ADVERTISEMENT

`ಹೊಸ ವರ್ಷಾಚರಣೆ ಹುಚ್ಚಾಟ ನಿಲ್ಲಿಸಿ'

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 7:05 IST
Last Updated 24 ಡಿಸೆಂಬರ್ 2012, 7:05 IST

ರಾಯಚೂರು: ಹೊಸ ವರ್ಷಾಚರಣೆ ನೆಪದಲ್ಲಿ  ಡಿಸೆಂಬರ್ 31ರಂದು ರಾಜ್ಯದ ವಿವಿಧ ತೀರ್ಥ ಕ್ಷೇತ್ರ, ಸಾರ್ವಜನಿಕ ಸ್ಥಳ ಮತ್ತು ಪ್ರೇಕ್ಷಣೀಯ ಪ್ರದೇಶದಲ್ಲಿ ನಡೆಯುವ ಕುಸಂಸ್ಕೃತಿಯನ್ನು ತಡೆಗಟ್ಟಬೇಕು. ಹೊಸ ವರ್ಷಾಚರಣೆ ನೆಪದಲ್ಲಿ ಹುಚ್ಚಾಟದ ವರ್ತನೆ ನಿಲ್ಲಿಸಬೇಕು. ಯುಗಾದಿ ಹಬ್ಬದ ದಿನ ಹೊಸ ವರ್ಷದ ಆಚರಣೆ ಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕಾರಿಣಿ ಸುವರ್ಣ ಶ್ರೀಕಾಂತ ತಿಳಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಶ್ಚಾತ್ಯ ಸಂಸ್ಕೃತಿಗೆ ಯುವಕ-ಯುವತಿಯರು ಮಾರು ಹೋಗುತ್ತಿದ್ದಾರೆ. ಇದು ಹಿಂದೂ ಸಂಸ್ಕೃತಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಇಂಥ ಆಚರಣೆಗಳ ಮೂಲಕ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಡಿಸೆಂಬರ್ 31ರಂದು ನಡೆಸುವ ಹೊಸ ವರ್ಷಾಚರಣೆ ನಮ್ಮ ಸಂಸ್ಕೃತಿ, ನಮ್ಮ ಜೀವನಪದ್ಧತಿಗೆ ವಿರೋಧವಾಗಿದೆ.  ಇಂಥ ಆಚರಣೆಗಳಿಂದ ಯುವ ಪೀಳಿಗೆ ಅಧೋಗತಿಗೆ ಹೋಗುತ್ತದೆ. ಆ ಹೊಸ ವರ್ಷಾಚರಣೆ ಗುಂಗಿನಲ್ಲಿ ಅನೇಕ ಅವಘಡಗಳು ನಡೆಯುತ್ತವೆ. ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಲು ಕಾರಣ ಆಗುತ್ತದೆ. 2009ರಲ್ಲಿ ಮುಂಬೈನಲ್ಲಿ 24.66 ಕೋಟಿ ಮದ್ಯವನ್ನು ಒಬ್ಬನೇ ವ್ಯಾಪಾರಿ ಮಾರಾಟ ಮಾಡಿದ್ದಾನೆ.  2010ರ ಡಿಸೆಂಬರ್ 31ರ ರಾತ್ರಿ ಗೋವಾದಲ್ಲಿ ಪಾನಮತ್ತರಾಗಿ ವಾಹನ ಚಲಾಯಿಸಿ 30ಕ್ಕೂ ಹೆಚ್ಚು ಅಪಘಾತ ಸಂಭವಿಸಿವೆ. ಅಮಲು ಪದಾರ್ಥ ಸೇವನೆ, ಹೊಡೆದಾಟ ಕೃತ್ಯಗಳು ಪ್ರತಿ ವರ್ಷ ಎಲ್ಲೆಡೆಯಿಂದ ವರದಿಯಾಗುತ್ತಲೇ ಇವೆ ಎಂದು ವಿವರಿಸಿದರು.

ಡಿಸೆಂಬರ್ 31ರಂದು ಹೊಸ ವರ್ಷಾಚರಣೆ ಎಂದು ಕುಡಿದು, ಕುಣಿದು ಕುಪ್ಪಳಿಸುವುದರಿಂದ ಏನೂ ಪ್ರಯೋಜನವಿಲ್ಲ. ಇದನ್ನು ಪಾಲಕರು, ಹಿರಿಯರು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಎಚ್ಚರಿಕೆ ವಹಿಸಬೇಕು. ಯುವಕ-ಯುವತಿಯರು ಇಂಥ ಹುಚ್ಚಾಟದ ಆಚರಣೆಗಳಿಗೆ ಮೋಜು ಮಸ್ತಿ ಗುಂಗಿನಲ್ಲಿ ಮುಳುಗಬಾರದು ಎಂದು ಹೇಳಿದರು.

ಹೊಸ ವರ್ಷಾಚರಣೆ ನೆಪದಲ್ಲಿ ನಡೆಯುವ ಹುಚ್ಚಾಟ, ಅವಘಡ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಹೆಚ್ಚು ಪೊಲೀಸರನ್ನು ಗಸ್ತಿಗೆ ನಿಯೋಜಿಸಬೇಕು. ಆಯಕಟ್ಟಿನ ಪ್ರದೇಶದಲ್ಲಿ ಹೆಚ್ಚು ಪೊಲೀಸ್ ಭದ್ರತೆ ಒದಗಿಸಬೇಕು. ಹುಚ್ಚಾಟದ ವರ್ತನೆಗೆ ಮೂಗುದಾರ ಹಾಕಬೇಕು ಎಂದು ಪೊಲೀಸ್ ಇಲಾಖೆಗೆ ಸಂಘಟನೆಯು ಮನವಿ ಮಾಡುತ್ತಿದೆ ಎಂದು ತಿಳಿಸಿದರು.

ಹಿಂದೂ ಜನಜಾಗೃತಿ ಸಮಿತಿಯಿಂದ ಹೊಸ ವರ್ಷಾಚರಣೆ  ತಡೆಗಟ್ಟುವ ಕುರಿತು ಶಾಲಾ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ. ನಗರದ 7 ಕಾಲೇಜಿನಲ್ಲಿ ಈ ರೀತಿ ಕಾರ್ಯಕ್ರಮವನ್ನು ಸಂಘಟನೆ ನಡೆಸಿದೆ. ಕರಪತ್ರ ಹಂಚಿಕೆ ಹಾಗೂ ಬಿತ್ತಿಪತ್ರಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಈ ಬಗ್ಗೆ ಇದೇ 24ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಸಮಿತಿಯ ಕೃಷ್ಣವೇಣಿ, ವಿಜಯಲಕ್ಷ್ಮಿ, ಜ್ಯೋತಿ, ಪದ್ಮಾ ಮತ್ತು ರಮೇಶ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.