ADVERTISEMENT

ಸಬ್ಸಿಡಿ ಯೋಜನೆಗಳಿಗೆ ಬ್ಯಾಂಕುಗಳ ಅಸಹಕಾರ

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧ್ಯಕ್ಷತೆ ಪ್ರಗತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 14:28 IST
Last Updated 14 ಆಗಸ್ಟ್ 2020, 14:28 IST
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ ಶುಕ್ರವಾರ ನಡೆಯಿತು
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ ಶುಕ್ರವಾರ ನಡೆಯಿತು   

ರಾಯಚೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭಿವೃದ್ಧಿ ಸೇರಿ ವಿವಿಧ ಯೋಜನೆಗಳಿಗೆ ರೂಪಿಸಿರುವ ಸಬ್ಸಿಡಿ ಹಾಗೂ ಸಾಲ ಯೋಜನೆಗಳು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನ ಆಗದೆ ಇರುವುದಕ್ಕೆ ಬ್ಯಾಂಕ್‌ ಶಾಖೆಗಳ ಅಸಹಕಾರವೇ ಕಾರಣ ಎನ್ನುವ ವಿಷಯದ ಕುರಿತು ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ಸುದೀರ್ಘ ಚರ್ಚೆ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದಿದ್ದ ತ್ರೈಮಾಸಿಕ ಸಭೆಯಲ್ಲಿ ಶಾಸಕರು ಕೇಳಿದ್ದ ಪ್ರಶ್ನೆಗಳಿಗೆ ವಿವಿಧ ಇಲಾಖೆಗಳಿಂದ ಕೈಗೊಂಡಿರುವ ಕ್ರಮಗಳ ಅನುಪಾಲನಾ ವರದಿ ಮಂಡನೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಯಿತು.

ಪರಿಶಿಷ್ಟರ ಅಭಿವೃದ್ಧಿಗಾಗಿ ಬ್ಯಾಂಕುಗಳ ಸಹಕಾರ ನೀಡದಿದ್ದರೆ ಜಿಲ್ಲೆಯ ಅಭಿವೃದ್ಧಿ ಹೇಗೆ ಸಾಧ್ಯ. ಫಲಾನುಭವಿಗಳನ್ನು ಆಯ್ಕೆ ಮಾಡಿದ ನಂತರ ಸಾಲ ನೀಡುವುದಕ್ಕೆ ಮುಂದಾಗಬೇಕು. ವಿನಾಕಾರಣ ವಿಳಂಬ ಮಾಡಿಸುತ್ತಿರುವುದರಿಂದ ನೂರಾರು ಜನರು ಜನಪ್ರತಿನಿಧಿಗಳನ್ನು ಪ್ರಶ್ನಿಸುತ್ತಿದ್ದಾರೆ. ಅರ್ಹರು ಎಂದು ಸಭೆಯಲ್ಲಿ ತೀರ್ಮಾನಿಸಿದ್ದನ್ನು ಬ್ಯಾಂಕ್‌ ಶಾಖೆಗಳು ಮಾನ್ಯ ಮಾಡುತ್ತಿಲ್ಲ. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಿವನಗೌಡ ನಾಯಕ ಹೇಳಿದರು.

ADVERTISEMENT

ಇದಕ್ಕೆ ದನಿಗೂಡಿಸಿ ಶಾಸಕರಾದ ವೆಂಕಟರಾವ್‌ ನಾಡಗೌಡ, ರಾಜಾ ವೆಂಕಟಪ್ಪ ನಾಯಕ, ಬಸನಗೌಡ ದದ್ದಲ ಮಾತನಾಡಿದರು. ‘ಫಲಾನುಭವಿಗಳನ್ನು ಆಯ್ಕೆ ಮಾಡಿದರೂ ಸಾಲ ಕೊಡುವುದಿಲ್ಲ ಎಂದರೆ, ಆಯ್ಕೆ ಮಾಡುವುದಾದರೆ ಏಕೆ? ಲೀಡ್‌ ಬ್ಯಾಂಕ್‌ ಮ್ಯಾನೇಜರುಗಳು ಈ ಬಗ್ಗೆ ಸೂಚನೆಗಳನ್ನು ಕೊಡಬೇಕು’ ಎಂದರು.

ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಮಾತನಾಡಿ, ತಾಲ್ಲೂಕು ಮಟ್ಟದಲ್ಲಿ ಫಲಾನುಭವಿಗಳ ಆಯ್ಕೆಗೊಳಿಸುವ ಸಭೆಗಳಲ್ಲಿ ಬ್ಯಾಂಕ್ ಅಧಿಕಾರಿ ಇರುತ್ತಾರೆ. ಅಲ್ಲಿಯೇ ಅಂತಿಮ ಪಟ್ಟಿ ಮಾಡಬೇಕು. ಅಲ್ಲಿ ಒಪ್ಪಿಕೊಳ್ಳುವ ಅಧಿಕಾರಿಯನ್ನೇ ಸಾಲ ಕೊಡಿಸುವುದಕ್ಕೆ ಹೊಣೆಗಾರ ಮಾಡಬೇಕು. ಇನ್ನು ಮುಂದೆ ಪ್ರತಿ ತಿಂಗಳು ಬ್ಯಾಂಕ್‌ಗಳು ವಿವಿಧ ಯೋಜನೆಗಳಿಗೆ ನೀಡಿದ ಸಾಲದ ಪರಿಶೀಲನೆಯನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಕನಿಷ್ಠಪಕ್ಷ ಸರ್ಕಾರಿ ಯೋಜನೆಗಳಿಗೆ ಬ್ಯಾಂಕ್‌ ಮ್ಯಾನೇಜರುಗಳ ಸಹಕಾರ ಕೊಟ್ಟು ಸಾಲ ಒದಗಿಸಬೇಕು. ಈ ಬಗ್ಗೆ ಏನೇ ದೂರುಗಳಿದ್ದರೂ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಪರಿಹಾರ ಮಾಡಬೇಕು ಎಂದು ಸೂಚಿಸಿದರು.

ಸಂಸದ ರಾಜಾ ಅಮರೇಶ್ವರ ನಾಯಕ, ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ ಇಟಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕ್ಕಂ ಪ್ರಕಾಶ್‌, ಟಿಎಲ್‌ಬಿಸಿ ಕಾಡಾ ಅಧ್ಯಕ್ಷ ಬಸನಗೌಡ ತುರ್ವಿಹಾಳ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.