ADVERTISEMENT

ಫ್ಯಾನ್ ಬಡಿದು ವಿದ್ಯಾರ್ಥಿ ಮೂಗಿಗೆ ಗಾಯ

ಮಸ್ಕಿಯ ಅಂಬೇಡ್ಕರ್ ಹಾಸ್ಟೆಲ್‌ನಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 11:38 IST
Last Updated 8 ಫೆಬ್ರುವರಿ 2023, 11:38 IST
ಮಸ್ಕಿಯ ಡಾ.ಬಿ.ಆರ್‌.ಅಂಬೇಡ್ಕರ್ ವಸತಿ ನಿಲಯಕ್ಕೆ ಬುಧವಾರ ಭೇಟಿ ನೀಡಿದ್ದ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸುರೇಶಕುಮಾರ ವಿದ್ಯಾರ್ಥಿಗಳ ಜತೆ ಚರ್ಚೆಸಿದರು
ಮಸ್ಕಿಯ ಡಾ.ಬಿ.ಆರ್‌.ಅಂಬೇಡ್ಕರ್ ವಸತಿ ನಿಲಯಕ್ಕೆ ಬುಧವಾರ ಭೇಟಿ ನೀಡಿದ್ದ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸುರೇಶಕುಮಾರ ವಿದ್ಯಾರ್ಥಿಗಳ ಜತೆ ಚರ್ಚೆಸಿದರು   

ಮಸ್ಕಿ: ಕೊಠಡಿಯಲ್ಲಿನ‌ ಸಿಲಿಂಗ್ ಫ್ಯಾನ್ ಬಡಿದು ವಿದ್ಯಾರ್ಥಿಯೊಬ್ಬ ಗಾಯಗೊಂಡ ಘಟನೆ ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್ ವಸತಿ ನಿಲಯದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಪ್ರಥಮ ಪಿಯು ಓದುತ್ತಿರುವ ಇರಕಲ್ ಗ್ರಾಮದ ಪರಶುರಾಮ್ (22) ಗಾಯಗೊಂಡ ವಿದ್ಯಾರ್ಥಿ.

ಬಳಗಾನೂರು ರಸ್ತೆಯಲ್ಲಿನ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಅಂಬೇಡ್ಕರ್ ವಸತಿ ನಿಲಯದ ಕೊಠಡಿಯೊಂದರಲ್ಲಿ ಮಂಚದ ಮೇಲೆ ಮಲಗಿದ್ದ ವಿದ್ಯಾರ್ಥಿಯು ಮೇಲೆ ಎದ್ದಾಗ ಫ್ಯಾನ್‌ಗೆ ವಿದ್ಯಾರ್ಥಿಯ ಮೂಗು ತಾಗಿದ್ದು, ಫ್ಯಾನ್‌ ರಭಸಕ್ಕೆ ಆತನ ಮೂಗಿನ ಮೂಳೆ ಮುರಿದಿದೆ. ಕೂಡಲೇ ಆತನನ್ನು ಇಲ್ಲಿನ ವಿಜಯ ನರ್ಸಿಂಗ್‌ ಹೋಂನಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ವಸತಿ ನಿಲಯದ ಸ್ವಂತ ಕಟ್ಟಡ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಖಾಸಗಿ ಕಟ್ಟಡದಲ್ಲಿ ವಸತಿ ನಿಲಯ ಆರಂಭಿಸಲಾಗಿದೆ. ಈ ಖಾಸಗಿ ಕಟ್ಟಡದಲ್ಲಿನ ವಸತಿ ನಿಲಯದಲ್ಲಿ 250 ವಿದ್ಯಾರ್ಥಿಗಳ ಪ್ರವೇಶಾತಿ ಪಡೆದಿದ್ದು ಒಂದೊಂದು ಕೊಠಡಿಯಲ್ಲಿ 15 ರಿಂದ 20 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕೆಳಗೆ ಹಾಗೂ ಮೇಲೆ ಮಂಚಗಳನ್ನು ಹಾಕಿದ್ದು ಮೇಲಿನ ಮಂಚದಲ್ಲಿ ಮಲಗಿದ್ದ ವಿದ್ಯಾರ್ಥಿಯು ಗಾಯಗೊಂಡಿದ್ದಾನೆ ಎಂದು ಹೇಳಲಾಗಿದೆ.

ಸುದ್ದಿ ತಿಳಿಯುತ್ತಲೇ ಬುಧವಾರ ಹಾಸ್ಟೆಲ್‌ಗೆ ಭೇಟಿ ನೀಡಿದ್ದ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸುರೇಶ ಕುಮಾರ್‌, ವಿದ್ಯಾರ್ಥಿಯ ಚಿಕಿತ್ಸೆಗೆ ಎಲ್ಲಾ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.