ಸಿಂಧನೂರು: ‘ಕಾಂಗ್ರೆಸ್ ಸರ್ಕಾರದಲ್ಲಿ ದಿನಕ್ಕೊಂದು ಭ್ರಷ್ಟಾಚಾರ, ಹಗರಣಗಳು ಬಯಲಿಗೆ ಬರುತ್ತಿದ್ದು, ಆಡಳಿತದ ವೈಫಲ್ಯ ಮರೆಮಾಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದಾರೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಆರೋಪಿಸಿದರು.
ನಗರದ ದೇವರಾಜ ಅರಸು ಮಾರುಕಟ್ಟೆ ಬಳಿ ಶುಕ್ರವಾರ ಭಾರತೀಯ ಜನತಾ ಪಕ್ಷದ ನೂತನ ಕಚೇರಿ ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗೆ ನಾನು–ನೀನು ಎಂದು ಮುಸುಕಿನ ಗುದ್ದಾಟ ನಡೆಸಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಸತೀಶ ಜಾರಕಿಹೊಳಿ ಸೇರಿದಂತೆ ಇನ್ನು ಹಲವರು ಮುಖ್ಯಮಂತ್ರಿ ರೇಸ್‍ನಲ್ಲಿದ್ದಾರೆ’ ಎಂದರು.
‘ನವೆಂಬರ್‌ನಲ್ಲಿ ಸಿಎಂ ಬದಲಾವಣೆಯಾಗುವ ಸಾಧ್ಯತೆ ಇದೆ ಎಂಬ ವಿಚಾರ ಕಾಂಗ್ರೆಸ್ ಪಕ್ಷದ ಮುಖಂಡರಿಂದಲೇ ಬಹಿರಂಗಗೊಂಡಿರುವುದು ಗುಟ್ಟಾಗಿ ಉಳಿದಿಲ್ಲ’ ಎಂದು ಟೀಕಿಸಿದರು.
‘ಕಳೆದ ಬಾರಿ ಸಿದ್ದರಾಮಯ್ಯ ಲಿಂಗಾಯತ ವೀರಶೈವ ಎಂಬ ಬೇಧ-ಭಾವ ಹುಟ್ಟುಹಾಕಿ ಅದರ ಪರಿಣಾಮ ಅನುಭವಿಸಿದ್ದಾರೆ. ಅದಕ್ಕೆ ರಾಜ್ಯದ ಜನತೆ ಸರಿಯಾಗಿ ಬುದ್ದಿ ಕಲಿಸಿದ್ದರು. ಆದರೂ ಪಾಠ ಕಲಿಯದ ಅವರು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಮಾಡುವ ಮೂಲಕ ಜಾತಿಗಳನ್ನು ಒಡೆಯುವ ಕೆಲಸದಲ್ಲಿ ತೊಡಗಿದ್ದಾರೆ. ಇದನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸರಿಯಾದ ಬೆಲೆ ತೆರಬೇಕಾದ ಪರಿಸ್ಥಿತಿ ಬರುತ್ತದೆ’ ಎಂದು ಭವಿಷ್ಯ ನುಡಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಮುಖಂಡರಾದ ಕೆ.ಕರಿಯಪ್ಪ, ಬಸವರಾಜ ಕ್ಯಾವಟರ್, ಯಂಕೋಬ ನಾಯಕ ಹಾಗೂ ಸಿದ್ದರಾಮೇಶ ಮನ್ನಾಪುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.