ADVERTISEMENT

ಬ್ಲಾಕ್‌ ಅಧ್ಯಕ್ಷರಿಗೆ ಮಾಹಿತಿ ನೀಡದೇ ಕ್ಷೇತ್ರಕ್ಕೆ ಬರಬೇಡಿ: ಸಚಿವರಿಗೆ ತಾಕೀತು

ಮಾಹಿತಿ ನೀಡದೇ ಸಚಿವರು ಬಂದಿರುವುದಕ್ಕೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 3 ಮೇ 2025, 16:00 IST
Last Updated 3 ಮೇ 2025, 16:00 IST
ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾಂಗ್ರೆಸ್‌ ಕಾರ್ಯಕರ್ತನ ನಡುವೆ ವಾಗ್ವಾದ ನಡೆಯಿತು
ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾಂಗ್ರೆಸ್‌ ಕಾರ್ಯಕರ್ತನ ನಡುವೆ ವಾಗ್ವಾದ ನಡೆಯಿತು   

ಲಿಂಗಸುಗೂರು (ರಾಯಚೂರು ಜಿಲ್ಲೆ): ‘ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಗಮನಕ್ಕೆ ತರದೇ ಕ್ಷೇತ್ರಕ್ಕೆ ಬರುತ್ತೀರಿ ಅಂದರೆ ಪಕ್ಷಕ್ಕೆ ಏನು ಬೆಲೆ ಉಳಿತು?’ ಎಂದು ಕಾರ್ಯಕರ್ತರೊಬ್ಬರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರನ್ನು ಇಲ್ಲಿ ಪ್ರಶ್ನಿಸಿದರು.

ಕಾರ್ಯಕರ್ತರೊಬ್ಬರ ಏರು ಧ್ವನಿಯಲ್ಲಿ ಹೀಗೆ ಪ್ರಶ್ನಿಸಿದಾಗ ಸಚಿವರು ಕಸಿವಿಸಿಗೊಂಡರು.

ಉಟಗನೂರು ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಕಲಬುರಗಿಯಿಂದ ಬರುತ್ತಿದ್ದಾಗ ಮಾರ್ಗಮಧ್ಯೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆಲಹೊತ್ತು ವಿಶ್ರಾಂತಿ ಪಡೆದ ಸಚಿವರು ಹೊರಡುವಾಗ ಈ ಘಟನೆ ನಡೆಯಿತು.

ADVERTISEMENT

‘ಬ್ಲಾಕ್ ಅಧ್ಯಕ್ಷರು, ಕಾರ್ಯಕರ್ತರಿಗೆ ಮಾಹಿತಿ ನೀಡದೇ ಏಕೆ ಬಂದಿದ್ದೀರಿ? ಇನ್ಮೇಲೆ ಕ್ಷೇತ್ರಕ್ಕೆ ಬರಬೇಕಾದರೆ ಬ್ಲಾಕ್ ಅಧ್ಯಕ್ಷರು ಹಾಗೂ ಕಾರ್ಯಕರ್ತರ ಗಮನಕ್ಕೆ ತಂದೇ ಬರಬೇಕು. ಇಲ್ಲದಿದ್ದರೆ ಇಲ್ಲಿಗೆ ಬರಲೇಬೇಡಿ’ ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಸಮಿತಿ ಸದಸ್ಯ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಗದ್ದೆನಗೌಡ ಪಾಟೀಲ ಏರು ಧ್ವನಿಯಲ್ಲಿ ಆಕ್ಷೇಪಿಸಿದರು.

ಇದರಿಂದ ಸಿಡಿಮಿಡಿಗೊಂಡ ಸಚಿವರು, ‘ನೀನು ಯಾರಯ್ಯ ಕೇಳೋಕೆ? ಇದು ಪಕ್ಷದ ಕಚೇರಿಯಲ್ಲ, ಪ್ರವಾಸಿ ಮಂದಿರ. ಗೌರವದಿಂದ ಮಾತಾಡೋದನ್ನು ಕಲಿ’ ಎಂದು ಗದರಿಸಿದರು. ಕೆಲ ಸಮಯ ಇಬ್ಬರ ನಡುವೆ ವಾಗ್ವಾದ ನಡೆಯಿತು.

ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ್ ಅವರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.