ADVERTISEMENT

ಹದಗೆಟ್ಟ ಮುಖ್ಯ ರಸ್ತೆ: ದುರಸ್ತಿ ಯಾವಾಗ?

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 6:24 IST
Last Updated 4 ಜನವರಿ 2014, 6:24 IST
ದೇವದುರ್ಗ ಪಟ್ಟಣದ ಬಜಾರ್‌ ಮುಖ್ಯ ರಸ್ತೆ ಮತ್ತು ಚರಂಡಿ ನಿರ್ಮಿಸದ ಕಾರಣ ತೀವ್ರ ಹದಗೆಟ್ಟಿರುವುದು
ದೇವದುರ್ಗ ಪಟ್ಟಣದ ಬಜಾರ್‌ ಮುಖ್ಯ ರಸ್ತೆ ಮತ್ತು ಚರಂಡಿ ನಿರ್ಮಿಸದ ಕಾರಣ ತೀವ್ರ ಹದಗೆಟ್ಟಿರುವುದು   

ದೇವದುರ್ಗ: ಅಭಿವೃದ್ಧಿ ಹೆಸರಿನಲ್ಲಿ ಪಟ್ಟಣದ ಬಜಾರ್ ಮುಖ್ಯ ರಸ್ತೆಯನ್ನು ವಿಸ್ತರಣೆಗೊಳಿಸಿ ಮೂರು ವರ್ಷ ಕಳೆದರೂ ಇಂದಿಗೂ ದುರಸ್ತಿ ಭಾಗ್ಯ ಕಂಡಿಲ್ಲ. ಹದಗೆಟ್ಟ ರಸ್ತೆ ಐಅಔಅಘ ಕಾಮಗಾರಿ ಆರಂಭವಾಗುತ್ತದೆ ಎಂಬ ಸ್ಥಳೀಯರ ಪ್ರಶ್ನೆ, ಪ್ರಶ್ನೆಯಾಗಿ ಉಳಿದಿದೆ.

ಸುಮಾರು ನೂರಾರು ವರ್ಷಗಳಿಂದ ಇದ್ದ ಪಟ್ಟಣದ ಡಾ. ಅಂಬೇಡ್ಕರ್‌ ವೃತ್ತದಿಂದ ತಪ್ಪರ್‌ಗುಂಡ ಮಸೀದಿ ಮತ್ತು ದರ್ಬಾರದಿಂದ ಪೊಲೀಸ್‌ ಠಾಣೆ ವರೆಗಿನ 3.5 ಕಿ.ಮೀ. ಬಜಾರ್ ಮುಖ್ಯ ರಸ್ತೆಯನ್ನು ಜಿಲ್ಲಾಧಿಕಾರಿ ಆದೇಶದ ಮೇರೆಗೆ 3 ವರ್ಷದ ಹಿಂದೆಯೇ ಪುರಸಭೆ ಆಡಳಿತ ವಿಸ್ತರಣೆಗೊಳಿಸಿದೆ.

ವಿಸ್ತರಣೆಯ ಪೂರ್ವದಲ್ಲಿ ಆಗಿನ ಜಿಲ್ಲಾಧಿಕಾರಿ ಅನ್ಬುಕುಮಾರ ಅವರ ಆದೇಶದ ಮೇರೆಗೆ ಸ್ಥಳೀಯ ಪುರಸಭೆ ಆಡಳಿತ ಕಟ್ಟಡ ಮಾಲೀಕರ ಮತ್ತು ಸಾರ್ವಜನಿಕರ ಸಭೆಯನ್ನು ಆಯೋಜಿಸಿ ಮುಖ್ಯ ರಸ್ತೆಯನ್ನು ವಿಸ್ತರಣೆ ಮಾಡಿದ ಕೂಡಲೇ ವೈಜ್ಞಾನಿಕವಾಗಿ ಚರಂಡಿ ಮತ್ತು ರಸ್ತೆಯನ್ನು ನಿರ್ಮಿಸಿಕೊಡಲಾಗುವುದು ಎಂದು ಭರವಸೆ ಸಹ ನೀಡಲಾಗಿತ್ತು.

ಆದರೆ ಜಿಲ್ಲಾಧಿಕಾರಿ ಮತ್ತು ಪುರಸಭೆ ಆಡಳಿತ ಸಾರ್ವಜನಿಕವಾಗಿ ನೀಡಿದ್ದ ಭರವಸೆಯಂತೆ ನಡೆದುಕೊಳ್ಳಲಿಲ್ಲ. ಇದೇ ಕಾರಣಕ್ಕಾಗಿಯೇ ಬೆಳಗಾದರೆ ಸಾಕು ಕೊಳಚೆ ನೀರು ನಿಲ್ಲುವ ಹದಗೆಟ್ಟ ರಸ್ತೆಯಲ್ಲಿ ಕಾಲಕಳೆಯಬೇಕಾದ ಪರಿಸ್ಥಿತಿ ಬಂದಿದೆ.
ಅಂದು ತಿಂಗಳಗಟ್ಟಲೇ ನಡೆದ 3ಕಿ.ಮೀ. ಉದ್ದದ ಮುಖ್ಯರಸ್ತೆ ವಿಸ್ತರಣೆ ವೇಳೆ ಜಿಲ್ಲಾಧಿಕಾರಿ (ಅನ್ಬಕುಮಾರ) ಆಗಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು.

ಜೊತೆಗೆ ಕೂಡಲೇ ಪುರಸಭೆಗೆ ಹಣ ಬಿಡುಗಡೆಗೊಳಿಸಿ ಚರಂಡಿ ಮತ್ತು ರಸ್ತೆಯನ್ನು ನಿರ್ಮಿಸಿಕೊಡಲಾಗುವುದು ಎಂಬ ಭರವಸೆ ಈಗ ಹುಸಿಯಾಗಿರುವುದರಿಂದ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲದಂತಾಗಿದೆ ಎಂದು ಕಟ್ಟಡ ಮಾಲೀಕರ ಆರೋಪವಾಗಿದೆ.

‘ಈಡೇರದ ಭರವಸೆ’
ಪಟ್ಟಣದ ಬಜಾರ್‌ ಮುಖ್ಯ ರಸ್ತೆ ಮತ್ತು ಚರಂಡಿಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂಬ ಭರವಸೆ ನೀಡಿ ರಸ್ತೆಯನ್ನು ವಿಸ್ತರಣೆಗೊಳಿಸಿ ಮೂರು ವರ್ಷಗಳೂ ಕಳೆದರೂ ಯಾರೊಬ್ಬರೂ ಇತ್ತಕಡೆ ಸುಳಿದಿಲ್ಲ. ಹದಗೆಟ್ಟ ಮುಖ್ಯ ರಸ್ತೆ ಮತ್ತು ರಸ್ತೆಯ ಮೇಲೆ ಹರಿಯುವ ಕೊಳಚೆ ನೀರಿನಲ್ಲಿ ಪಟ್ಟಣದ ನಾಗರಿಕರು ಕಾಲಕಳೆಯಬೇಕಾಗಿದೆ. ನೀಡಿದ ಭರವಸೆಯಂತೆ ಅಧಿಕಾರಿಗಳು ನಡೆದುಕೊಳ್ಳದೆ ಪಟ್ಟಣದ ನಾಗರಿಕರಿಗೆ ಮೋಸ ಮಾಡಿದ್ದಾರೆ.
–ಬಲಭೀಮ ಹೂಗಾರ, ವ್ಯಾಪಾರಸ್ಥ

‘ಆದೇಶ ಬಂದರೆ ಕ್ರಮ’
ಬಜಾರ್ ಮುಖ್ಯರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಗೆ ಕಾಮಗಾರಿಯನ್ನು ವಹಿಸಲಾಗಿದೆ. ಜಿಲ್ಲಾಧಿಕಾರಿ ಆದೇಶ ಬಂದ ಕೂಡಲೇ ಟೆಂಡರ್ ಕರೆಯಲಾಗುವುದು.
–ಬಸಲಿಂಗಪ್ಪ ನೈಕೋಡಿ ಪ್ರಭಾರ ಮುಖ್ಯಾಧಿಕಾರಿ

‘ನಿರ್ಧಾರ’
ಪಟ್ಟಣದ 3ಕಿ.ಮೀ ಉದ್ದದ ಬಜಾರ್‌ ಮುಖ್ಯ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಈಗಾಗಲೇ ಕ್ರಿಯಾ ಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ₨4 ಕೋಟಿ ವೆಚ್ಚದಲ್ಲಿ ರಸ್ತೆ,  ₨4ಕೋಟಿ ವೆಚ್ಚದಲ್ಲಿ ಚರಂಡಿ ನಿರ್ಮಿಸಲಾಗುವುದು. 
–ಶರಣಪ್ಪ ಕೌಳ್ಳೂರು ಕಿರಿಯ ಎಂಜಿನಿಯರ್‌ ಪುರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT