ADVERTISEMENT

ಭಿತ್ತಿಚಿತ್ರಗಳಿಂದ ಕಂಗೊಳಿಸುವ ಅಂಬಾಮಠ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 9:52 IST
Last Updated 18 ಜನವರಿ 2019, 9:52 IST
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಅಂಬಾಮಠದಲ್ಲಿ ಕಲಾವಿದರು ಚಿತ್ರ ಬಿಡಿಸಿದರು
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಅಂಬಾಮಠದಲ್ಲಿ ಕಲಾವಿದರು ಚಿತ್ರ ಬಿಡಿಸಿದರು   

ರಾಯಚೂರು: ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಅಂಬಾಮಠದ ಜಾತ್ರಾ ಮಹೋತ್ಸವವು ಸಮೀಪಿಸುತ್ತಿದ್ದು, ಈ ಬಾರಿ ದೇವಸ್ಥಾನ ಮತ್ತು ಅದರ ಸುತ್ತಮುತ್ತಲಿನ ವಾತಾವರಣದಲ್ಲಿ ಭಿತ್ತಿಚಿತ್ರಗಳು ವಿಶೇಷವಾಗಿ ಗಮನ ಸೆಳೆಯುತ್ತಿವೆ.

ಕರ್ನಾಟಕ ಲಲಿತಕಲಾ ಅಕಾಡೆಮಿ, ಶ್ರೀ ಅಂಬಾದೇವಿ ದೇವಸ್ಥಾನ ಆಡಳಿತ ಸಮಿತಿ ಹಾಗೂ ಬೆಂಗಳೂರಿನ ಆಕ್ಸ್ ಫರ್ಡ್ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಐದು ದಿನಗಳವರೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಭಿತ್ತಿಚಿತ್ರ ಕಾರ್ಯಾಗಾರದ ಮೂಲಕ ಭಕ್ತರ ಚಿತ್ತಾಕರ್ಷಿಸುವ ಕೆಲಸವಾಗಿದೆ.

ಜನವರಿ 11 ರಿಂದ 15 ರವರೆಗೂ ನಡೆದ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 20 ಪ್ರಸಿದ್ಧ ಕಲಾವಿದರು, 20 ಸಹಾಯಕ ಕಲಾವಿದರು ಹಾಗೂ ಆಕ್ಸ್ ಫರ್ಡ್ ಕಾಲೇಜಿನ 75 ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಸಹಾಯಕರಾಗಿ ಚಿತ್ರಕಲಾ ಕಾರ್ಯಾಗಾರಕ್ಕೆ ವಿಶೇಷ ಮೆರಗು ತುಂಬಿದರು.

ADVERTISEMENT

ಭಿತ್ತಿಚಿತ್ರಗಳ ಮೂಲಕ ಅಂಬಾಮಠವನ್ನು ಅಂದ-ಚಂದಗೊಳಿಸುವ ವಿಷಯವನ್ನು ಕಲಾವಿದರಿಗೆ ನೀಡಲಾಗಿತ್ತು. ಕಲಾವಿದರೆಲ್ಲರೂ ಪರಸ್ಪರ ಸ್ಪರ್ಧೆಗೆ ಬಿದ್ದು ಚಿತ್ರಗಳನ್ನು ಬಿಡಿಸಿ, ಜನಮನ ಸೆಳೆಯುವಲ್ಲಿ ಯಶಸ್ವಿಯಾದರು.

ಪ್ರಮುಖವಾಗಿ ಅಂಬಾದೇವಿಯ ಚರಿತ್ರೆಯನ್ನಾಧರಿಸಿ ಬಿಡಿಸಿದ ವಿವಿಧ ಚಿತ್ರಗಳು, ಚರಿತ್ರೆಯ ಕರ್ತೃ ಚಿದಾನಂದವಧೂತರ ಚಿತ್ರಗಳು, ನಾಡಿನ ಸಂಸ್ಕೃತಿ, ಕಲೆಯಲ್ಲಿ ಬಯಲಾಟದ ವಿವಿಧ ದೃಶ್ಯಗಳು ಯಕ್ಷಗಾನ, ವಾರ್ಲಿ ಚಿತ್ರ, ನಿಸರ್ಗದ ಚಿತ್ರಗಳು, ಯೋಗಾಸನದ ದೃಶ್ಯ, ದೇವಸ್ಥಾನದ ಹೊರಗೋಡೆ, ಮುಂಬದಿಯ ಮಂಟಪಗಳು, ಬಾವಿಯ ಗೋಡೆ, ಅನ್ನ ದಾಸೋಹ ಬಯಲಾಲಯದ ತುಂಬ ಚಿತ್ರಗಳು ಕಲಾವಿದರ ಕಲ್ಪನೆಯಂತೆ ರಚನೆಗೊಂಡಿವೆ.

ಕಲ್ಯಾಣ ಮಂಟಪದ ಕಲ್ಯಾಣೋತ್ಸವದ ದೃಶ್ಯಗಳು, ದೇವಸ್ಥಾನದ ಎಡ ಮತ್ತು ಬಲ ಬೀದಿಯು ವರ್ಣಮಯವಾಗಿ ಕಂಗೊಳಿಸುತ್ತಿವೆ. ಹಾಸ್ಟೆಲ್, ಅತಿಥಿ ಗೃಹ, ಆಸ್ಪತ್ರೆ, ಬಸ್ ನಿಲ್ದಾಣ ಹಾಗೆ ನೀರು ಸಂಗ್ರಹ ತೊಟ್ಟಿಗಳು, ಪ್ರೌಢಶಾಲೆಯ ಗೋಡೆ ಮತ್ತು ಆವರಣವನ್ನು ವಿಶೇಷವಾಗಿ ಚಿತ್ರಿಸಿರುವುದನ್ನು ನೋಡಿದರೆ ಕಲಾಸಕ್ತರು ಮಂತ್ರಮುಗ್ಧರಾಗುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.