ADVERTISEMENT

ಲಿಂಗಸುಗೂರು: ಆರೋಪಿ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ

ಲಿಂಗಸೂಗೂರಿನ ಖಾಸಗಿ ಕಾಲೇಜಿನ ವಸತಿ ನಿಲಯದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 7:46 IST
Last Updated 5 ಫೆಬ್ರುವರಿ 2023, 7:46 IST
ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಬಂಜಾರ ಸಮಾಜದ ಯುವಕರನ್ನು ಮುಖಂಡರು ಸಮಾಧಾನಪಡಿಸಿದರು
ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಬಂಜಾರ ಸಮಾಜದ ಯುವಕರನ್ನು ಮುಖಂಡರು ಸಮಾಧಾನಪಡಿಸಿದರು   

ಲಿಂಗಸುಗೂರು: ಪಟ್ಟಣದ ಖಾಸಗಿ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿನಿಲಯದಲ್ಲಿ ಶುಕ್ರವಾರ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಎದುರು ಪೋಷಕರು ಹಾಗೂ ಬಂಜಾರ ಸಮಾಜದ ಯುವಕರು ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿನಿಗೆ ಕಾಲೇಜಿನ ಪ್ರಾಚಾರ್ಯ ರಮೇಶ ತಗ್ಗಿಮನಿ ಅವರು ಜಾತಿ ನಿಂದನೆ ಮಾಡಿ, ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ. ಪ್ರಕರಣ ಮುಚ್ಚಿ ಹಾಕುವ ಉದ್ದೇಶದಿಂದ ಕಾಲೇಜಿನ ವಸತಿ ನಿಲಯದಲ್ಲಿ ನೇಣು ಹಾಕಿ ಆತ್ಮಹತ್ಯೆ ಎಂಬಂತೆ ಬಿಂಬಿಸಲಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಬಾಲಕಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರೋಪಿ ಬಂಧನ ಮಾಡುವವರೆಗೆ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡದ ಪ್ರತಿಭಟನಾಕಾರರು, ಶುಕ್ರವಾರ ಸಂಜೆಯಿಂದ ಶನಿವಾರ ಮಧ್ಯಾಹ್ನದವರೆಗೆ ಆಸ್ಪತ್ರೆ ಆವರಣದಲ್ಲಿಯೇ ಪ್ರತಿಭಟನೆ ನಡೆಸಿದ್ದರಿಂದ ಪ್ರಕ್ಷುಬ್ದ ವಾತಾವರಣ ನಿರ್ಮಾಣಗೊಂಡಿತ್ತು.

ADVERTISEMENT

ಆರೋಪಿ ಬಂಧಿಸಬೇಕು. ಸರ್ಕಾರದಿಂದ ಸೂಕ್ತ ಪರಿಹಾರ ನೀಡುವ ಜತೆಗೆ ವಿದ್ಯಾರ್ಥಿನಿಯ ನೊಂದ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡುವುದು ಸೇರಿ ವಿವಿಧ ಬೇಡಿಕೆ ಮುಂದಿಟ್ಟು ಹೋರಾಟ ನಡೆಸಿದರು. ನಂತರ ಬಂಜಾರ ಸಮಾಜ ಮುಖಂಡರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು.

ಬಿಗಿ ಬಂದೊಬಸ್ತ್: ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ಹೊರ ಬೀಳುತ್ತಿದ್ದಂತೆ ತಂಡೋಪ ತಂಡವಾಗಿ ಸಮುದಾಯದ ಜನರು ಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಾಲೇಜು, ಆಸ್ಪತ್ರೆ ಹಾಗೂ ಪ್ರಮುಖ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಈ ವೇಳೆ ಟಿ.ಆರ್‌. ನಾಯ್ಕ, ನಾರಾಯಣಪ್ಪ ನಾಯ್ಕ, ಲಾಲಪ್ಪ ರಾಠೋಡ, ದೇವಪ್ಪ ರಾಠೋಡ, ಡಾ. ನೀಲಪ್ಪ ಪವಾರ, ಅಮರೇಶ ನಾಯ್ಕ, ನಾಗರಡ್ಡೆಪ್ಪ ರಾಠೋಡ, ಚಂದ್ರು ನಾಯ್ಕ, ಶಂಕರ ಪವಾರ, ವೆಂಕಟೇಶ ರಾಠೋಡ ಇದ್ದರು.

ಡಿವೈಎಸ್ಪಿ ಎಸ್. ಮಂಜುನಾಥ, ಸಿಪಿಐ ವೀರಭದ್ರಯ್ಯ ಹಿರೇಮಠ, ಪೊಲೀಸ್‍ ಇನ್‍ಸ್ಪೆಕ್ಟರ್‍ ಸಂಜೀವ ಕುಮಾರ ಕುಂಬಾರಗೇರಿ ನೇತೃತ್ವದಲ್ಲಿ ಬಂದೋಬಸ್ತ್‍ ವ್ಯವಸ್ಥೆ ಕಲ್ಪಿಸಲಾಗಿತ್ತು.

ಪ್ರಾಚಾರ್ಯ ವಿರುದ್ಧ ಪೋಸ್ಕೊ ಪ್ರಕರಣ

ಲಿಂಗಸುಗೂರು: ಪಟ್ಟಣದ ಖಾಸಗಿ ಪಿಯು ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯ ಶವ ಸಮೀಪದ ವಸತಿ ನಿಲಯದಲ್ಲಿ ಶುಕ್ರವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

‘ಕಾಲೇಜಿನ ಪ್ರಾಚಾರ್ಯ ರಮೇಶ ತೆಗ್ಗಿನಮನಿ ಅವರು ಮೃತ ಬಾಲಕಿಗೆ ಜಾತಿ ನಿಂದನೆ ಮಾಡುವ ಜತೆಗೆ ಅತ್ಯಾಚಾರ ಎಸಗಿ, ಕೊಲೆ ಮಾಡಿ, ವಸತಿ ನಿಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನೇತು ಹಾಕಿ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಸಿದ್ದಾರೆ’ ಎಂದು ಪೋಷಕರು ಆರೋಪಿಸಿದ್ದು, ಪ್ರಾಚಾರ್ಯ ರಮೇಶ ತೆಗ್ಗಿನಮನಿ ವಿರುದ್ಧ ಪೋಸ್ಕೊ ಹಾಗೂ ಪರಿಶಿಷ್ಟ ಜಾತಿ,ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಲಿಂಗಸುಗೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಘಟನೆ ಹಿನ್ನೆಲೆಯಲ್ಲಿ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಆರೋಪಿ ಬಂಧನ ಮಾಡುವವರೆಗೆ ಮರಣೋತ್ತರ ಪರೀಕ್ಷೆ ನಡೆಸದಂತೆ ಬಂಜಾರ ಸಮಾಜ ಯುವಕರು ಶನಿವಾರ ಸಾರ್ವಜನಿಕ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.