ADVERTISEMENT

ಬ್ರಹ್ಮಶ್ರೀ ನಾರಾಯಣಗುರು ಸಮಾಜ ಪರಿವರ್ತನೆಯ ಹರಿಕಾರ: ಡಾ.ಶರಣಪ್ರಕಾಶ ಪಾಟೀಲ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2023, 15:58 IST
Last Updated 17 ಸೆಪ್ಟೆಂಬರ್ 2023, 15:58 IST
<div class="paragraphs"><p>ರಾಯಚೂರಿನ ಮಹಿಳಾ ಸಮಾಜ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿದರು</p></div>

ರಾಯಚೂರಿನ ಮಹಿಳಾ ಸಮಾಜ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿದರು

   

ರಾಯಚೂರು: ‘ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜ ಪರಿವರ್ತನೆಯ ಹರಿಕಾರರಲ್ಲಿ ಒಬ್ಬರು. ಸಮಾಜಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದರು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಭಾನುವಾರ ನಗರದ ಮಹಿಳಾ ಸಮಾಜ ಮೈದಾನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ADVERTISEMENT

‘ನಾರಾಯಣಗುರು ಅವರು ದಕ್ಷಿಣ ಭಾರತದಲ್ಲಿ ಸಮಾನತೆಯ ಚಳವಳಿ ನಡೆಸಿ ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎಂಬ ಧ್ಯೆಯದ ಮೇಲೆ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಆದರೆ ಈಗ ಅವರನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡಿದ್ದಾರೆ. ಇದು ಸರಿಯಲ್ಲ’ ಎಂದು ಹೇಳಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಕಲ್ಯಾಣ, ಬಡವರ, ತುಳಿತಕ್ಕೆ ಒಳಗಾದವರ ಕಲ್ಯಾಣಕ್ಕೆ ಕೆಲಸ ಮಾಡುತ್ತಿದೆ. ರಾಜ್ಯದ ಬಜೆಟ್‌ನ ಸಿಂಹಪಾಲು ಸಾಮಾನ್ಯರ ಅನುಕೂಲಕ್ಕೆ ಬಳಸಿ ಸಾಮಾಜಿಕ ನ್ಯಾಯದ ತಳಹದಿಯ ಆಧಾರದ ಮೇಲೆ ಆಡಳಿತ ನಡೆಸುತ್ತಿದೆ. ಆರ್ಯ ಈಡಿಗ ಸಮಾಜದ ವಿವಿಧ ಬೇಡಿಕೆ ಈಡೇರಿಕೆಗೆ ಸರ್ಕಾರ ಬದ್ಧವಾಗಿದೆ. ತಾಂತ್ರಿಕ ಕಾರಣದಿಂದ ಕೆಲವು ಬೇಡಿಕೆ ಈಡೇರಿಕೆ ಆಗದಿದ್ದರೆ ಅದಕ್ಕೆ ಪರ್ಯಾಯವಾಗಿ ಆಲೋಚನೆ ಮಾಡಲಾಗುವುದು’ ಎಂದರು.

ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ‘ಆರ್ಯ ಈಡಿಗ ಸಮಾಜ ಶ್ರೀಮಂತರು, ಹೃದಯವಂತರು. ಎಲ್ಲ ಜಾತಿ,‌ ಧರ್ಮ, ಸಮಾಜದೊಂದಿಗೆ ಬಾಂಧವ್ಯ ಹೊಂದಿ ಸಂಘಟಿತರಾಗಿ ಮಾದರಿಯಾಗಿದ್ದಾರೆ. ಮಹಾತ್ಮರ ವಿಚಾರಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು’ ಎಂದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ‘ರಾಯಚೂರಿನ ಆರ್ಯ ಈಡಿಗ ಸಂಘ ಒಂದು ಕಾಲದಲ್ಲಿ ಶ್ರೀಮಂತ ಸಂಘವಾಗಿತ್ತು. ಬಡವರಿಗೆ ನೆರವು ನೀಡಿ ಆರ್ಥಿಕವಾಗಿ ಕೈ ಹಿಡಿದಿತ್ತು. ಸಮಾಜದ ಕುಲ ಕಸುಬು(ಸೇಂದಿ) ಬಂದ್ ಮಾಡಿದ್ದರಿಂದ ಜಿಲ್ಲೆಯಲ್ಲಿ ಸಿ.ಎಚ್. ಪೌಡರ್ ಹಾವಳಿ ಮಿತಿ ಮೀರಿದೆ. ಇದನ್ನು ತಡೆಯಲು ಸರ್ಕಾರ ಪರ್ಯಾಯವಾಗಿ ಆಲೋಚನೆ ಮಾಡಬೇಕು. ನಾರಾಯಣ ಗುರುಗಳು ಮನುಷ್ಯರೆಲ್ಲರೂ ಸಮಾನರು ಎಂಬ ತತ್ವದಡಿ ಬದುಕಿದ್ದಾರೆ. ನಗರದಲ್ಲಿ ನಾರಾಯಣ ಭವನ ಸಭಾಭವನ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು’ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಆರ್ಯ ಈಡಿಗ ಸಮಾಜದ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು.

ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್. ದುರುಗೇಶ, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ಮುಖಂಡರಾದ ಕೆ.ಶಾಂತಪ್ಪ, ಕೆಪಿಸಿಸಿ ಕಾರ್ಯದರ್ಶಿ ಎ.ವಸಂತಕುಮಾರ, ಮೊಹಮ್ಮದ್ ಶಾಲಂ, ಆರ್ಯ ಈಡಿಗ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.