ADVERTISEMENT

100 ಕೋಟಿ ವೆಚ್ಚದ ಕಾಮಗಾರಿ ಶುರು

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 9:33 IST
Last Updated 10 ಜೂನ್ 2013, 9:33 IST

ಸಿಂಧನೂರು: ಸಿಂಧನೂರು ವಿಭಾಗಕ್ಕೆ ಒಳಪಡುವ ತುಂಗಭದ್ರಾ ಎಡದಂಡೆ ಮುಖ್ಯಕಾಲುವೆ ಸೇರಿದಂತೆ ವಿವಿಧ ವಿತರಣಾ ಕಾಲುವೆಗಳಿಗೆ ಕಾಂಕ್ರಿಟ್ ತಡೆಗೋಡೆ ನಿರ್ಮಿಸುವ ಮೂಲಕ ಆಧುನೀಕರಣಗೊಳಿಸಲು ರಾಜ್ಯ ಸರ್ಕಾರ 100ಕೋಟಿ ಅಂದಾಜು ಪತ್ರಿಕೆಗೆ ಅನುಮತಿ ನೀಡಿದ್ದು ಕಾಮಗಾರಿ ಪ್ರಾರಂಭವಾಗಿವೆ ಎಂದು ನೀರಾವರಿ ಇಲಾಖೆಯ ಸಿಂಧನೂರು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಆರ್.ಮುಲ್ಲಾ ತಿಳಿಸಿದರು.

ಭಾನುವಾರ `ಪ್ರಜಾವಾಣಿ'ಯೊಂದಿಗೆ ಮಾತನಾಡಿ, ಸಿಂಧನೂರು ವಿಭಾಗದ ವ್ಯಾಪ್ತಿಗೆ ಒಳಪಡುವ ಜವಳಗೇರಾ ಉಪವಿಭಾಗದಲ್ಲಿ ಅತಿದೊಡ್ಡದಾದ 54ನೇ ವಿತರಣಾ ಕಾಲುವೆ ಮತ್ತು ಅದಕ್ಕೆ ಸಂಬಂಧಿಸಿದ ಉಪಕಾಲುವೆಗಳನ್ನು ಸಹ ಸುಭದ್ರಗೊಳಿಸಲಾಗುವುದು. ತುರ್ವಿಹಾಳ ಉಪವಿಭಾಗಕ್ಕೆ 37ರಿಂದ 48ರವರೆಗಿನ ವಿತರಣಾ ಕಾಲುವೆಗಳು, ಮಸ್ಕಿ ಉಪವಿಭಾಗಕ್ಕೆ 49ರಿಂದ 56ರವರೆಗಿನ ಉಪಕಾಲುವೆಗಳು, ಸಿಂಧನೂರು ಉಪವಿಭಾಗಕ್ಕೆ ಕಾಲುವೆ 3ರ ವ್ಯಾಪ್ತಿಯಲ್ಲಿ 36ನೇ ವಿತರಣಾ ಕಾಲುವೆ ಬರುತ್ತಿದ್ದು ಅಂದಾಜು 92ಕೋಟಿ ವೆಚ್ಚದಲ್ಲಿ ಈ ಕಾಲುವೆಗಳನ್ನು ಆಧುನೀಕರಣಗೊಳಿಸಲಾಗುವುದು.

ಮಸ್ಕಿ ಮತ್ತು ತುರ್ವಿಹಾಳ ಉಪವಿಭಾಗದ ಮಧ್ಯದಲ್ಲಿ ಒಂದುವರೆ ಕಿ.ಮೀ. ಮುಖ್ಯಕಾಲುವೆ ಆಧುನೀಕರಣಕ್ಕೆ 8ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಪ್ಯಾಕೇಜ್ ಟೆಂಡರ್‌ನಲ್ಲಿ ಈ ಕೆಲಸಗಳನ್ನು ಡಿ.ವೈ.ಉಪ್ಪಾರರಿಗೆ ಗುತ್ತಿಗೆದಾರಿಕೆ ನೀಡಲಾಗಿದ್ದು ಕಾಮಗಾರಿ ಪೂರ್ಣಕ್ಕೆ ಮೂರು ತಿಂಗಳ ನಿಗದಿಪಡಿಸಲಾಗಿದೆ. ಒಂದು ವರ್ಷದವರೆಗೆ ಕಾಲುವೆ ನಿರ್ವಹಣೆ ಜವಾಬ್ದಾರಿಯನ್ನೂ ಗುತ್ತಿಗೆದಾರರಿಗೆ ನೀಡಲಾಗಿದೆ. ಪ್ರಸ್ತುತ 50ಕೋಟಿ ವೆಚ್ಚದ ಕೆಲಸಕ್ಕೆ ಜಿಲ್ಲಾಧಿಕಾರಿ ಅಸ್ತು ನೀಡಿದ್ದು ಇನ್ನುಳಿದ ಕಾಮಗಾರಿಗಳ ಬಗ್ಗೆ ಸರ್ಕಾರದಿಂದ ಅನುಮತಿ ಪಡೆಯಬೇಕಾಗಿದೆ ಎಂದು ವಿವರಿಸಿದರು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ಕಳೆದ ವರ್ಷ ನಿರ್ವಹಿಸಿದ ಕಾಮಗಾರಿಯಲ್ಲಿ ಲೋಪದೋಷವಿದ್ದರೆ ಗುತ್ತಿಗೆದಾರರಿಂದ ಮತ್ತೊಂದು ಬಾರಿ ಅದೇ ಖರ್ಚಿನಲ್ಲಿ ದುರಸ್ತಿಗೊಳಿಸಲಾಗುವುದು. ತಾಲ್ಲೂಕಿನ ಅರಗಿಮರಕ್ಯಾಂಪ್ ಬಳಿ ಇರುವ 9ಆರ್. ಕಾಲುವೆಯ ಎರಡೂ ತಡೆಗೋಡೆಗಳು ಶಿಥಿಲಗೊಂಡಿದ್ದು ಅವುಗಳ ಕಾಮಗಾರಿ ಮಾಡಿದ ಗುತ್ತಿಗೆದಾರರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.