ADVERTISEMENT

ಹಳ್ಳಿ ಗಾಡಿನ ಸೊಬಗು, ಸೌರಮಂಡಲದ ಬೆರಗು

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 9:21 IST
Last Updated 1 ಜನವರಿ 2014, 9:21 IST

ಹಟ್ಟಿ ಚಿನ್ನದ ಗಣಿ: ಇಲ್ಲಿನ ಶೇಖಮ್ಮ ನಾರಾಯಣ ವಿದ್ಯಾಸಂಸ್ಥೆಯ ಮಕ್ಕಳು ಶಾಲೆಯಲ್ಲಿ ಇತ್ತೀಚೆಗೆ ನಡೆದ ವಸ್ತುಪ್ರದರ್ಶನ ದಲ್ಲಿ ಮಕ್ಕಳ ಅಪರೂಪದ ಮಾದರಿಗಳನ್ನು ನಿರ್ಮಿಸಿ ಶಿಕ್ಷಕರು, ನಾಗರಿಕರು ಹುಬ್ಬೇರುವಂತೆ ಮಾಡಿದರು.

ಈ ಮಕ್ಕಳು ಜೀವಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಪರಿಸರ, ಸಮಾಜ ವಿಜ್ಞಾನ, ಭೂಗೋಳ ಶಾಸ್ತ್ರದ ಪಠ್ಯ ವಿಷಯ ಆಧರಿಸಿ ರಚಿಸಿದ ಮಾದರಿಗಳು ಮತ್ತು ತ್ಯಾಜ್ಯದಿಂದ ಮಾಡಿದ ವಸ್ತುಗಳು ಆಕರ್ಷಕವಾಗಿದ್ದವು.  ತಮ್ಮ ಸುಪ್ತಪ್ರತಿಭೆ ತೋರಿಸಿಕೊಟ್ಟರು.

ಹಗಲು–ರಾತ್ರಿ ಬದಲಾವಣೆ ತೋರಿಸುವ ಸೌರವ್ಯೂಹ ಮಾದರಿ ನೋಡುಗರಲ್ಲಿ ಅಚ್ಚರಿ ಮೂಡಿಸಿತು. 7ನೇ ತರಗತಿ ಹೆಣ್ಣುಮಕ್ಕಳು ಹಟ್ಟಿ ಚಿನ್ನದ ಗಣಿ ಕಾರ್ಮಿಕ ಸಂಘ ಕಟ್ಟಡದ ಮಾದರಿ ಅತಿ ಹೆಚ್ಚಿನ ಮೆಚ್ಚುಗೆ ಪಡೆಯಿತು. ಹಳ್ಳಿಯ ಮಾದರಿಯೂ ಹಳ್ಳಿಗರ ಜೀವನ ಕಣ್ಣಿ ಮುಂದೆ ಕಟ್ಟಿಕೊಟ್ಟಿತು.

ಕಸಬರಿಗೆ ಕಡ್ಡ ಬಳಸಿದ ಪ್ಯಾರಿಸಿನ ಐಫೆಲ್ ಟವರ್‌ ಮಾದರಿ ಮೋಹಕ ವಾಗಿತ್ತು. ಜೀವಶಾಸ್ತ್ರಕ್ಕೆ ಸಂಬಂಧಿಸಿದ ಮನುಷ್ಯ ದೇಹದ ಅಂಗಾಂಗಗಳಾದ ಕಿವಿ, ಮೂತ್ರಪಿಂಡ, ಜೀರ್ಣಾಂಗ, ಹೃದಯ, ಶ್ವಾಸಕೋಶದ ಮಾದರಿಗಳು ಮಕ್ಕಳ ಪ್ರಬುದ್ಧತೆಗೆ ಸಾಕ್ಷಿಯಾದವು.

ಮಂಡಕ್ಕಿ ಮಾಲೆ ವಿಶೇಷ ಎನಿಸಿತ್ತು. ಲಾವಾ ಉಗುಳುವ ಜ್ವಾಲಾಮುಖಿ ಪರ್ವತದ ಮಾದರಿಯಂತೂ ನೋಡುಗರನ್ನು ದಂಗು ಬಂಡಿಸಿತು. ವಸ್ತುಪ್ರದರ್ಶನ ವೀಕ್ಷಿಸಲು ಪಾಲಕರಿಗೆ ಒಂದು ದಿನ ಮೀಸಲಿಡಲಾಗಿತ್ತು.  ಜತೆಗೆ ಮಕ್ಕಳ ಅರ್ಥಪೂರ್ಣ ವಿವರಣೆ ಪ್ರದರ್ಶ ನಕ್ಕೆ ಮೆರುಗು ನೀಡಿತು ಎಂದು ಶಾಲೆಯ ಮುಖ್ಯಗುರು ಆದಯ್ಯ ಹೇಳುತ್ತಾರೆ.

‘ಮಕ್ಕಳು ವಿಜ್ಞಾನದ ಬಗ್ಗೆ ಅರಿಯಲು ಇದು ಉಪಯುಕ್ತ’ ಎಂದು ಲಿಂಗಸಗೂರು ಕ್ಷೇತ್ರ ಶಿಕ್ಷಣಾಧಿಕಾರಿ  ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಮಟ್ಟದ ವಸ್ತುಪ್ರದರ್ಶನವನ್ನು 3 ದಿನ ಗಳಿಗೆ ವಿಸ್ತರಿಸುವಂತೆ ಆದೇಶಿದರು. ಹಟ್ಟಿ ವಲಯದ ಎಲ್ಲ ಶಾಲಾ ಮಕ್ಕಳಿಗೆ ಈ ವಸ್ತುಪ್ರದರ್ಶನ ತಪ್ಪದೇ ತೋರಿಸುವಂತೆ ಮುಖ್ಯಗುರುಗಳಿಗೆ  ಸೂಚಿಸಿದರು. 24 ಶಾಲೆಗಳ ಮಕ್ಕಳು ಈ ಪ್ರದರ್ಶನ ವೀಕ್ಷಿಸಿದರು. ಎಲ್ಲ ಶಾಲೆಗಳಿಂದ, ಪಾಲಕರಿಂದ ಮೆಚ್ಚುಗೆ ಮಹಾಪೂರವೇ ಹರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.