ADVERTISEMENT

ರಾಯಚೂರು: ದೇವಸುಗೂರು ಕೃಷ್ಣಾನದಿಗೆ ಬೋಸ್ಟನ್ ಮಾದರಿ ಸೇತುವೆ

ಉಮಾಪತಿ ಬಿ.ರಾಮೋಜಿ
Published 18 ಜೂನ್ 2019, 19:30 IST
Last Updated 18 ಜೂನ್ 2019, 19:30 IST
ಶಕ್ತಿನಗರದ ಬಳಿ ದೇವಸೂಗೂರು ಕೃಷ್ಣಾನದಿಯ ಹಳೇ ಸೇತುವೆ ಪಕ್ಕದಲ್ಲಿ ನೂತನ ಸೇತುವೆ ನಿರ್ಮಾಣಕ್ಕಾಗಿ ಪೂರ್ವ ತಯಾರಿ ಆರಂಭಿಸಲಾಗಿದೆ
ಶಕ್ತಿನಗರದ ಬಳಿ ದೇವಸೂಗೂರು ಕೃಷ್ಣಾನದಿಯ ಹಳೇ ಸೇತುವೆ ಪಕ್ಕದಲ್ಲಿ ನೂತನ ಸೇತುವೆ ನಿರ್ಮಾಣಕ್ಕಾಗಿ ಪೂರ್ವ ತಯಾರಿ ಆರಂಭಿಸಲಾಗಿದೆ   

ಶಕ್ತಿನಗರ: ಸಮೀಪದದೇವಸುಗೂರು ಕೃಷ್ಣಾನದಿಗೆ ಅಡ್ಡಲಾಗಿ ₹154 ಕೋಟಿ ವೆಚ್ಚದಲ್ಲಿ ಬೋಸ್ಟನ್ ಮಾದರಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ಜುಲೈನಿಂದ ಆರಂಭಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಯೋಜಿಸಿದೆ.

ರಾಯಚೂರು ಮತ್ತು ಹೈದರಾಬಾದ್ ಮಧ್ಯೆ ಸಂಪರ್ಕ ಕಲ್ಪಿಸುವ ಹಗರಿ –ಜಡಚರ್ಲಾನಡುವಿನ ರಾಷ್ಟ್ರೀಯ ಹೆದ್ದಾರಿ 167ರ ಮಾರ್ಗದಲ್ಲಿ ಮಾದರಿ ಸೇತುವೆ ನಿರ್ಮಾಣವಾಗಲಿದೆ.ಹೈದರಾಬಾದ್ ನಿಜಾಮರ ಆಡಳಿತ ಅವಧಿಯಲ್ಲಿ ದೇವಸೂಗೂರಿನ ಕೃಷ್ಣಾನದಿಗೆ ಈಗಾಗಲೇ ಸೇತುವೆ ಇದೆ. ಇದು 35 ಕಮಾನುಗಳನ್ನು ಹೊಂದಿದೆ. 20 ಅಡಿ ಅಗಲ, 2,488 ಅಡಿ ಉದ್ದ, 60 ಅಡಿ ಎತ್ತರದ ಸೇತುವೆಯನ್ನು ಅಂದಿನ ಹೈದರಾಬಾದ್ ನಿಜಾಮರಾಗಿದ್ದ ಮೀರ್ ಉಸ್ಮಾನ್ ಅಲೀಖಾನ್ ಬಹದ್ದೂರ್ ನಿರ್ಮಿಸಿದ್ದರು. ಈ ಸೇತುವೆಯು ರಾಷ್ಟ್ರೀಯ ಹೆದ್ದಾರಿಯ ವಿಸ್ತೀರ್ಣಕ್ಕೆ ಹೋಲಿಸಿದರೆ ಸಾಕಷ್ಟು ಕಿರಿದಾಗಿದೆ.

ಹಳೇ ಸೇತುವೆ ಪಕ್ಕದಲ್ಲಿಯೇ 35 ಮೀಟರ್‌ ಅಂತರದಲ್ಲಿ ಚತುಷ್ಪಥ ರಸ್ತೆ ಹೊಂದಿರುವ ಬೋಸ್ಟನ್ ಸೇತುವೆಯ ನಿರ್ಮಾಣ ಕಾಮಗಾರಿಯನ್ನು ಹೈದರಾಬಾದ್‌ ಮೂಲದ ತೇಜಸ್‌ ಸಂಸ್ಥೆಗೆ ಮೇ 7 ರಂದು ಟೆಂಡರ್‌ ವಹಿಸಲಾಗಿದೆ.

ADVERTISEMENT

ಒಟ್ಟು 2.126 ಕಿಲೋ ಮೀಟರ್‌ ಉದ್ದದ ಸೇತುವೆಯಲ್ಲಿ ಚತುಷ್ಫಥ ರಸ್ತೆಯ 0.75 ಕಿಲೋಮೀಟರ್‌ ಉದ್ದದ ಬೌಸ್ಟ್ರಿಂಗ್ ಸ್ಟೀಲ್‌ ಸೇತುವೆಯ ನಿರ್ಮಾಣ ನಡೆಯಲಿದೆ.

ತೆಲಂಗಾಣ ಮತ್ತು ಕರ್ನಾಟಕದ ಗಡಿ ಪ್ರತ್ಯೇಕಿಸುವ ನದಿಯಲ್ಲಿ ಸೇತುವೆ ನಿರ್ಮಾಣ ಆಗುತ್ತಿದೆ. ಇದರಲ್ಲಿಕರ್ನಾಟಕ ರಸ್ತೆಯ ಉದ್ದ 0.490 ಕಿಲೋಮೀಟರ್ ಮತ್ತು ತೆಲಂಗಾಣ ರಸ್ತೆಯ ಉದ್ದ 0.886 ಕಿಲೋಮೀಟರ್ ಇದೆ.

‘ಈ ಸೇತುವೆಯು ನೋಡುಗರ ಕಣ್ಮನ ಸೆಳೆಯಲಿದೆ. ಹಳೆಯ ಸೇತುವೆಯನ್ನು ಸ್ಮಾರಕವಾಗಿ ಸಂರಕ್ಷಿಸಲೂ ಯೋಜಿಸಲಾಗಿದೆ’ ಎಂದು ಹೊಸಪೇಟೆ ವಿಭಾಗದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಮುಖ್ಯ ಎಂಜಿನಿಯರ್ ರಮೇಶ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.