ADVERTISEMENT

ಏಮ್ಸ್ ಬೇಡಿಕೆ: ಸದನದಲ್ಲಿ ಮೊಳಗದ ಒಗ್ಗಟ್ಟಿನ ದನಿ

ರಾಯಚೂರಿನಲ್ಲಿ 135ನೇ ದಿನಕ್ಕೆ ಪಾದಾರ್ಪಣೆ ‌ಮಾಡಿರುವ ಧರಣಿ

ನಾಗರಾಜ ಚಿನಗುಂಡಿ
Published 24 ಸೆಪ್ಟೆಂಬರ್ 2022, 13:57 IST
Last Updated 24 ಸೆಪ್ಟೆಂಬರ್ 2022, 13:57 IST
ರಾಯಚೂರಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಏಮ್ಸ್‌ ಹೋರಾಟ ಸಮಿತಿಯು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯು ಶನಿವಾರ 135ನೇ ಕಾಲಿಟ್ಟಿದೆ.
ರಾಯಚೂರಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಏಮ್ಸ್‌ ಹೋರಾಟ ಸಮಿತಿಯು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯು ಶನಿವಾರ 135ನೇ ಕಾಲಿಟ್ಟಿದೆ.   

ರಾಯಚೂರು: ‘ಅಖಿಲ‌ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ರಾಯಚೂರಿನಲ್ಲಿ ಸ್ಥಾಪಿಸುವಂತೆ ರಾಜ್ಯದ ವಿಧಾನ ಮಂಡಲ ಅಧಿವೇಶನದಲ್ಲಿ ಜಿಲ್ಲೆಯ ಶಾಸಕರು ಒಗ್ಗಟ್ಟಿನಿಂದ ಸರ್ಕಾರದ ಮೇಲೆ ಒತ್ತಡ ಹಾಕುತ್ತಿಲ್ಲ’

ಜಿಲ್ಲೆಯ ಜನರು ಈ ರೀತಿ ಅಸಮಾಧಾನ ಹೊರಹಾಕುತ್ತಿದ್ದಾರೆ.‌ ಏಮ್ಸ್ ಬೇಡಿಕೆ ಹೋರಾಟವು ಜಿಲ್ಲೆಯಾದ್ಯಂತ‌‌ ವ್ಯಾಪಿಸಿದ್ದು, ಮಠಾಧೀಶರು ಸೇರಿದಂತೆ ನೂರಾರು ಸಂಘ, ಸಂಸ್ಥೆಗಳು ಈ ಹೋರಾಟ ಬೆಂಬಲಿಸುತ್ತಿದ್ದಾರೆ. ಬೇಡಿಕೆ ಈಡೇರಿಸುವಂತೆ ನಡೆಸುತ್ತಿರುವ ಹೋರಾಟದ ತೀವ್ರತೆ ಮತ್ತು ಒತ್ತಡವನ್ನು ಸರ್ಕಾರಕ್ಕೆ ಸರಿಯಾದ ರೀತಿಯಲ್ಲಿ ಜನಪ್ರತಿನಿಧಿಗಳು ತಲುಪಿಸುತ್ತಿಲ್ಲ ಎನ್ನುವ ಅಸಮಾಧಾನವನ್ನು ಹೋರಾಟಗಾರರು ಮತ್ತು ಸಾರ್ವಜನಿಕರು ಹೊರಹಾಕುತ್ತಿದ್ದಾರೆ.

‘ಜಿಲ್ಲೆಯ ಅಭಿವೃದ್ಧಿಯ ವಿಷಯವನ್ನು ಪಕ್ಷಾತೀತವಾಗಿ, ರಾಜಕೀಯವನ್ನು ಬದಿಗಿಟ್ಟು ಎಲ್ಲ ಶಾಸಕರು ಒಟ್ಟಾಗಿ ಮುಖ್ಯಮಂತ್ರಿಗೆ ಮನವರಿಕೆ ಮಾಡುತ್ತಿಲ್ಲ. ಜನರೊಂದಿಗೆ ಗಟ್ಟಿಯಾಗಿ ಕುಳಿತುಕೊಳ್ಳುತ್ತಿಲ್ಲ. ತಮ್ಮ ಕ್ಷೇತ್ರಕ್ಕೆ ಸಿಮೀತವಾಗಿಯೇ ಶಾಸಕರು ಒಬ್ಬೊಬ್ಬರಾಗಿ ಸರ್ಕಾರದ ಗಮನ ಸೆಳೆಯುತ್ತಿದ್ದಾರೆ. ಇದಕ್ಕೆ ಸ್ಪಂದಿಸದ ಸರ್ಕಾರದ ವಿರುದ್ಧ ಶಾಸಕರೆಲ್ಲರೂ ಒಟ್ಟಾಗಿ ಒತ್ತಡ ಹೇರುವ ಕೆಲಸ ಮಾಡುತ್ತಿಲ್ಲ. ಅಧಿಕಾರಕ್ಕೆ ಅಂಟಿಕೊಂಟಿದ್ದಾರೆ ವಿನಾ ಅಭಿವೃದ್ಧಿಗೆ ಬದ್ಧವಾಗಿಲ್ಲ’ ಎಂದು ಏಮ್ಸ್‌ ಹೋರಾಟವನ್ನು ಬೆಂಬಲಿಸುತ್ತಿರುವ ಪ್ರಜ್ಞಾವಂತ ನಾಗರೀಕರು ಆರೋಪಿಸುತ್ತಿದ್ದಾರೆ.

ADVERTISEMENT

ವಿವಿಧ ಸಮಾಜಗಳ ಸಂಘಗಳು, ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ಸಮೂಹ, ಅಸಂಘಟಿತರು, ಸಂಘಟಿತ ಉದ್ಯೋಗಿಗಳು, ಆಟೋ ಚಾಲಕರು, ರಾಜಕೀಯ ಪಕ್ಷಗಳು, ಮಠಾಧೀಶರು, ಪ್ರಗತಿಪರರು.. ಹೀಗೆ ಸಮಾಜದಲ್ಲಿರುವ ಜನರೆಲ್ಲರೂ ಏಮ್ಸ್‌ ಹೋರಾಟ ಸಮಿತಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಹೋರಾಟ ಸಮಿತಿ ಪದಾಧಿಕಾರಿಗಳು ಹೇಳುತ್ತಿದ್ದಾರೆ.

’ಶಾಂತಿಯುತವಾಗಿ ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ಸ್ಪಂದಿಸುವ ಕೆಲಸ ಮಾಡಬೇಕು. ಬೇಡಿಕೆ ಈಡೇರುವವರೆಗೂ ಹೋರಾಟ ಕೈಬಿಡುವುದಿಲ್ಲ. ರಾಯಚೂರಿನಲ್ಲಿಯೇ ಏಮ್ಸ್‌ ಸ್ಥಾಪಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವವರೆಗೂ ಹೋರಾಟ ನಡೆಯಲಿದೆ’ ಎಂದು ರಾಯಚೂರು ಜಿಲ್ಲಾ ಏಮ್ಸ್‌ ಹೋರಾಟ ಸಮಿತಿ ಅಧ್ಯಕ್ಷ ಡಾ.ಬಸವರಾಜ ಕಳಸ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.