ADVERTISEMENT

60 ಬಾಲಕಿಯರಿಗೆ ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 7:35 IST
Last Updated 15 ಮಾರ್ಚ್ 2011, 7:35 IST

ರಾಯಚೂರು: ರಸಗೊಬ್ಬರ ಉತ್ಪಾದನೆ, ತನ್ನ ವ್ಯವಹಾರಿಕ ಚಟುವಟಿಕೆಗಳಿಗಷ್ಟೇ ಮೀಸಲಾಗಿರದೇ ಸಾಮಾಜಿಕ ಅಭಿವೃದ್ಧಿಗೆ ಪೂರಕ ಕಾರ್ಯ, ಗ್ರಾಮೀಣ ಪ್ರದೇಶದ ಬಾಲಕಿಯರ ಶಿಕ್ಷಣ ಏಳ್ಗೆಗೆ ವಿನೂತನ ಯೋಜನೆ ರೂಪಿಸಿ ಸೇವೆ ಮಾಡುತ್ತಿದೆ ಎಂದು ಕೋರಮಂಡಲ್ ರಸಗೊಬ್ಬರ ಉತ್ಪಾದನಾ ಸಂಸ್ಥೆಯ ಅಧ್ಯಕ್ಷ ಡಾ.ಜಿ ರವಿಪ್ರಸಾದ್ ಹೇಳಿದರು.

ಇಲ್ಲಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಕೋರಮಂಡಲ್ ಇಂಟರ್‌ನ್ಯಾಶನಲ್ ರಸಗೊಬ್ಬರ ಉತ್ಪಾದನಾ ಸಂಸ್ಥೆಯು ಏರ್ಪಡಿಸಿದ್ಧ ಗ್ರಾಮೀಣ ಪ್ರದೇಶದ ಶಾಲಾ ಬಾಲಕಿಯರಿಗೆ ಪ್ರತಿಭಾ ಪುರಸ್ಕಾರ, ಪದಕ ಪ್ರದಾನ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.

ದೇಶದ ಹಲವಾರು ಕಡೆ ಈ ರೀತಿಯ ಕಾರ್ಯಚಟುವಟಿಕೆ ಕೈಗೊಳ್ಳಲಾಗಿದೆ. ಸಾಮಾಜಿಕ ಕಳಕಳಿಯ ಈ ಯೋಜನೆ ಪ್ರಯೋಜನವನ್ನು ಗ್ರಾಮೀಣ ಪ್ರದೇಶದ ಶಾಲಾ ಬಾಲಕಿಯರು ಪಡೆಯಬೇಕು. ವಿಶೇಷವಾಗಿ ಬಾಲಕಿಯರ ಶೈಕ್ಷಣಿಕ ಏಳ್ಗೆಗೆ ಪೂರಕ ಯೋಜನೆ ಸಂಸ್ಥೆಯ ಕಳಕಳಿಯ ಯೋಜನೆಯಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಸಕ ಸಯ್ಯದ್ ಯಾಸಿನ್ ಮಾತನಾಡಿ, ಗ್ರಾಮೀಣ ಪ್ರದೇಶದ ಶಾಲಾ ಬಾಲಕಿಯರ ಶಿಕ್ಷಣ ಏಳ್ಗೆ, ಪ್ರತಿಭಾ ವಿಕಾಸಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಕೈಗೊಂಡ ಪ್ರತಿಭಾ ಪುರಸ್ಕಾರ ಗಮನಾರ್ಹವಾದುದು. ಅದರಲ್ಲೂ ಈ ಜಿಲ್ಲೆಯ ಗ್ರಾಮೀಣ ಬಾಲಕಿಯರ ಶೈಕ್ಷಣಿಕ ಏಳ್ಗೆಗೆ ಸಹಕಾರಿಯಾಗಲಿದೆ ಎಂದು ನುಡಿದರು.
ಶಾಸಕ ಸಯ್ಯದ್ ಯಾಸಿನ್ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ತನ್ವೀರ ಬಷಿರುದ್ದೀನ್ ಅವರು, ಕೋರಮಂಡಲ್ ಸಂಸ್ಥೆಯು ಗುರುತಿಸಿದ ಜಿಲ್ಲೆಯ ಆಯ್ದ 30 ಗ್ರಾಮೀಣ ಪ್ರದೇಶದ 9 ಮತ್ತು 10ನೇ ತರಗತಿಯಲ್ಲಿ ಹೆಚ್ಚು ಅಂಕಗಳಿಸಿದ ಪ್ರಥಮ ಮತ್ತು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾದ 60 ಬಾಲಕಿಯರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ, ಪದಕ ಪ್ರದಾನ ಮಾಡಿದರು.

ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದವರಿಗೆ ಎರಡುವರೆ ಸಾವಿರ ನಗದು, ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾದವರಿಗೆ 1500 ನಗದು, ಪ್ರಶಸ್ತಿ ಪತ್ರ, ಪದಕವನ್ನು ಈ ಪ್ರತಿಭಾ ಪುರಸ್ಕಾರ ಒಳಗೊಂಡಿದೆ ಎಂದು ಕೋರಮಂಡಲ್ ಸಂಸ್ಥೆಯ ಪ್ರತಿನಿಧಿಗಳು ವಿವರಿಸಿದರು.

ಶಿಕ್ಷಣ ಸಂಯೋಜನ ರಾಜಶೇಖರಯ್ಯಸ್ವಾಮಿ, ಸಂಸ್ಥೆಯ ಹಿರಿಯ ಮಾರಾಟ ವ್ಯವಸ್ಥಾಪಕ ಕೆ.ಎಸ್ ಪೆಂಪಲಯ್ಯ,ಹಿರಿಯ ವಲಯ ಪ್ರಬಂಧಕ ಕೆ ಪ್ರಭುಸ್ವಾಮಿ, ಬಳ್ಳಾರಿಯ ಹಿರಿಯ ಮಾರಾಟ ವ್ಯವಸ್ಥಾಪಕ ಎಸ್.ಡಿ ಬಾರಿ, ಶಾಲಾ ಬಾಲಕಿಯರು, ಶಿಕ್ಷಕರು ಪಾಲ್ಗೊಂಡಿದ್ದರು. ಎಸ್.ಸಿ ನಾಗರಾಜ ಸ್ವಾಗತಿಸಿದರು. ಜಿ.ಬಿ ಸತ್ಯನಾರಾಯಣ ಪ್ರಸ್ತಾವಿಕ ಮಾತನಾಡಿದರು. ಸಿ ಉಮೇಶ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.