ADVERTISEMENT

‘ವಿಜ್ಞಾನ ತಂತ್ರಜ್ಞಾನದಿಂದ ಪ್ರಗತಿ, ಅವನತಿ ಎರಡೂ ಇದೆ’

ವಿಜ್ಞಾನಿಯೊಂದಿಗೆ ವಿದ್ಯಾರ್ಥಿಗಳು, ಶಿಕ್ಷಕರಿಂದ ವಿಜ್ಞಾನ ಸಂವಾದ

​ಪ್ರಜಾವಾಣಿ ವಾರ್ತೆ
Published 22 ಜನವರಿ 2019, 12:11 IST
Last Updated 22 ಜನವರಿ 2019, 12:11 IST
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಸೋಮವಾರ ಏರ್ಪಡಿಸಿದ್ದ ವಿಜ್ಞಾನಿ–ವಿದ್ಯಾರ್ಥಿ–ಶಿಕ್ಷಕ ಸಂವಾದ ಸಮಾರಂಭದಲ್ಲಿ ಬಾಹ್ಯಾಕಾಶ ವಿಜ್ಞಾನಿ ಎ.ಎಸ್‌. ಕಿರಣಕುಮಾರ್‌ ಅವರನ್ನು ಸನ್ಮಾನಿಸಲಾಯಿತು
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಸೋಮವಾರ ಏರ್ಪಡಿಸಿದ್ದ ವಿಜ್ಞಾನಿ–ವಿದ್ಯಾರ್ಥಿ–ಶಿಕ್ಷಕ ಸಂವಾದ ಸಮಾರಂಭದಲ್ಲಿ ಬಾಹ್ಯಾಕಾಶ ವಿಜ್ಞಾನಿ ಎ.ಎಸ್‌. ಕಿರಣಕುಮಾರ್‌ ಅವರನ್ನು ಸನ್ಮಾನಿಸಲಾಯಿತು   

ರಾಯಚೂರು: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆಗಿರುವ ಸಂಶೋಧನೆಗಳ ಮೂಲಕ ದೇಶದ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿದೆ. ವಿಜ್ಞಾನವನ್ನು ಕೆಟ್ಟ ಕಾರ್ಯಕ್ಕೆ ಬಳಸಿಕೊಂಡರೆ ಅವನತಿಯೂ ಆಗುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಬಾಹ್ಯಾಕಾಶ ವಿಜ್ಞಾನಿ ಎ.ಎಸ್‌. ಕಿರಣಕುಮಾರ್‌ ಹೇಳಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಜಿಲ್ಲಾಡಳಿತ, ಉಪಪ್ರಾದೇಶಿಕ ವಿಜ್ಞಾನ ಕೇಂದ್ರ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ವಿಜ್ಞಾನ ಮತ್ತು ತಂತ್ರಜ್ಞಾನ ಪೋತ್ಸಾಹ ಸೊಸೈಟಿಯಿಂದ ಸೋಮವಾರ ಏರ್ಪಡಿಸಿದ್ದ ವಿದ್ಯಾರ್ಥಿ-ಶಿಕ್ಷಕ-ವಿಜ್ಞಾನಿ ನೇರ ಸಂವಾದದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.

ಬಾಹ್ಯಾಕಾಶ ತಂತ್ರಜ್ಞಾನ ಬಳಸಿ ಸಮುದ್ರದಲ್ಲಿ ಮೀನುಗಳಿರುವ ಜಾಗಗಳನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗಿದೆ. ಇದರಿಂದ ಅನಗತ್ಯವಾಗಿ ಬಳಕೆಯಾಗುತ್ತಿದ್ದ ಮೀನುಗಾರರ ಇಂಧನ ವೆಚ್ಚ ತಪ್ಪಿಸಿ, ಪರೋಕ್ಷವಾಗಿ ಪ್ರತಿವರ್ಷ ₹20 ಸಾವಿರ ಕೋಟಿ ಉಳಿತಾಯ ಮಾಡಲು ಸಾಧ್ಯವಾಯಿತು. ಈ ಕೆಲಸಕ್ಕಾಗಿ 1999 ರಲ್ಲಿ ವಿಶೇಷ ಉಪಗ್ರಹವೊಂದನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಭೂಮಿಯ ಸುತ್ತಲೂ 24 ಉಪಗ್ರಹಗಳನ್ನು ಕಕ್ಷೆಗೆ ಬಿಟ್ಟಿರುವ ಅಮೆರಿಕ ಹಾಗೂ 32 ಉಪಗ್ರಹಗಳನ್ನು ಬಿಟ್ಟಿರುವ ಚೀನಾ ದೇಶ ಜಿಪಿಎಸ್‌ ವ್ಯವಸ್ಥೆ ರೂಪಿಸಿಕೊಂಡಿವೆ. ಇದೇ ಕೆಲಸವನ್ನು ಇಸ್ರೋದಿಂದ ಹಾರಿಬಿಟ್ಟಿರುವ 7 ಉಪಗ್ರಹಗಳು ಮಾಡುತ್ತಿವೆ. ಕಡಿಮೆ ವೆಚ್ಚದಲ್ಲಿ ಉಪಗ್ರಹಗಳನ್ನು ಸಿದ್ಧಪಡಿಸುವ ಕೆಲಸವನ್ನು ಇಸ್ರೋ ಮಾಡುತ್ತಿದೆ ಎಂದು ಹೇಳಿದರು.

ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಯಾಗಿದ್ದರಿಂದ ಎಲ್ಲರೂ ಟಿವಿ ವೀಕ್ಷಣೆ ಮಾಡಲು, ಎಟಿಎಂ ಬಳಕೆ ಮಾಡಲು, ಮೊಬೈಲ್‌ ತಂತ್ರಜ್ಞಾನ ಹೊಂದಲು ಹಾಗೂ ಇಂಟರ್‌ನೆಟ್‌ ಸೌಲಭ್ಯ ಬರುವುದಕ್ಕೆ ಕಾರಣವಾಗಿದೆ. 1975 ರಲ್ಲಿ ದೇಶದಲ್ಲಿ ಮೊದಲ ಸಲ ಟಿವಿ ಬಳಕೆ ಆರಂಭವಾದಾಗ, ಕೇವಲ 2400 ಗ್ರಾಮಗಳು ಮಾತ್ರ ಟಿವಿ ಸೌಲಭ್ಯ ಪಡೆಯಲು ಸಾಧ್ಯವಾಗಿತ್ತು. ಅಮೆರಿಕ ಉಪಗ್ರಹ ಆಧರಿಸಿ ಕಾರ್ಯಕ್ರಮ ಪ್ರಸಾರವಾಗುತ್ತಿದ್ದವು. ಈಗ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಬಂದಿದೆ ಎಂದು ತಿಳಿಸಿದರು.

ಇಸ್ರೋದಿಂದ ಉಪಗ್ರಹ ಉಡಾವಣೆ ಮಾಡುವುದಕ್ಕೆ ಪಿಎಸ್‌ಎಲ್‌ವಿ ರಾಕೆಟ್‌ ಕೂಡಾ ಅಭಿವೃದ್ಧಿ ಮಾಡಿದ್ದು, ಇಲ್ಲಿಯವರೆಗೂ 270 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ತಲುಪಿಸಿದೆ. ಒಂದೇ ಸಮಯಕ್ಕೆ 104 ಉಪಗ್ರಹಗಳನ್ನು ಹಾರಿಬಿಟ್ಟಿರುವ ವಿಶ್ವದಾಖಲೆಯನ್ನು ಇಸ್ರೋ ಮಾಡಿದೆ ಎಂದರು.

ಇಸ್ರೋ 75 ವರ್ಷಾಚರಣೆ ಸಂದರ್ಭದಲ್ಲಿ ಮನುಷ್ಯ ಸಹಿತ ಬಾಹ್ಯಾಕಾಶಕ್ಕೆ ತಲುಪುವ ಉಪಗ್ರಹ ಅಭಿವೃದ್ಧಿ ಮಾಡಬೇಕೆನ್ನುವ ಗುರಿಯನ್ನು ಕೇಂದ್ರ ಸರ್ಕಾರ ನೀಡಿದೆ. ಈ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿವೆ ಎಂದು ಹೇಳಿದರು.

ಕುತೂಹಲದ ಪ್ರಶ್ನೆಗಳು: ಆನಂತರ ನಡೆದ ಸಂವಾದದಲ್ಲಿ ವಿವಿಧ ಶಾಲಾ ಮಕ್ಕಳು ಪ್ರಶ್ನೆಗಳನ್ನು ಕೇಳಿದರು. ತುಂಬಾ ಸರಳವಾಗಿ ಹಾಗೂ ಮನದಟ್ಟಾಗುವ ರೀತಿಯಲ್ಲಿ ಬಾಹ್ಯಾಕಾಶ ವಿಜ್ಞಾನಿ ಕಿರಣಕುಮಾರ್‌ ಅವರು ಉತ್ತರಗಳನ್ನು ನೀಡಿದರು.

ಬಾಹ್ಯಾಕಾಶ ತಂತ್ರಜ್ಞಾನದ ಪರಿಕಲ್ಪನೆ ಮನುಷ್ಯನಿಗೆ ಹೇಗೆ ಬಂತು? ಇಸ್ರೋದಿಂದ ಉಪಗ್ರಹಗಳನ್ನು ಏಕೆ ಹಾರಿ ಬಿಡಬೇಕು? ಉಪಗ್ರಹಗಳನ್ನು ಬಿಡುವುದರಿಂದ ಭೂಮಿಯ ಗುರುತ್ವಾಕರ್ಷಣೆಗೆ ಏನಾದರೂ ತೊಂದರೆ ಆಗುತ್ತದೆಯೇ? ಜನಸಾಮಾನ್ಯರಿಂದ ಇಸ್ರೋಗೆ ಏನು ಉಪಯೋಗ ಮತ್ತು ಇಸ್ರೋದಿಂದ ಜನಸಾಮಾನ್ಯರಿಗೆ ಏನು ಉಪಯೋಗ? ಮಂಗಳಗ್ರಹದಲ್ಲಿ ಜೀವಿಸಬಹುದೆ? ಉಪಗ್ರಹಗಳನ್ನು ಹಾರಿಬಿಡುವುದು ಹೇಗೆ ಗೊತ್ತಾಯಿತು? ಇತ್ಯಾದಿ ಪ್ರಶ್ನೆಗಳನ್ನು ಶಾಲಾ ಮಕ್ಕಳು ಕೇಳಿದಾಗ.. ಇಡೀ ಸಭಾಂಗಣವು ನಗುವಿನಲ್ಲಿ ಮುಳುಗಿತು.

ಆದರೆ, ಪ್ರಶ್ನೆಗಳಿಗೆ ವಿಜ್ಞಾನಿಗಳು ಸಮರ್ಪಕವಾಗಿ ಉತ್ತರಿಸಿದರು. ಮನುಷ್ಯ ಆಕಾಶವನ್ನು ನೋಡುತ್ತಾ... ನೋಡುತ್ತಾ ಹಕ್ಕಿಯಂತೆ ಹಾರಬೇಕು ಅನ್ನಿಸಿತು. ಹೀಗಾಗಿ ವಿಮಾನ ಕಂಡುಹಿಡಿಯಲು ಸಾಧ್ಯವಾಯಿತು. ಭೂಮಿಯಿಂದ ಮೇಲೆ ಹೋದಂತೆ ಏನೇನಿದೆ ಎನ್ನುವ ಕುತೂಹಲವು ಮೂಡುತ್ತಾ ಬಂದಂತೆ, ಅದಕ್ಕೆ ಸಂಶೋಧನೆಗಳ ಮೂಲಕ ಉತ್ತರವು ಸಿಗತೊಡಗಿತು. ಹೀಗೆಯೇ ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿ ಆಯಿತು.

ಜನಸಾಮಾನ್ಯರು ತೆರಿಗೆ ಸರಿಯಾಗಿ ಕಟ್ಟಿದರೆ ಮಾತ್ರ ಇಸ್ರೋ ವಿಜ್ಞಾನಿಗಳು ಕೈಗೊಳ್ಳುವ ಸಂಶೋಧನೆ ಮತ್ತು ಉಪಗ್ರಹ ಉಡಾವಣೆಗೆ ಸರ್ಕಾರ ಅನುದಾನ ನೀಡಲು ಸಾಧ್ಯ. ಇಸ್ರೋ ಉಡಾವಣೆ ಮಾಡುವ ವಿವಿಧ ಉದ್ದೇಶಿತ ತಂತ್ರಜ್ಞಾನವನ್ನು ಎಲ್ಲ ಜನರು ಪ್ರತ್ಯೇಕ್ಷ ಮತ್ತು ಪರೋಕ್ಷವಾಗಿ ಬಳಕೆ ಮಾಡಿಕೊಳ್ಳುತ್ತಾರೆ ಎಂದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿಯ ಅಧ್ಯಕ್ಷ ವೆಂಕಟೇಶ ದೇವರು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ರಾಜ್ಯ ಘಟಕದ ಖಜಾಂಚಿ ಗಿರೀಶ ಕಡ್ಲೇವಾಡ, ಜಿಲ್ಲಾಧಿಕಾರಿ ಬಿ.ಶರತ್ ಮಾತನಾಡಿದರು.

ಪ್ರಧಾನ ಸಂಯೋಜಕ ಕುಂಟೆಪ್ಪ ಗೌರಿಪುರ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು, ಇಸ್ರೋ ವಿಜ್ಞಾನಿ ಪಿ.ಜೆ. ಭಟ್, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಬಸಪ್ಪ ಗದ್ದಿ, ನಿಜಾನಂದರೆಡ್ಡಿ, ವೀರೇಶ ಶೆರೆಗಾರ, ವೆಂಕಟೇಶ ಬೇವಿನಬೆಂಚಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.