ADVERTISEMENT

4 ದಿನದೊಳಗೆ ಗುಡಿಸಲು ಸಮೀಕ್ಷೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 8:15 IST
Last Updated 11 ಅಕ್ಟೋಬರ್ 2011, 8:15 IST

ಸಿಂಧನೂರು: ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 5 ಸಾವಿರ ಮನೆ ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, 4 ದಿನದೊಳಗೆ ಗುಡಿಸಲು ನಿವಾಸಿಗಳ ಸಮೀಕ್ಷೆ ಮಾಡಿಕೊಡುವಂತೆ ಶಾಸಕ ವೆಂಕಟರಾವ್ ನಾಡಗೌಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೋಮವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಅವರು ಮಾತನಾಡಿದರು. ಈಗಾಗಲೇ 4500 ಮನೆಗಳ ಸಮೀಕ್ಷೆ ಮಾಡಲಾಗಿದ್ದು ಅದರಲ್ಲಿ ತಾಂತ್ರಿಕ ಕಾರಣಗಳಿಂದ 500 ಮನೆಗಳಿಗೆ ಅನುಮತಿ ಸಿಕ್ಕಿಲ್ಲ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮಗೊಳಿಸಲು ತಿಳಿಸಲಾಗುತ್ತಿದೆ. ಗುಡಿಸಲಿನಲ್ಲಿ ವಾಸಿಸುವ ಸ್ವಂತ ಜಾಗೆಯನ್ನು ಹೊಂದಿದ ಕುಟುಂಬಗಳನ್ನು ಸಮೀಕ್ಷೆ ಮಾಡುವಂತೆ ತಿಳಿಸಿದರು.

ಒಂದು ಸಾರಿ ಯಾವುದೇ ಒಂದು ಗ್ರಾಮವನ್ನು ರಾಜೀವಗಾಂಧಿ ವಸತಿ ನಿಗಮದಡಿಯಲ್ಲಿ ಆಯ್ಕೆ ಮಾಡಿದರೆ 5 ವರ್ಷಗಳವರೆಗೆ ಅಂತಹ ಗ್ರಾಮಕ್ಕೆ ಮನೆ ಸೌಲಭ್ಯ ಸಿಗುವುದಿಲ್ಲ. ನಿಯಮಾನುಸಾರ ಗುಡಿಸಲು ನಿವಾಸಿಗಳಿಗೆ ಅನ್ಯಾಯವಾಗದಂತೆ ಸಮೀಕ್ಷೆ ಮಾಡಿ ಯಾದಿಯನ್ನು ಸಲ್ಲಿಸುವಂತೆ ನಾಡಗೌಡ ತಿಳಿಸಿದರು.

ಅನರ್ಹ ಫಲಾನುಭವಿಗಳು ರಾಜಕೀಯ ಪ್ರಭಾವದಿಂದ ಬರೆಸುವ ಹೆಸರುಗಳನ್ನು ಬರೆದುಕೊಂಡು ನಂತರ ಕೈಬಿಡುವಂತೆ ಅವರು ಸೂಚಿಸಿದರು. ಫಲಾನುಭವಿಗಳ ಆಯ್ಕೆ ವಿಷಯದಲ್ಲಿ ತಾರತಮ್ಯ ಅಥವಾ ಕರ್ತವ್ಯ ಲೋಪವೆಸಗಿದರೆ ಕಠಿಣ ಕ್ರಮ ಅನುಭವಿಸಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶರಣಬಸವರಾಜ ಉಪಸ್ಥಿತರಿದ್ದರು.

ಯುವ ಕಾಂಗ್ರೆಸ್ ಚುನಾವಣೆ: ಬಿರುಸಿನ ಪ್ರಚಾರ
ಸಿಂಧನೂರು:  ರಾಜ್ಯ ಯುವ ಕಾಂಗ್ರೆಸ್ ಸಮಿತಿಯ ಚುನಾವಣೆ ಅ.12 ಮತ್ತು 13ರಂದು ನಡೆಯಲಿದ್ದು, ಚುನಾವಣಾ ಕಣದಲ್ಲಿರುವ ಪ್ರಿಯಾಂಕ್ ಖರ್ಗೆ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.

ಸೋಮವಾರ ಮಾಜಿ ಶಾಸಕ ಬಾದರ್ಲಿ ಹಂಪನಗೌಡ ಅವರ ನಿವಾಸದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ತಮಗೆ ಆದ್ಯತೆಯ ಮತ ನೀಡುವಂತೆ ಖರ್ಗೆ ಮನವಿ ಮಾಡಿದರು.

ದೇಶದ ಪರಿವರ್ತನೆಯಲ್ಲಿ ಯುವಕರ ಪಾತ್ರ ಬಹುದೊಡ್ಡದಾಗಿದೆ. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ದಿನೇಶ ಗುಂಡೂರಾವ್ ಮತ್ತು ಕೃಷ್ಣ ಬೈರೇಗೌಡ ಅವಧಿಯಿಂದಲೂ ಯುವ ಕಾಂಗ್ರೆಸ್‌ನಲ್ಲಿ ಸಕ್ರಿಯ ಕಾರ್ಯಕರ್ತನಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಅನುಭವ ಹೊಂದಿದ್ದೇನೆ. ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆ ಸಮಗ್ರ ಜಾರಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರ ನಿಯೋಗದೊಂದಿಗೆ ಕೇಂದ್ರಕ್ಕೆ ತೆರಳಿ ವಿಶೇಷವಾಗಿ ಶ್ರಮಿಸಿದ್ದೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.