕಾರಿಗಳು ಆಗ್ರಹಿಸಿದರು.

ಮಂಗಳವಾರ ಪಟ್ಟಣಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ. ಜ್ಞಾನಪ್ರಕಾಶ ಅವರಿಗೆ ಮನವಿ ಸಲ್ಲಿಸಿ, ಬಾಲಕ, ಬಾಲಕಿಯರ ವಸತಿ ನಿಲಯಗಳಿಗೆ ಸರ್ಕಾರದ ನೀತಿ, ನಿಯಮಗಳ ಅಡಿ ಆಹಾರ ಧಾನ್ಯ ಪೂರೈಕೆ ಆಗುತ್ತಿಲ್ಲ.

ಸಮವಸ್ತ್ರ, ನಿತ್ಯ ಬಳಕೆ ವಸ್ತುಗಳ ಪೂರೈಕೆ, ಪಠ್ಯ ಪುಸ್ತಕಗಳ ಕೊರತೆಯಿಂದ ಪರಿಶಿಷ್ಟ ಜಾತಿ, ಪಂಗಡದ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯುವಂತಾಗಿದೆ ಎಂದು ಆರೋಪಿಸಿದರು.

ಬಹುತೇಕ ವಸತಿ ನಿಲಯಗಳಲ್ಲಿ ಸಮರ್ಪಕ ಹಾಗೂ ಶುದ್ಧ ಕುಡಿಯುವ ನೀರಿನ ಕೊರತೆ ಇದೆ. ಸಾಕಷ್ಟು ಬಾರಿ ಹಿರಿಯ ಅಧಿಕಾರಿಗಳ ಗಮನ ಸೆಳೆದರು ಕೂಡ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮಕ್ಕಳ ಭವಿಷ್ಯದ ಜತೆ ಆಟವಾಡುತ್ತಿರುವ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿದರು.

ಪದಾಧಿಕಾರಿಗಳಾದ ಅಂಬಣ್ಣ ಬೆನಕನಾಳ, ದುರುಗಪ್ಪ ಡಬ್ಬೇರಮಡು, ಹುಲಗಪ್ಪ ಕುಣಿಕೆಲ್ಲೂರು, ಹುಲಗಪ್ಪ ನಿಲೋಗಲ್, ಹನುಮಂತ ಶೀಲಹಳ್ಳಿ, ನಾಗಪ್ಪ ನೀರಲಕೇರಿ, ಯಮನಪ್ಪ ಈಚನಾಳ, ಅಮರೇಶ ಗುಡಿಹಾಳ, ಶಿವರಾಯಪ್ಪ ಹಿರೇಉಪ್ಪೇರಿ, ಬೈಲಪ್ಪ ತೆರೆಬಾವಿ ಇನ್ನಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.