ADVERTISEMENT

ಬಂಜಾರ ಭವನ ನಿರ್ಮಾಣಕ್ಕೆ ₹ 2 ಕೋಟಿ

ಅನುದಾನ ಘೋಷಿಸಿದ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 4:57 IST
Last Updated 23 ನವೆಂಬರ್ 2020, 4:57 IST
ಮಸ್ಕಿಯಲ್ಲಿ ಭಾನುವಾರ ಬಿಜೆಪಿ ಏರ್ಪಡಿಸಿದ್ದ ತಾಲ್ಲೂಕು ಬಂಜಾರ ಸಮಾವೇಶದಲ್ಲಿ ಶಾಸಕ ಹಾಗೂ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್ ಮಾತನಾಡಿದರು
ಮಸ್ಕಿಯಲ್ಲಿ ಭಾನುವಾರ ಬಿಜೆಪಿ ಏರ್ಪಡಿಸಿದ್ದ ತಾಲ್ಲೂಕು ಬಂಜಾರ ಸಮಾವೇಶದಲ್ಲಿ ಶಾಸಕ ಹಾಗೂ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್ ಮಾತನಾಡಿದರು   

ಮಸ್ಕಿ: ಪಟ್ಟಣದಲ್ಲಿ ತಾಲ್ಲೂಕು ಬಂಜಾರ ಭವನ ನಿರ್ಮಾಣಕ್ಕೆ ತಾಂಡಾ ಅಭಿವೃದ್ಧಿ ನಿಗಮದಿಂದ ₹ 2 ಕೋಟಿ ಅನುದಾನವನ್ನು ಉಪ ಚುನಾವಣೆ ಮುಗಿಯುವುದರೊಳಗಾಗಿ ಮುಂಜೂರು ಮಾಡಲಾಗುವುದು ಎಂದು ಶಾಸಕರೂ ಆಗಿರುವ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್ ಘೋಷಿಸಿದರು.

ಪಟ್ಟಣದ ಭ್ರಮರಾಂಬಾ ದೇವಸ್ಥಾನದಲ್ಲಿ ಭಾನುವಾರ ಬಿಜೆಪಿ ಏರ್ಪಡಿಸಿದ್ದ ಬಂಜಾರ ಸಮಾವೇಶ ಉದ್ಘಾಟಿಸಿ ಮಾತನಾಡಿ, ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚಿಸಿದಂತೆ ಬಂಜಾರ ಸಮಾಜದ ಯುವಕರು ವಲಸೆ ಹೋಗುವುದನ್ನು ತಡೆಯುವ ಸಲುವಾಗಿ ತಾಲ್ಲೂಕಿನ 200 ಜನ ನಿರದ್ಯೋಗಿ ಯುವಕರಿಗೆ ಕೌಶಲ ಅಭಿವೃದ್ಧಿಗೆ ಆದೇಶ ನೀಡಲಾಗುವುದು’ ಎಂದರು.

ಪ್ರತಾಪಗೌಡ ಪಾಟೀಲ್ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಆಯ್ಕೆ ಮಾಡಬೇಕು ಎಂದರು.

ADVERTISEMENT

ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ಕ್ಷೇತ್ರದಲ್ಲಿನ ತಾಂಡಾಗಳ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡುವುದಾಗಿ ತಿಳಿಸಿದರು.

ಬಂಜಾರ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಪಾಂಡುರಂಗ ಪಮ್ಮಾರ, ಹರಿಶ್ಚಂದ್ರ ರಾಠೋಡ ಅಮರೇಶ ನಾಯ್ಕ, ಯಲ್ಲೋಜಿರಾವ್, ಕೆ. ಶಿವಪ್ಪ ಸೇರಿದಂತೆ
ಬಂಜಾರ ಸಮಾಜದ ಮುಖಂಡರು ಇದ್ದರು.

ಎತ್ತಿನಬಂಡೆ ಮೆರವಣಿಗೆ: ಬಂಜಾರ ಸಮಾವೇಶ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ 50ಕ್ಕೂ ಹೆಚ್ಚು ಎತ್ತಿನಬಂಡೆಗಳ ಮೆರವಣಿಗೆ ನಡೆಯಿತು. ಎತ್ತಿನ ಬಂಡೆಯಲ್ಲಿ ಶಾಸಕ ಪಿ. ರಾಜೀವ್, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಪಾಲ್ಗೊಂಡಿದ್ದರು.

ಬಂಜಾರ ಸಮಾಜದ ಮಹಿಳೆಯರು ಲಮಾಣಿ ಉಡುಪಿನಲ್ಲಿ ಹಾಡುತ್ತಾ, ಕುಣಿಯುತ್ತಾ ಮೆರವಣಿಗೆಯಲ್ಲಿ ಸಾಗಿದರು.

‘ಕಂದಾಯ ಗ್ರಾಮ ಕಾರ್ಯ ಪ್ರಗತಿ’

ಮಸ್ಕಿ: ರಾಜ್ಯದ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ಕೆಲಸ ಪ್ರಗತಿಯಲ್ಲಿದ್ದು ಶೇ 80 ರಷ್ಟು ಕಾರ್ಯ ಮುಗಿದಿದೆ ಎಂದು
ಕುಡಚಿ ಶಾಸಕ ರಾಜೀವ್ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಾಂಡಾ ಅಭಿವೃದ್ಧಿ ದೃಷ್ಟಿಯಿಂದ ತಾಂಡಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಮೂಲಕ ಮುಖ್ಯಮಂತ್ರಿ ಅವರು ಅದರ ಹೊಣೆಯನ್ನು ನನಗೆ ಒಪ್ಪಿಸಿದ್ದಾರೆ. ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಶೀಘ್ರ ಘೋಷಣೆ ಮಾಡಲಾಗುವುದು ಎಂದರು.

ಪ್ರತಾಪಗೌಡ ಪಾಟೀಲ್ ಅವರು, ಯಡಿಯೂರಪ್ಪ ಸಿಎಂ ಆಗಬೇಕು ಎಂಬ ಉದ್ದೇಶದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಸ್ಕಿ ಕ್ಷೇತ್ರದಲ್ಲಿ ಪ್ರತಾಪಗೌಡ ಪಾಟೀಲ್ ಅವರು ತಾಂಡಾಗಳು ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಕ್ಷೇತ್ರದ ಜನರು ಉಪ ಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲ್ ಅವರಿಗೆ ಹೆಚ್ಚಿನ ಮತಗಳನ್ನು ನೀಡಿ ಆಯ್ಕೆ ಮಾಡಲಿದ್ದಾರೆ ಎಂದರು.

ಮುಖಂಡ ಪ್ರಸನ್ನ ಪಾಟೀಲ್, ಹರಿಚ್ಚಂದ್ರ ರಾಠೋಡ ಅಮರೇಶ ನಾಯ್ಕ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.