ADVERTISEMENT

ಕೂಲಿ ಅರಸಿ ಹೊರಟಿದ್ದವರು ಅಪಘಾತದಲ್ಲಿ ಸಾವು: ತಬ್ಬಲಿಯಾದ ಬಾಲಕ

ಶಿರಾ ಬಳಿ ಸಂಭವಿಸಿದ ಅಪಘಾತ: ದುರಂತದ ಅರಿವಿಲ್ಲದ ಬಾಲಕ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2022, 19:46 IST
Last Updated 25 ಆಗಸ್ಟ್ 2022, 19:46 IST
ಅಪಘಾತದಲ್ಲಿ ಮೃತಪಟ್ಟ ರಾಯಚೂರು ಜಿಲ್ಲೆಯ ಕುರಕುಂದಾ ಗ್ರಾಮದ ಸಿದ್ದಣ್ಣ ಅವರ ಮನೆ ಮುಂದೆ ಕುಟುಂಬಸ್ಥರ ಆಕ್ರಂದನ
ಅಪಘಾತದಲ್ಲಿ ಮೃತಪಟ್ಟ ರಾಯಚೂರು ಜಿಲ್ಲೆಯ ಕುರಕುಂದಾ ಗ್ರಾಮದ ಸಿದ್ದಣ್ಣ ಅವರ ಮನೆ ಮುಂದೆ ಕುಟುಂಬಸ್ಥರ ಆಕ್ರಂದನ   

ಸಿರವಾರ (ರಾಯಚೂರು ಜಿಲ್ಲೆ): ಕೂಲಿ ಅರಸಿ, ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಆ ಎರಡು ಕುಟುಂಬಗಳು ಬೆಂಗಳೂರಿಗೆ ಹೊರಟ್ಟಿದ್ದವು. ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಬಳಿ ನಡೆದ ಅಪಘಾತದಲ್ಲಿ ಕುಟುಂಬದ ಕನಸು ನುಚ್ಚುನೂರಾಯಿತು

ತಾಲ್ಲೂಕಿನ ಕುರುಕುಂದಾ ಗ್ರಾಮದ ಒಂದೇ ಕುಟುಂಬದ ನಾಲ್ವರು ಮತ್ತು ವಡವಟ್ಟಿ ಗ್ರಾಮದ ಒಂದೇ ಕುಟುಂಬದ ಮೂವರು ಮೃತರಲ್ಲಿ ಸೇರಿದ್ದಾರೆ. ಇಬ್ಬರು ವಾಹನ ಚಾಲಕರು ಇದ್ದಾರೆ.

ಕುರುಕುಂದಾ ಗ್ರಾಮದ ಕ್ರೂಸರ್ ವಾಹನ ಚಾಲಕ ಸಿದ್ದಯ್ಯಸ್ವಾಮಿ ವಾರಕ್ಕೆರಡು ಸಲ ಕೂಲಿಕಾರರನ್ನು ಬೆಂಗಳೂರಿಗೆ ಕರೆದೊಯ್ಯುತ್ತಿದ್ದ. ಯಾದಗಿರಿ ಜಿಲ್ಲೆ ಹತ್ತಿಗುಡೂರಿನಿಂದ ಬಂದಿದ್ದ ಅಕ್ಕ ಸುಜಾತಾ, ಭಾವ ಪ್ರಭುಸ್ವಾಮಿ ಮತ್ತು ದಂಪತಿ ಪುತ್ರ ವಿನೋದ್‌ ಕೂಡಾ ಹೊರಟಿದ್ದರು. ದಂಪತಿ, ಮಗು ಜೊತೆಗೆ ಸಿದ್ದಯ್ಯಸ್ವಾಮಿ ಕೂಡಾ ಮೃತಪಟ್ಟಿದ್ದಾರೆ.

ADVERTISEMENT

ಒಬ್ಬ ಬಾಲಕ ಸುರಕ್ಷಿತವಾಗಿದ್ದಾನೆ. ಕೂಲಿ ಮಾಡಿ, ಸಾಲ ತೀರಿಸಲು ಕುಟುಂಬ ಸದಸ್ಯರ ಜೊತೆ ಸುಜಾತಾ ಕೂಡಾ ಹೊರಟಿದ್ದರು.

ವಡವಟ್ಟಿ ಗ್ರಾಮದ ಕ್ರೂಸರ್ ವಾಹನ ಚಾಲಕ ಕೃಷ್ಣ, ಅವರ ಅಕ್ಕ ಲಿಂಗಮ್ಮ ಮತ್ತು ಆಕೆಯ ಪುತ್ರಿ ಐಶ್ವರ್ಯಾ ಮೃತಪಟ್ಟಿದ್ದಾರೆ. ನಾಗರಪಂಚಮಿಗೆ ತವರಿಗೆ ಮನೆಗೆ ಬಂದಿದ್ದ ಲಿಂಗಮ್ಮ ಸಹೋದರ ಮತ್ತು ಪುತ್ರಿಯ ಜೊತೆ ಬೆಂಗಳೂರಿಗೆ ಹೊರಟಿದ್ದರು. ನವಲುಕಲ್ಲ ಗ್ರಾಮದ ಆದೆಪ್ಪ ಸಹ ಮೃತಪಟ್ಟಿದ್ದಾರೆ. ಆಪ್ತರನ್ನು ಕಳೆದುಕೊಂಡ ನೋವು ಕುಟುಂಬ ಸದಸ್ಯರಲ್ಲಿ ಮಡುಗಟ್ಟಿದೆ.

ತಬ್ಬಲಿಯಾದ ಬಾಲಕ

ತುಮಕೂರು: ಅಪಘಾತದಲ್ಲಿ ತಂದೆ, ತಾಯಿ, ತಮ್ಮನನ್ನು ಕಳೆದುಕೊಂಡ ಐದು ವರ್ಷದ ಸಂದೀಪ್ ಎಂಬ ಬಾಲಕ ತಬ್ಬಲಿಯಾಗಿದ್ದಾನೆ.

ಈತನ ತಂದೆ–ತಾಯಿ, ಸಹೋದರ ಸ್ಥಳದಲ್ಲೇ ಮೃತಪಟ್ಟಿದ್ದು, ಸಂದೀಪ್‌ ಪಾರಾಗಿದ್ದಾನೆ. ಅಪ್ಪ, ಅಮ್ಮನ ಸಾವಿನ ಅರಿವಿಲ್ಲದೆ ಬಾಲಕ ಕುಳಿತಿದ್ದ ದೃಶ್ಯ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಕಂಡು ಬಂತು.

ಪ್ರಭು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹೆಂಡತಿ, ಮಕ್ಕಳು ಒಂದೆಡೆ ಇರಬೇಕು ಎಂಬ ಕಾರಣಕ್ಕೆ ಕಳೆದ ಕೆಲವು ದಿನಗಳಿಂದ ಎಲ್ಲರೂ ಬೆಂಗಳೂರಿನಲ್ಲಿ ವಾಸವಿದ್ದರು.

6 ಮಂದಿಯ ನೇತ್ರದಾನ

ಮೃತಪಟ್ಟವರಲ್ಲಿ 6 ಮಂದಿಯ ನೇತ್ರಗಳನ್ನು ದಾನ ಮಾಡ ಲಾಯಿತು. ‌‌‌‌‌‌‌ಮೃತರ ಕುಟುಂಬಸ್ಥರು ನೇತ್ರದಾನಕ್ಕೆ ಒಪ್ಪಿಕೊಂಡರು.

ಶಿರಾ ಸರ್ಕಾರಿ ಆಸ್ಪತ್ರೆ ವೈದ್ಯರು ಮೃತಪಟ್ಟಿದ್ದ ನಿಂಗಮ್ಮ, ಮೀನಾಕ್ಷಿ, ಕೃಷ್ಣಪ್ಪ, ಸಿದ್ಧಯ್ಯಸ್ವಾಮಿ, ಸುಜಾತಾ, ಪ್ರಭುಸ್ವಾಮಿ ಅವರ ಕಣ್ಣುಗಳನ್ನು ಸಂಗ್ರಹಿಸಿದರು.

ಪರಿಹಾರ ಘೋಷಣೆ

ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ₹ 2 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₹ 50 ಸಾವಿರ ಪರಿಹಾರ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ರಾಜ್ಯದಿಂದ ₹5 ಲಕ್ಷ: ತುಮಕೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ಮತ್ತು ಗಾಯಾಳುಗಳಿಗೆ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರದ ವತಿಯಿಂದ ಭರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.