ADVERTISEMENT

ಬಿಸಿಯೂಟ ಸೇವಿಸಿದ 55 ವಿದ್ಯಾರ್ಥಿಗಳು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 5:14 IST
Last Updated 18 ಆಗಸ್ಟ್ 2022, 5:14 IST
ಕವಿತಾಳ ಸಮೀಪದ ಅಮೀನಗಡ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಚಿಕಿತ್ಸೆ ನೀಡಲಾಯಿತು
ಕವಿತಾಳ ಸಮೀಪದ ಅಮೀನಗಡ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಚಿಕಿತ್ಸೆ ನೀಡಲಾಯಿತು   

ಪ್ರಜಾವಾಣಿ ವಾರ್ತೆ

ಕವಿತಾಳ: ಮಧ್ಯಾಹ್ನ ಬಿಸಿಯೂಟ ಸೇವಿಸಿ 55 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಮಸ್ಕಿ ತಾಲ್ಲೂಕಿನ ಅಮೀನಗಡ ಗ್ರಾಮದಲ್ಲಿ ಬುಧವಾರ ನಡೆದಿದೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನ ಉಪ್ಪಿಟ್ಟು ಸೇವಿಸಿದ 1 ರಿಂದ7ನೇ ತರಗತಿಯ ಮಕ್ಕಳಲ್ಲಿ ಹೊಟ್ಟೆನೋವು, ವಾಂತಿ, ಬೇಧಿ ಕಾಣಿಸಿಕೊಂಡಿದ್ದು ಕೆಲವು ಮಕ್ಕಳು ತಲೆ ಸುತ್ತುಬಂದು ಬಿದ್ದಿದ್ದಾರೆ. ವಿದ್ಯಾರ್ಥಿಗಳನ್ನು ಕವಿತಾಳದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ADVERTISEMENT

ಉಪ್ಪಿಟ್ಟು ಸರಿಯಾಗಿ ಬೆಂದಿರಲಿಲ್ಲ ಅದನ್ನು ಸೇವಿಸಿದ ನಂತರ ಹೊಟ್ಟೆ ನೋವು ಕಾಣಿಸಿಕೊಂಡು ಗಾಬರಿಯಾಯಿತು ಎಂದು ವಿದ್ಯಾರ್ಥಿಗಳು ಹೇಳಿದರು.

55 ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದು ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ಡಾ.ಅಮೃತ್ ರಾಠೋಡ್ ಹೇಳಿದರು.

‘ಬಿಸಿಯೂಟದ ಅಕ್ಕಿಯಲ್ಲಿ ಹುಳು, ಮತ್ತು ಜೇಡ ಕಸ ಕಡ್ಡಿ ಇರುತ್ತವೆ. ಸ್ವಚ್ಛತೆ ಇರುವುದಿಲ್ಲ. ಕುಡಿಯುವ ನೀರಿನ ತೊಟ್ಟಿಯನ್ನು ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ’ ಎಂದು ಪಾಲಕರಾದ ಇಮಾಮ್ ಹುಸೇನ್‍ ಸಾಬ್‍ ಮತ್ತು ಹನುಮರಡ್ಡಿ ಮತ್ತಿತರರು ಆರೋಪಿಸಿದರು.

‘ನಿತ್ಯದಂತೆ ಆಹಾರ ತಯಾರಿಸಲಾಗಿದೆ. ಕೆಲವು ಮಕ್ಕಳು ಉಪ್ಪಿಟ್ಟು ಸರಿಯಾಗಿ ಬೆಂದಿಲ್ಲ ಎಂದು ಹೇಳಿ ಊಟಕ್ಕೆ ಮನೆಗೆ ಹೋಗುವುದಾಗಿ ಹೇಳಿದರು. ಅಷ್ಟರಲ್ಲಿ ಕೆಲವು ಮಕ್ಕಳಲ್ಲಿ ಹೊಟ್ಟೆನೋವು ಕಾಣಿಸಿಕೊಂಡಿದೆ’ ಎಂದು ಮುಖ್ಯ ಶಿಕ್ಷಕ ಸಿದ್ದಬಸ್ಸಯ್ಯ ಹೇಳಿದರು.

ಶಾಸಕ ಆರ್.ಬಸನಗೌಡ ತುರ್ವಿಹಾಳ ಹಾಗೂ ಡಿಎಚ್‌ಒ ಡಾ.ಸುರೇಂದ್ರ ಬಾಬು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.