ADVERTISEMENT

ಬಗರ್ ಹುಕುಂ ಸಮಿತಿ ಸಭೆ: ‘ಸಾಗುವಳಿದಾರರಿಗೆ ಅನ್ಯಾಯವಾಗದಿರಲಿ’

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 10:59 IST
Last Updated 28 ಏಪ್ರಿಲ್ 2022, 10:59 IST
ಮಸ್ಕಿಯಲ್ಲಿ ಗುರುವಾರ ನಡೆದ ಬಗರ್ ಹುಕುಂ ಸಮಿತಿಯ ಪ್ರಥಮ ಸಭೆಯಲ್ಲಿ ಶಾಸಕ ಆರ್. ಬಸನಗೌಡ ಮಾತನಾಡಿದರು
ಮಸ್ಕಿಯಲ್ಲಿ ಗುರುವಾರ ನಡೆದ ಬಗರ್ ಹುಕುಂ ಸಮಿತಿಯ ಪ್ರಥಮ ಸಭೆಯಲ್ಲಿ ಶಾಸಕ ಆರ್. ಬಸನಗೌಡ ಮಾತನಾಡಿದರು   

ಮಸ್ಕಿ: ಸರ್ಕಾರಿ ಜಮೀನಿನಲ್ಲಿ 20 -30 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಸಾಗುವಳಿದಾರರಿಗೆ ಅನ್ಯಾಯವಾದದಂತೆ‌ ಕ್ರಮ ಕೈಗೊಳ್ಳಬೇಕು ಎಂದು ಬಗರ್ ಹುಕುಂ ಸಮಿತಿ ಅಧ್ಯಕ್ಷರೂ‌ ಅಗಿರುವ ಶಾಸಕ ಆರ್. ಬಸನಗೌಡ ತುರ್ವಿಹಾಳ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಬಸವೇಶ್ವರ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ನಡೆದ ಬಗರ್ ಹುಕುಂ ಸಮಿತಿ ಸಭೆಯ ಅಧ್ಯಕ್ಷತೆ‌ ವಹಿಸಿ ಮಾತನಾಡಿದ ಅವರು, ಗೈರಾಣಿ ಹಾಗೂ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುವ ರೈತರಿಗೆ ಪಟ್ಟ ನೀಡಬೇಕು. ಈ‌ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದರು.

ಮರು ಪರಿಶೀಲನೆಗೆ ಮನವಿ: ಜಿಲ್ಲಾಧಿಕಾರಿ ತಿರಸ್ಕರಿಸಿದ 393 ಸಾಗುವಳಿದಾರರ ಅರ್ಜಿಗಳನ್ನು ಮರು ಪರಿಶೀಲಿಸುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರು.

ADVERTISEMENT

ಸಮಿತಿ ಕಾರ್ಯದರ್ಶಿ ಹಾಗೂ ತಹಶೀಲ್ದಾರ್ ಕವಿತಾ ಆರ್. ಮಾತನಾಡಿ, ಇದುವರೆಗೆ ಬಂದ ಅರ್ಜಿಗಳ‌ ವಿವರಗಳನ್ನು ತಿಳಿಸಿದರು.
2019 ರವರೆಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿತ್ತು. ಇನ್ನೂ ಅರ್ಜಿ ಸಲ್ಲಿಕೆ‌ ಬಗ್ಗೆ ಮಾಹಿತಿ ಬಂದಿಲ್ಲ ಎಂದರು.

ಸಮಿತಿ ಸದಸ್ಯರಾದ ವೆಂಕಣ್ಣ ಸಾಹುಕಾರ್, ದುರಗೇಶ ನಾಯಕ, ಪ್ರಮೀಳಾ ದಾಸರ, ಕಂದಾಯ ಇಲಾಖೆ
ಅಧಿಕಾರಿಗಳು ಇದ್ದರು.

ಭೂಮಿ ನೀಡಲು ಹಿಂದೇಟು: ಮಸ್ಕಿ: ರಾಜಕೀಯ ಒತ್ತಡಕ್ಕೆ ಮಣಿದ ಜಲ ಸಂಪನ್ಮೂಲ ಅಧಿಕಾರಿಗಳು ಕಂದಾಯ ಇಲಾಖೆಗೆ ಭೂಮಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಶಾಸಕ ಆರ್. ಬಸನಗೌಡ ತುರ್ವಿಹಾಳ ಗುರುವಾರ ಆರೋಪಿಸಿದರು.

ತಹಶೀಲ್ದಾರ್ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಿನಿ ವಿಧಾನಸೌಧ ನಿರ್ಮಾಣಕ್ಕೆ 2019 ರಲ್ಲಿಯೇ ಸರ್ಕಾರ ₹ 10 ಕೋಟಿಗೆ ಪ್ರಸ್ತಾವ ಸಲ್ಲಿಸುವಂತೆ ಹೇಳಿದೆ.‌

ಸೌಧ ನಿರ್ಮಾಣಕ್ಕೆ ಬೇಕಾದ 5 ಎಕರೆ ಜಮೀನು‌ ಜಲ ಸಂಪನ್ಮೂಲ ಇಲಾಖೆಯಿಂದ ಪಡೆದು ಅದಕ್ಕೆ ಸಮನಾದ ಜಮೀನನ್ನು ಕಂದಾಯ ಇಲಾಖೆಗೆ ಹಸ್ಥಾಂತರಿಸಲು ಸಿದ್ದವಿದೆ. ಅಧಿಕಾರಿಗಳ ನಡುವೆ ಮಾತುಕತೆಯಾಗಿದೆ‌‌. ಜಮೀನು ಹಸ್ತಾಂತರಕ್ಕೆ ಒಪ್ಪಿಕೊಂಡಿದ್ದ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ವ್ಯರ್ಥ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.