ADVERTISEMENT

‘ಕಂದಾಯ ಅದಾಲತ್‌ ಲಾಭ ಪಡೆಯಿರಿ’

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 6:05 IST
Last Updated 5 ಜನವರಿ 2018, 6:05 IST

ಜಾಲಹಳ್ಳಿ: ರೈತರ ಭೂ ದಾಖಲೆಗಳಲ್ಲಿನ ಸಮಸ್ಯೆಗಳನ್ನು ಗ್ರಾಮಗಳಿಗೆ ತೆರಳಿ ಪರಿಹರಿಸಿಕೊಡಲು ಕಂದಾಯ ಅದಾಲತ್‌ ಹಮ್ಮಿಕೊಂಡಿದ್ದು, ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಉಪ ತಹಶೀಲ್ದಾರ್‌ ವೆಂಕಟೇಶ ಹೇಳಿದರು.

ಸಮೀಪದ ಪಲಕನಮರಡಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಂದಾಯ ಅದಾಲತ್‌, ಪಿಂಚಣಿ ಅದಾಲತ್‌ ಹಾಗೂ ಪೋತಿ ವಿರಾಸತ್‌ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭೂ ದಾಖಲೆಗಳ ಸಮಸ್ಯೆಗಳು, ಜಮೀನು ಖಾತೆಗಳ ಪೋಡಿ ಮಾಡುವುದಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಹಾಜರು ಪಡಿಸಿದರೆ ಸ್ಥಳದಲ್ಲಿಯೇ ಸರಿಪಡಿಸಿಕೊಡಲಾಗುವುದು. ಇದಕ್ಕಾಗಿ ರೈತರು ಕಚೇರಿಗೆ ಅಲೆಯುವುವ ಅಗತ್ಯವಿಲ್ಲ ಎಂದರು.

ADVERTISEMENT

ಪಿಂಚಣಿ ಸೌಲಭ್ಯ ಪಡೆಯಲು ವಯಸ್ಸಿನ ದಾಖಲೆ ಅಗತ್ಯ. ಜನ್ಮ ದಾಖಲೆ ಪತ್ರ ಇಲ್ಲದಿದ್ದವರು ವೈದ್ಯರಿಂದ ವಯಸ್ಸಿನ ಪ್ರಮಾಣ ಪತ್ರ ಪಡೆದು ಸಲ್ಲಿಸಬೇಕು ಎಂದು ತಿಳಿಸಿದರು.

ಅಸ್ತಿಯಲ್ಲಿ ಪಾಲು ಪಡೆದ ನಂತರ ಪೋಷಕರ ಪಾಲನೆ ಪೋಷಣೆ ನಿರ್ಲಕ್ಷಿಸಿದರೆ ಪಾಲಕರ ಸಂರಕ್ಷಣಾ ಕಾಯ್ದೆ ಅಡಿ ಅಂಥವರ ಜಮೀನನ್ನು ಮತ್ತೆ ಪೋಷಕರ ವಶಕ್ಕೆ ವಹಿಸಲಾಗುವುದು. ತಮ್ಮನ್ನು ಅವಲಂಬಿಸಿದ ವೃದ್ಧರ ಜೀವನ ಹೊಣೆಗಾರಿಕೆಯನ್ನು ಸರಿಯಾಗಿ ನಿರ್ವಹಿಸದಿರುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ. ಹಿರಿಯರನ್ನು ಗೌರವದಿಂದ ಕಂಡು ಅವರ ವೃದ್ಧಾಪ್ಯಜೀವನವನ್ನು ಸುಖದಿಂದ ಕಳೆಯಲು ಅವಕಾಶ ಕಲ್ಪಿಸಿಕೊಡುವಂತೆ ತಿಳಿಸಿದರು.

ಸಭೆಯಲ್ಲಿ 45 ಪೋತಿ ವಿರಾಸತ್‌, 2 ಹೆಸರು ತಿದ್ದುಪಡಿ, 6 ವೃದ್ಧಾಪ್ಯ ವೇತನದ ಅದೇಶ ಪತ್ರಗಳನ್ನು ಫಲಾನುಭವಿಗಳಿಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಕಂದಾಯ ನಿರೀಕ್ಷ ದೇವರೆಡ್ಡಿ ಗಾಣದಾಳ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಬಸವರಾಜ ಹಟ್ಟಿ, ಗ್ರಾಮಲೆಕ್ಕಧಿಕಾರಿಗಳಾದ ರುದ್ರಪ್ಪ, ಮೈಬೂಬ್‌ ಸಾಬ್‌, ದುರಗಪ್ಪ, ಪ್ರಹ್ಲಾದ್‌ ಚಿಂಚೋಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.