ರಾಯಚೂರು: ಅಂಗನವಾಡಿ ಸೇವೆಗಳಲ್ಲಿ ಮುಖ ಗುರುತಿಸುವಿಕೆ (ಎಫ್‌ಆರ್‌ಎಸ್) ವ್ಯವಸ್ಥೆಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಫೆಡರೇಷನ್ ವತಿಯಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
‘ಭಾರತದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕಕ್ಕಿರುವ ಐಸಿಡಿಎಸ್ ಯೋಜನೆಯನ್ನು ಫಲಾನುಭವಿಗಳನ್ನು ಆಕರ್ಷಿಸಲು ಕ್ರಮ ಕೈಗೊಳ್ಳಬೇಕಾದ ಸರ್ಕಾರ ಯೋಜನೆಯನ್ನು ಸಂಕೀರ್ಣಗೊಳಿಸಿ, ಯಾವುದೇ ಸೌಲಭ್ಯಗಳನ್ನು ನೀಡದೇ ಮುಖಚಹರೆ ಗುರುತಿಸುವ ಕ್ರಮ ಅಳವಡಿಸಿದ್ದರಿಂದ ಕೇಂದ್ರ ಮಟ್ಟದಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತಿವೆ’ ಎಂದು ದೂರಿದರು.
ಅಂಗನವಾಡಿ ಸೇವೆಗಳಲ್ಲಿ ಗರ್ಭಿಣಿಯರಿಗೆ ಹಾಲುಣಿಸುವ ತಾಯಂದಿರಿಗೆ, 6 ತಿಂಗಳಿನಿಂದ 3 ವರ್ಷದೊಳಗಿನ ಮಕ್ಕಳಿಗೆ ಟೇಕ್ ಹೋಂ ಪೂರಕ ಪೋಷಕಾಂಶಯುಕ್ತ ಆಹಾರವನ್ನು ನೀಡುವ ವ್ಯವಸ್ಥೆ ಇದ್ದು, ಆದರೆ ಎಫ್‌ಆರ್‌ಎಸ್ ವ್ಯವಸ್ಥೆಯಿಂದ ಗರ್ಭಿಣಿಯರು, ತಾಯಂದಿರು ಮತ್ತು ಮಕ್ಕಳು ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರ ತಕ್ಷಣ ಎಫ್‌ಆರ್‌ಎಸ್ ಪದ್ಧತಿಯನ್ನು ಕೈಬಿಡಬೇಕು. ಇಲ್ಲವೇ ಎಲ್ಲ ಚಟುವಟಿಕೆಗಳನ್ನು ಪೂರೈಸಲು ಅಂಗನವಾಡಿ ಕೇಂದ್ರಗಳಲ್ಲಿ ವೈಫೈ ವ್ಯವಸ್ಥೆಯನ್ನು ಮಾಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಪೂರ್ಣಾವಧಿ ಉದ್ಯೋಗಿಗಳಾಗಿದ್ದು, ಗ್ರಾಚ್ಯುಟಿ, ಪಿಎಫ್, ಇಎಸ್‌ಐ, ಪಿಂಚಣಿ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡಬೇಕು. ತುಟ್ಟಿ ಭತ್ಯೆ, ಪ್ರಭಾರ ಭತ್ಯೆ ಹೆಚ್ಚಳ ಮಾಡಬೇಕು. ಚಟುವಟಿಕೆ ಆಧಾರದಲ್ಲಿ ಪ್ರೋತ್ಸಾಹ ಧನ ನೀಡುತ್ತಿದ್ದು, ಅದನ್ನು ಕೈಬಿಟ್ಟು, ಕಾಯಂಗೊಳಿಸಿ, ಕನಿಷ್ಠ ವೇತನ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಬೇಕು.ನಿವೃತ್ತಿ ವಯೋಮಿತಿಯನ್ನು 65 ವರ್ಷಗಳಿಗೆ ನಿಗದಿ ಮಾಡಬೇಕು. ಕೇಂದ್ರ ಸರ್ಕಾರ 2023-24ನೇ ಸಾಲಿನಿಂದ ಅಕ್ಕಿಯ ಪ್ರಮಾಣ ಕಡಿಮೆ ಮಾಡಿ ಗೋಧಿಯನ್ನು ಖರೀದಿಸಲು ಸೂಚಿಸಿದ್ದು, ರಾಜ್ಯದ ಆಹಾರ ಕ್ರಮದ ಅನುಸಾರ ಗೋಧಿ ಪ್ರಮಾಣ ಕಡಿಮೆ ಮಾಡಿ, ಬೇಳೆಕಾಳುಗಳನ್ನು ಒದಗಿಸಲು ಅಗತ್ಯ ಅನುದಾನ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಸಂಘದ ಮುಖಂಡರಾದ ಸಂಗಯ್ಯ ಹಿರೇಮಠ, ಸುಲೋಚನಾ, ಆದಿಲಕ್ಷ್ಮೀ, ಲಲಿತಾ, ರತ್ನಮ್ಮ, ಸಾವಿತ್ರಿ, ಸವಿತಾ, ಸಾವಿತ್ರಿ, ನಾಗರತ್ನ, ಲಲಿತಮ್ಮ ಸಾಲಿ, ಶಾಂತಮ್ಮ, ಹನುಮಂತಿ, ಜ್ಯೋತಿ, ಸರಸ್ವತಿ, ರೇಣುಕಾ, ಸಣ್ಣೆ, ಚಂದ್ರಶೇಖರ, ಲೀಲಾ ಕಟ್ಟಿ, ಚೆನ್ನಮ್ಮ, ಮಂಗಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.