ಮುದಗಲ್: ಇಲ್ಲಿಗೆ ಸಮೀಪದ ಆನೆಹೊಸೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರವು ಅವ್ಯವಸ್ಥೆಯ ಆಗರವಾಗಿದೆ. ತಜ್ಞ ವೈದ್ಯರು, ಸಿಬ್ಬಂದಿ ಕೊರತೆಯಿಂದಾಗಿ ಗ್ರಾಮೀಣ ಭಾಗದ ಬಡ ಜನರಿಗೆ ಆರೋಗ್ಯ ಭಾಗ್ಯ ಮರೀಚಿಕೆಯಾಗಿದೆ.
ಹತ್ತಾರು ಗ್ರಾಮಗಳ 30 ಸಾವಿರಕ್ಕೂ ಹೆಚ್ಚು ಜನರು ಈ ಆರೋಗ್ಯ ಕೇಂದ್ರದ ಉಪಯೋಗ ಪಡೆದುಕೊಳ್ಳುತ್ತಾರೆ. ಪ್ರತಿನಿತ್ಯ 150ಕ್ಕೂ ಹೆಚ್ಚು ಹೊರ ರೋಗಿಗಳು ಚಿಕಿತ್ಸೆ ಪಡೆಯಲು ಬರುತ್ತಾರೆ. ಆದರೆ, ಆರೋಗ್ಯ ಕೇಂದ್ರದಲ್ಲಿ ಸಮರ್ಪಕ ವೈದ್ಯರು ಮತ್ತು ಸಿಬ್ಬಂದಿ ಇಲ್ಲದೆ ರೋಗಿಗಳು ತೊಂದರೆ ಅನುಭವಿಸುತ್ತಾರೆ.
ಆರೋಗ್ಯ ಕೇಂದ್ರದಲ್ಲಿ 5 ಜನ ತಜ್ಞ ವೈದ್ಯರ ಹುದ್ದೆಗೆ ಮಂಜೂರಾತಿ ಇದೆ. ಒಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಜನ್, ಹೆರಿಗೆ, ಮಕ್ಕಳ, ಶಸ್ತ್ರ ಚಿಕಿತ್ಸೆ ತಜ್ಞರ ಹುದ್ದೆ ಖಾಲಿ ಇವೆ. ಒಬ್ಬ ಎಂಬಿಬಿಎಸ್ ವೈದ್ಯ, ಆಯುಷ್ ವೈದ್ಯರು ಹಾಗೂ ನೇತ್ರ ತಜ್ಞರು ಇದ್ದಾರೆ.
ರಾತ್ರಿ ವೇಳೆ ವೈದ್ಯರು ಇರುವುದಿಲ್ಲ. ನರ್ಸ್‌ಗಳೇ ವೈದ್ಯರಾಗಿರುತ್ತಾರೆ.
‘ಸಾರ್ವಜನಿಕರು ವೈದ್ಯರ ಬಗ್ಗೆ ವಿಚಾರಿಸಿದರೆ ಜನರ ಜೊತೆ ಸಿಬ್ಬಂದಿ ಅನುಚಿತವಾಗಿ ವರ್ತಿ ಸುತ್ತಾರೆ. ಆರೋಗ್ಯ ಕೇಂದ್ರದಲ್ಲಿ 14 ಹುದ್ದೆಗಳು ಖಾಲಿ ಇವೆ. ಮಧ್ಯಾಹ್ನ ಆದರೆ ಸಾಕು ಕೆಲ ಸಿಬ್ಬಂದಿ ಅರ್ಧಕ್ಕೆ ಕೆಲಸ ಬಿಟ್ಟು ಮನೆಗೆ ಹೋಗುತ್ತಾರೆ’ ಎಂದು ಗ್ರಾಮಸ್ಥ ಮಹೆಬೂಬ ಆರೋಪಿಸಿದರು.
ಆರೋಗ್ಯ ಕೇಂದ್ರದಲ್ಲಿ ಎಕ್ಸ್ ರೇ ಯಂತ್ರ ಇದೆ. ತಜ್ಞರಿಲ್ಲ. ಯಂತ್ರ ಆರೋಗ್ಯ ಕೇಂದ್ರದಲ್ಲಿ ದೂಳು ತಿನ್ನುತ್ತಿದೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಎಂದು ಸಾರ್ವಜನಿಕರು ಅನೇಕ ಬಾರಿ ಲಿಖಿತ ಹಾಗೂ ಮೌಖಿಕವಾಗಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಗಂಭೀರ ಆರೋಪವಾಗಿದೆ.
ಸರ್ಕಾರಿ ಆಸ್ಪತ್ರೆಗೆ ಬಡ ಜನರು ದಿನನಿತ್ಯ ಚಿಕಿತ್ಸೆಗೆ ಬರುತ್ತಾರೆ. ತಜ್ಞ ವೈದ್ಯರಿಲ್ಲದೆ ದೂರದ ಲಿಂಗಸುಗೂರು, ಇಳಕಲ್, ಬಾಗಲಕೋಟೆ, ರಾಯಚೂರು ನಗರದ ಖಾಸಗಿ ಆಸ್ಪತ್ರೆಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗುತ್ತಿದೆ.
ಆರೋಗ್ಯ ಕೇಂದ್ರದಲ್ಲಿ ಸಂಜೆಯ ನಂತರ ವೈದ್ಯರು ಇರುವುದಿಲ್ಲ. ಗರ್ಭಿಣಿ, ಬಾಣಂತಿಯರಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ನರಳಾಡುತ್ತಾರೆ. ಹೆರಿಗೆ ತಜ್ಞರಿಲ್ಲದ ಕಾರಣ 2024ರಲ್ಲಿ ಆರೋಗ್ಯ ಕೇಂದ್ರದಲ್ಲಿ ಕೇವಲ 76 ಹೆರಿಗೆ ಆಗಿವೆ. ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಕೆಲ ಸಿಬ್ಬಂದಿ ವಸತಿ ಗೃಹಗಳಲ್ಲಿ ಇರುವುದಿಲ್ಲ. ಲಿಂಗಸುಗೂರು ಸೇರಿ ಇನ್ನಿತರ ಕಡೆ ಮನೆ ಮಾಡಿಕೊಂಡು ಇದ್ದಾರೆ. ಕೆಲ ವಸತಿ ಗೃಹಗಳು ಖಾಲಿ ಬಿದ್ದಿವೆ.
ಆನೆಹೊಸೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ತಜ್ಞ ವೈದ್ಯರನ್ನು ನೇಮಿಸಿ ಬಡವರಿಗೆ ಅನುಕೂಲ ಮಾಡಿಕೊಡಬೇಕುಮೈಬೂಬ್ ಗ್ರಾಮಸ್ಥ
ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರ ಕೊರತೆ ಇದೆ. ತಜ್ಞ ವೈದ್ಯರನ್ನು ನೀಡಿ ಎಂದು ಇಲಾಖೆ ಮೇಲಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಿದ್ದೇವೆಡಾ.ಸುರೇಂದ್ರಬಾಬು ಡಿಎಚ್‌ಒ ರಾಯಚೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.