ರಾಯಚೂರು: ಶಾಲಾ ಶಿಕ್ಷಣ ಇಲಾಖೆಯು ಪ್ರಸಕ್ತ ವರ್ಷ ಎಲ್ಲ ಪಠ್ಯ ಪುಸ್ತಕಗಳನ್ನು ನೇರವಾಗಿಯೇ ಬಿಇಒ ಕಚೇರಿಗಳಿಗೆ ಕಳಿಸಿಕೊಟ್ಟಿದೆ. ಬಿಇಒಗಳು ತಾಲ್ಲೂಕು ಮಟ್ಟದಲ್ಲಿ ಮುಖ್ಯ ಶಿಕ್ಷಕರ ಸಭೆ ಕರೆದು ಪಠ್ಯ ಪುಸ್ತಕ ವಿತರಣೆ ಆರಂಭಿಸಿದ್ದಾರೆ. ಜಿಲ್ಲೆಯ ಎಲ್ಲ ಶಾಲೆಗಳಿಗೆ ಶೇ 70ರಷ್ಟು ಪಠ್ಯಪುಸ್ತಕ ಪೂರೈಕೆಯಾಗಿದೆ.
‘ಎಲ್ಲ ತಾಲ್ಲೂಕುಗಳಿಗೆ ಈಗಾಗಲೇ ಪಠ್ಯಪುಸ್ತಕಗಳು ತಲುಪಿವೆ. ಅನುದಾನಿತ ಶಾಲೆಗಳಿಗೆ ಬೇಡಿಕೆಗೆ ಅನುಗುಣವಾಗಿ ಹಾಗೂ ಪೂರ್ಣ ಪ್ರಮಾಣದ ಹಣ ಪಾವತಿಸಿದ ತಾಲ್ಲೂಕಿನ ಎಲ್ಲ ಅನುದಾನ ರಹಿತ ಶಾಲೆಗಳಿಗೆ ಆದ್ಯತೆಯ ಮೇರೆಗೆ ಸರಬರಾಜು ಮಾಡಲಾಗುತ್ತಿದೆ’ ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಡಿ.ಬಡಿಗೇರ ತಿಳಿಸಿದ್ದಾರೆ.
ರಾಯಚೂರು ತಾಲ್ಲೂಕಿನಲ್ಲಿ 313 ಕಿರಿಯ ಪ್ರಾಥಮಿಕ, 250 ಹಿರಿಯ ಪ್ರಾಥಮಿಕ ಹಾಗೂ 54 ಪ್ರೌಢ ಶಾಲೆಗಳಿವೆ. ಶೇ 70ರಷ್ಟು ಪಠ್ಯಪುಸ್ತಕಗಳನ್ನು ಪೂರೈಕೆ ಮಾಡಲಾಗಿದೆ. ಬಿಇಒ ಈರಣ್ಣ ಕೋಸಗಿ ಅವರು ತಾಲ್ಲೂಕಿನ ಎಲ್ಲ ಸಿಆರ್‌ಪಿ, ಬಿಆರ್‌ಪಿ ಹಾಗೂ ಮುಖ್ಯ ಶಿಕ್ಷಕರ ಸಭೆ ಕರೆದು ಪಠ್ಯಪುಸ್ತಕಗಳನ್ನು ಒಯ್ದು ಶಾಲಾ ಪ್ರಾರಂಭೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ಮಾನ್ವಿ ತಾಲ್ಲೂಕಿನಲ್ಲಿ 2025-26ನೇ ಸಾಲಿನಲ್ಲಿ 7,31,828 ಉಚಿತ ಪಠ್ಯಪುಸ್ತಕಗಳ ಬೇಡಿಕೆ ಇದೆ. ಈಗಾಗಲೇ 3,739,36 (ಶೇ 51.09ರಷ್ಟು) ಪುಸ್ತಕಗಳು ಇಲಾಖೆಯಿಂದ ಸರಬರಾಜು ಆಗಿವೆ. ತಾಲ್ಲೂಕಿನ 315 ಸರ್ಕಾರಿ ಶಾಲೆಗಳಿಗೆ ಕಳುಹಿಸಲಾಗಿದೆ. 1,75,870 ಮಾರಾಟದ ಪಠ್ಯ ಪುಸ್ತಕಗಳ ಬೇಡಿಕೆ ಇದೆ. 1,08,425 (ಶೇ 61.65) ಪುಸ್ತಕಗಳು ಇಲಾಖೆಯಿಂದ ಸರಬರಾಜು ಆಗಿವೆ. ಪೂರ್ಣ ಪ್ರಮಾಣದ ಹಣ ಪಾವತಿಸಿದ ಎಲ್ಲ 103 ಅನುದಾನ ರಹಿತ ಶಾಲೆಗಳಿಗೆ ಆದ್ಯತೆಯ ಮೇರೆಗೆ ಸರಬರಾಜು ಮಾಡಲಾಗುತ್ತಿದೆ.
ಲಿಂಗಸುಗೂರು ತಾಲ್ಲೂಕಿಗೆ ಶೇ 65ರಷ್ಟು ಪಠ್ಯಪುಸ್ತಕಗಳು ಪೂರೈಕೆಯಾಗಿವೆ. ಮುಖ್ಯಶಿಕ್ಷಕರ ಸಭೆ ಕರೆದು ಪಠ್ಯಪುಸ್ತಕಗಳನ್ನು ಒಯ್ಯುವಂತೆ ಸೂಚನೆ ನೀಡಲಾಗಿದೆ ಎಂದು ಬಿಇಒ ಹುಂಬಣ್ಣ ರಾಠೋಡ್ ತಿಳಿಸಿದ್ದಾರೆ.
ದೇವದುರ್ಗ ತಾಲ್ಲೂಕಿನಲ್ಲಿ 8,776,67 ಉಚಿತ ಪಠ್ಯಪುಸ್ತಕಗಳ ಪೈಕಿ 6, 012,34 (ಶೇ 69 ) ಪುಸ್ತಕಗಳು ಬಂದಿವೆ. ಶೇ 31ರಷ್ಟು ಪುಸ್ತಕಗಳು ಬರಬೇಕಿದೆ. ತಾಲ್ಲೂಕಿನ 422 ಪ್ರಾಥಮಿಕ ಮತ್ತು 34 ಸರ್ಕಾರಿ ಪ್ರೌಢಶಾಲೆಗಳ ಪೈಕಿ 321 ಶಾಲೆಗಳಿಗೆ ಕಳುಹಿಸಲಾಗಿದೆ.
ಸಿಂಧನೂರು ತಾಲ್ಲೂಕಿನಲ್ಲಿ 7,24,802 ಪುಸ್ತಕಗಳ ಅಗತ್ಯವಿದೆ. 5,03,727 (ಶೇ 69)ರಷ್ಟು ಪುಸ್ತಕಗಳು ತಾಲ್ಲೂಕಿಗೆ ಶಿಕ್ಷಣ ಇಲಾಖೆಯಿಂದ ಸರಬರಾಜು ಆಗಿವೆ. ಶೇ 31 ಸರಬರಾಜು ಆಗಬೇಕಿದೆ. ಸರಬರಾಜು ಆದ ಪುಸ್ತಕಗಳನ್ನು ತಾಲ್ಲೂಕಿನ ಪ್ರಾಥಮಿಕ ಮತ್ತು ಸರ್ಕಾರಿ ಪ್ರೌಢ ಶಾಲೆಗಳಿಗೆ ವೇಳಾಪಟ್ಟಿ ಪ್ರಕಾರ ವಿತರಣೆಗಾಗಿ ಕಳುಹಿಸಲಾಗಿದೆ.
ಮೊದಲ ದಿನವೇ ಮಕ್ಕಳಿಗೆ ಸಿಹಿ ವಿತರಣೆ ಪುಷ್ಪವೃಷ್ಟಿಯ ಸ್ವಾಗತಕ್ಕೆ ಶಾಲೆಗಳಲ್ಲಿ ಸಿದ್ಧತೆ ಶಾಲಾ ಆವರಣ ಸ್ವಚ್ಛತೆಗೂ ಸೂಚನೆ
- ಸಮವಸ್ತ ಬಂದ ತಕ್ಷಣ ಅವುಗಳನ್ನೂ ಪೂರೈಕೆ ಮಾಡಲಾಗುವುದು. ಶೂ ಖರೀದಿ ಹೊಣೆಯನ್ನು ಆಯಾ ಶಾಲಾ ಸುಧಾರಣಾ ಸಮಿತಿಗೆ ಬಿಟ್ಟುಕೊಡಲಾಗಿದೆ.ಕೆ.ಡಿ.ಬಡಿಗೇರ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ
ಶಾಲಾ ಪ್ರಾರಂಭೋತ್ಸವಕ್ಕೆ ಸಕಲ ಸಿದ್ಧತೆ
ರಾಯಚೂರು: ಜಿಲ್ಲೆಯ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪ ನಿರ್ದೇಶಕ ಕೆ.ಡಿ.ಬಡಿಗೇರ ತಿಳಿಸಿದರು. ‘ಮೇ 25ರಂದು ಶಿಕ್ಷಕರು ಶಾಲಾ ಕೊಠಡಿಗಳ ಸ್ವಚ್ಛತೆ ಕೈಗೊಳ್ಳಲಿದ್ದಾರೆ. 26ರಂದು ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಡಂಗೂರ ಬಾರಿಸಿ ಮಕ್ಕಳಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಇದೇ ಅವಧಿಯಲ್ಲಿ ಶಾಲಾ ದಾಖಲಾತಿ ಪಡೆಯುವಂತೆ ಕರಪತ್ರಗಳನ್ನು ವಿತರಿಸಲು ನಿರ್ದೇಶನ ನೀಡಲಾಗಿದೆ’ ಎಂದು ಹೇಳಿದರು. ‘ಶಾಲಾ ಪ್ರಾರಂಭೋತ್ಸವದ ದಿನ ಸ್ವಾಗತ ಬ್ಯಾನರ್ ಅಳವಡಿಸಬೇಕು. ಮಕ್ಕಳನ್ನು ಸ್ವಾಗತಿಸಿ ಬರಮಾಡಿಕೊಂಡು ಪುಸ್ತಕ ವಿತರಿಸಬೇಕು. ಮಕ್ಕಳಿಗೆ ಸಿಹಿ ತಿಂಡಿಯನ್ನೂ ವಿತರಿಸುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.