ADVERTISEMENT

ಜಾನಪದದಿಂದ ಜನ ಜಾಗೃತಿಗೊಳಿಸುವ ಪ್ರಕಾಶಯ್ಯಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 16:14 IST
Last Updated 18 ಆಗಸ್ಟ್ 2022, 16:14 IST
ಪ್ರಕಾಶಯ್ಯ ನಂದಿ
ಪ್ರಕಾಶಯ್ಯ ನಂದಿ   

ರಾಯಚೂರು: ತಂದೆ–ತಾಯಿಯಿಂದ ಪ್ರೇರಣೆಗೊಂಡು ಜಾನಪದ ಕಲೆಯಲ್ಲಿ ತೊಡಗಿಸಿಕೊಂಡಿರುವ ತಾಲ್ಲೂಕಿನ ದೇವುಸುಗೂರ ಗ್ರಾಮದ ಜಾನಪದ ಕಲಾವಿದ ಪ್ರಕಾಶಯ್ಯ ನಂದಿ ಅವರು 2022ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತಂದೆ ತತ್ವ ಪದಕಾರರಾಗಿದ್ದರು, ತಾಯಿ ಜನಪದ ಹಾಡುಗಳನ್ನು ಹಾಡುತ್ತಿದ್ದರು. ಹೀಗಾಗಿ ಬಾಲ್ಯದಿಂದಲೇ ಜಾನಪದವನ್ನು ಮೈಗೂಡಿಸಿಕೊಂಡಿರುವ ಪ್ರಕಾಶಯ್ಯ ಅವರು, ಪೌರಾಣಿಕ ಕಥೆಗಳನ್ನು ಗೀಗಿ ಪದಗಳಲ್ಲಿ ಹಾಡುವ ಮೂಲಕ ಜನರನ್ನು ಪುಳಕೀತಗೊಳಿಸುತ್ತಿದ್ದರು. ಆನಂತರ ಸರ್ಕಾರಿ ಯೋಜನೆಗಳು ಮತ್ತು ಜನಜಾಗೃತಿಯತ್ತ ಗೀಗೀ ಪದ ಕಲೆ, ವೀರಗಾಸೆ ಮತ್ತು ಲಾವಣಿಯನ್ನು ಬಳಕೆ ಮಾಡುವುದಕ್ಕೆ ಆರಂಭಿಸಿದರು.

ಕಳೆದ 35 ವರ್ಷಗಳಿಂದ ಸತತವಾಗಿ ಸಾಕ್ಷರತೆ , ಕುಟುಂಬ ಕಲ್ಯಾಣ , ಬಾಲ್ಯ ವಿವಾಹ , ಇನ್ನಿತರ ಸಮಾಜ ಸೇವೆ ಮತ್ತು ಜಾನಪದ ಕಲಾವಿದರಾಗಿ ಸಕ್ರಿಯವಾಗಿ ತೊಡಗಿಸಿದ್ದಾರೆ. ಜನಪದ ಉಳಿಸುವುದು ಮತ್ತು ಬೆಳೆಸುವುದು ಬದುಕಿನ ಭಾಗ ಮಾಡಿಕೊಂಡಿರುವ ಪ್ರಕಾಶಯ್ಯ ನಂದಿ ಅವರ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ADVERTISEMENT

57 ರ ವಯೋಮಾನದ ಪ್ರಕಾಶಯ್ಯ ಅವರು, ಈಗಲೂ ಕಾರ್ಯಕ್ರಮಗಳನ್ನು ನೀಡುವುದಕ್ಕೆ ಹೋಗುತ್ತಾರೆ. ಜಾತ್ರೆಗಳು ಇರುವಲ್ಲಿ ಪ್ರಕಾಶಯ್ಯ ಅವರು ‘ಸೂಗುರೇಶ್ವರ ಯುವಕ ಮಂಡಳಿ’ ತಂಡದೊಂದಿಗೆ ಹಾಜರಾಗುತ್ತಾರೆ.

ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ‘ಒಬ್ಬ ಗ್ರಾಮೀಣ ಮಟ್ಟದ ಜಾನಪದ ಕಲಾವಿದನನ್ನು ಸರ್ಕಾರ ಗುರುತಿಸಿದ್ದು ನಮಗೆ ಅತ್ಯಂತ ಸಂತಸವನ್ನು ತಂದಿದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.