ADVERTISEMENT

‘ಗ್ರಾಮೀಣ ಕಲೆ ಉಪೇಕ್ಷೆ ಬೇಡ’

‘ಸುಗ್ಗಿ–ಹುಗ್ಗಿ’ ಗ್ರಾಮೀಣ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2014, 9:00 IST
Last Updated 24 ಮಾರ್ಚ್ 2014, 9:00 IST

ರಾಯಚೂರು: ಜನಪದ ಕಲೆಗಳ ಬಗ್ಗೆ ಉಪೇಕ್ಷೆಯಿಂದ ಆ ಕಲೆಗಳು ನಶಿಸಿ ಹೋಗುವ ಅಪಾಯ ಕಂಡು ಬರುತ್ತಿದೆ. ಕಲೆ ಉಳಿಸುವುದು ಪ್ರತಿಯೊಬ್ಬರ ಜವಾ­ಬ್ದಾರಿಯಾಗಿದೆ. ಈ ದಿಶೆಯಲ್ಲಿ ಸುಗ್ಗಿ –ಹುಗ್ಗಿಯಂಥ ಉತ್ಸವಗಳು ಪ್ರಮುಖ ಪಾತ್ರವಹಿಸುತ್ತವೆ. ಜನಪದ ಕಲೆಗಳ ಮಹತ್ವ ತಿಳಿಸುತ್ತವೆ ಎಂದು ಜಿಲ್ಲಾಧಿ­ಕಾರಿ ಎಸ್.ಎನ್ ನಗರಾಜು ಹೇಳಿದರು.

ಇಲ್ಲಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನು­ವಾರ ಕನ್ನಡ ಮತ್ತು ಸಂಸ್ಕೃತಿ ಇಲಾ­ಖೆಯು ಆಯೋಜಿಸಿದ್ದ ಸುಗ್ಗಿ–ಹುಗ್ಗಿ ಗ್ರಾಮೀಣ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ­ದರು.

ಇಂದಿನ ಯಾಂತ್ರಿಕ ಬದುಕಿನಲ್ಲಿ ಕಲೆಗಳ ಬಗ್ಗೆ ನಿರಾಸಕ್ತಿ ಹೆಚ್ಚಾಗಿ­ರುವುದು ವಿಷಾದನೀಯ.  ಸಾಂಸ್ಕೃತಿಕ ಉತ್ಸವದಲ್ಲಿ ಜನ ಹೆಚ್ಚು ಆಸಕ್ತಿಯಿಂದ ಪಾಲ್ಗೊಳ್ಳಬೇಕು. ತಮ್ಮ ಕಲಾ ಪ್ರತಿಭೆ ಮೆರೆಯಬೇಕು. ವಯಸ್ಸಿನ ನಿರ್ಬಂಧ­ವಿಲ್ಲ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಮಹಾಂತೇಶ ಮಸ್ಕಿ ಮಾತ­ನಾಡಿ, ಈಗಿನ ದಿನಗಳಲ್ಲಿ ಗೃಹೋಪಯೋಗಿ ವಸ್ತುಗಳ ಬಗ್ಗೆ ಅತೀಯಾದ ವ್ಯಾಮೋಹ, ಆಧುನಿ­ಕತೆಯ ಅಬ್ಬರದಲ್ಲಿ ಜಾನಪದ ವೈವಿಧ್ಯತೆ ಕಡಿಮೆಯಾಗುತ್ತಿದೆ. ಜಾನಪದ ಕಲೆಯ ಉಳಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು  ಕರ್ನಾಟಕ ಜಾನಪದ ಪರಿಷತ್ತುಜಿಲ್ಲಾ ಘಟಕದ ಅಧ್ಯಕ್ಷ ಅಯ್ಯಪ್ಪ ತುಕ್ಕಾಯಿ ವಹಿಸಿದ್ದರು. ಎ.ಎಂ.ಇ ಕಾಲೇಜಿನ ಉಪನ್ಯಾಸಕರಾದ ರಾಜಶ್ರೀ ಕಲ್ಲೂರಕರ್ ಅವರು ವಿಶೇಷ ಉಪನ್ಯಾಸ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಉಮೇಶ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಟಿ ಕನುಮಪ್ಪ, ಜಿಲ್ಲಾ ಕಾರ್ಯನಿರತ ಪರ್ತಕರ್ತಕರ ಸಂಘದ ಅಧ್ಯಕ್ಷ ಚನ್ನಬಸವಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಾಂಜನೇಯ ಹಾಗೂ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.