ADVERTISEMENT

‘ಹಣಕ್ಕೆ ಮತ ಮಾರಿಕೊಳ್ಳಬೇಡಿ’

ಡಾ. ಬಿ.ಆರ್‌. ಅಂಬೇಡ್ಕರ್‌ 61ನೇ ಮಹಾಪರಿನಿರ್ವಾಣ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 10:53 IST
Last Updated 1 ಜನವರಿ 2018, 10:53 IST
ಲಿಂಗಸುಗೂರಿನಲ್ಲಿ ಅಂಬೇಡ್ಕರ್‌ ಅವರ 61ನೇ ಮಹಾಪರಿನಿರ್ವಾಣ ನಿಮಿತ್ತ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ ಉದ್ಘಾಟಿಸಿದರು
ಲಿಂಗಸುಗೂರಿನಲ್ಲಿ ಅಂಬೇಡ್ಕರ್‌ ಅವರ 61ನೇ ಮಹಾಪರಿನಿರ್ವಾಣ ನಿಮಿತ್ತ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ ಉದ್ಘಾಟಿಸಿದರು   

ಲಿಂಗಸುಗೂರು: ‘ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಪ್ರಜಾತಂತ್ರ ವ್ಯವಸ್ಥೆ ಗಟ್ಟಿಗೊಳಿಸಲು ಸಂವಿಧಾನಬದ್ಧವಾಗಿ ಸಾಮಾನ್ಯ ಜನರಿಗೂ ಮತ ಹಾಕುವ ಹಕ್ಕು ನೀಡಿದ್ದಾರೆ. ಪವಿತ್ರವಾದ ಆ ಹಕ್ಕನ್ನು ಹಣ, ಹೆಂಡಕ್ಕೆ ಮಾರಿಕೊಳ್ಳದಿರಿ’ ಎಂದು ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್‌ ಮನವಿ ಮಾಡಿದರು.

ರಾಜ್ಯ ದಲಿತ ಸಂಘರ್ಷ ಸಮಿತಿ ಭಾನುವಾರ ಆಯೋಜಿಸಿದ್ದ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ 61ನೇ ಮಹಾಪರಿನಿರ್ವಾಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬಸವಾದಿ ಶರಣರ ನಂತರ ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ನಿವಾರಣೆ ಸೇರಿದಂತೆ ಸಾಮಾಜಿಕ ಪಿಡುಗುಗಳ ನಿವಾರಣೆಗೆ ಅಂಬೇಡ್ಕರ್ ಶ್ರಮಿಸಿದ್ದಾರೆ. ಶಿಕ್ಷಣವಂತರಾಗಿ ಎಲ್ಲರೂ ಸಮಾಜ ನಿರ್ಮಾಣಕ್ಕೆ ಮುಂದಾಗುವಂತೆ’ ಕೋರಿದರು.

ADVERTISEMENT

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಕಾರ್ಯದರ್ಶಿ ಎಚ್‌.ಬಿ. ಮುರಾರಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ಮಾತನಾಡಿ, ‘ಡಾ. ಬಿ.ಆರ್‌.ಅಂಬೇಡ್ಕರ್‌ ಸಂವಿಧಾನ ರಚಿಸದೆ ಹೋಗಿದ್ದಲ್ಲಿ ನಾವುಗಳೆಲ್ಲ ಇಂತಹ ವೇದಿಕೆ ಮೂಲಕ ಮಾತನಾಡಲು ಆಗುತ್ತಿರಲಿಲ್ಲ. ಶೋಷಿತ ಸಮುದಾಯ
ದ ದೇವರಾದ ಅಂಬೇಡ್ಕರ್‌ ಕನಸು ಸಾಕಾರಗೊಳಿಸಲು ನಾವೆಲ್ಲ ಮುಂದಾಗಬೇಕು’ ಎಂದರು.

ಸೇವಾ ನಿವೃತ್ತಿ ಹೊಂದಿದ ಡಾ. ಶಿವಬಸಪ್ಪ ಹೆಸರೂರು, ಡಾ. ಬಿ.ಆರ್‌. ಅಂಬೇಡ್ಕರ್‌ ರಾಷ್ಟ್ರೀಯ ಸೇವಾಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಡಿ.ಎಚ್‌. ಕಡದರಳ್ಳಿ, ಡಾ. ವಿಜಯಕುಮಾರಿ, ಶಿವರಾಜ ಕೆಂಭಾವಿ, ರುದ್ರಪ್ಪ ಬ್ಯಾಗಿ, ಪರಶುರಾಮ ನಗನೂರು, ಶಿವಣ್ಣ ಪರಂಗಿ, ದುರ್ಗಾ ಪ್ರಸಾದ, ಗ್ಯಾನಪ್ಪ ಕಟ್ಟಿಮನಿ, ಪ್ರಮೋದ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.

ಪತ್ರಕರ್ತ ಬಸವರಾಜ ನಂದಿಕೋಲಮಠ ವಿಶೇಷ ಉಪನ್ಯಾಸ ನೀಡಿದರು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ ಅಧ್ಯಕ್ಷತೆ ವಹಿಸಿದ್ದರು.

ಜಿ.ಪಂ ಮಾಜಿ ಅಧ್ಯಕ್ಷ ಗುಂಡಪ್ಪ ನಾಯಕ, ಜಯಕರ್ನಾಟಕ ಸಂಘಟನೆ ಉತ್ತರ ಕರ್ನಾಟಕ ಘಟಕದ ಕಾರ್ಯಾಧ್ಯಕ್ಷ ಶಿವಪುತ್ರ ಗಾಣದಾಳ, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಜಿಲಾನಿಪಾಷ, ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಮುಖಂಡ ಅಮರಣ್ಣ ಗುಡಿಹಾಳ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕಿ ಗೀತಾದೇವಿ ರಾಠೋಡ, ಕಾರ್ಯಕಾರಿ ಸಮಿತಿ ಸದಸ್ಯ ಶಿವಗ್ಯಾನಿ ಕಪಗಲ್‌, ಶರಣಪ್ಪ ದಿನ್ನಿ, ಚಿದಾನಂದ ಆರೋಲಿ, ಮಾನ್ವಿ ಘಟಕದ ಸಂಚಾಲಕ ಬಸವರಾಜ ಸುಂಕೇಶ್ವರ ವೇದಿಕೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.