ಸಿಂಧನೂರು: ಜೇವರ್ಗಿ-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ-150ಎ ವ್ಯಾಪ್ತಿಯ ಸಿಂಧನೂರು-ಮಸ್ಕಿ ಮಧ್ಯದ ಸೇತುವೆ ನಿರ್ಮಾಣ ಕಾಮಗಾರಿ ಅತ್ಯಂತ ಮಂದಗತಿಯಿಂದ ಸಾಗಿದ್ದು, ವಾಹನ ಸವಾರರು ಪ್ರತಿನಿತ್ಯ ತೊಂದರೆ ಅನುಭವಿಸುವಂತಾಗಿದೆ.
ಮಸ್ಕಿಯಿಂದ ಸಿಂಧನೂರಿನವರೆಗೆ 7 ಸೇತುವೆಗಳು ಇದ್ದು, ಸೇತುವೆ ಮತ್ತು ಕೂಡು ರಸ್ತೆ ನಿರ್ಮಾಣಕ್ಕೆ ₹18 ಕೋಟಿ ಬಿಡುಗಡೆಯಾಗಿದೆ. ಹೈದರಾಬಾದ್ ಮೂಲದ ಗುತ್ತಿಗೆದಾರರಿಗೆ ಕಾಮಗಾರಿ ನಿರ್ವಹಿಸುವ ಜವಾಬ್ದಾರಿ ನೀಡಿದ್ದು, ಒಂದೂವರೆ ವರ್ಷ ಕಾಲಾವಧಿ ನಿಗದಿ ಪಡಿಸಲಾಗಿದೆ. ಆದರೆ ಸಿಂಧನೂರು ನಗರದ ಹೊರವಲಯದಲ್ಲಿ ಮಸ್ಕಿ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿ ಜನವರಿ ತಿಂಗಳಲ್ಲಿ ಪ್ರಾರಂಭವಾಗಿದ್ದು, ಇದುವರೆಗೂ ಶೇ 25ರಷ್ಟು ಕಾಮಗಾರಿಯೂ ಆಗದಿರುವುದು ವಿಪರ್ಯಾಸದ ಸಂಗತಿಯಾಗಿದೆ.
‘ಸೇತುವೆ ಕಾಮಗಾರಿ ಪಕ್ಕದಲ್ಲಿ ನಿರ್ಮಿಸಿರುವ ತಾತ್ಕಾಲಿಕ ರಸ್ತೆಗೆ ಒಂದಷ್ಟು ಕಂಕರ್ ಸಹ ಹಾಕಿಲ್ಲ. ಮಣ್ಣಿನ ರಸ್ತೆಯು ಮಳೆ ಬಂದು ಕೆಸರುಮಯವಾಗಿದೆ. ಇದರಿಂದ ಈ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಮತ್ತಷ್ಟು ತೊಂದರೆಯಾಗಿದೆ. ಸಿಂಧನೂರಿನಿಂದ ಮಸ್ಕಿ ತಲುಪಲು ಕಾರು ಸವಾರರಿಗೆ 20 ನಿಮಿಷ ಬೇಕಾಗಿತ್ತು. ಈಗ ವಾಹನ ದಟ್ಟಣೆ ಹೆಚ್ಚಾಗಿ 15 ನಿಮಿಷ ವ್ಯಯಿಸಬೇಕಾಗಿದೆ’ ಎಂದು ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶರಣಪ್ಪ ಮರಳಿ, ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತರಾಯಗೌಡ ಕಲ್ಲೂರು ಹಾಗೂ ಕಾರು ಚಾಲಕ ಅಜ್ಮೀರ್‌ಸಾಬ್ ದೂರುತ್ತಾರೆ.
‘ಕಾಮಗಾರಿ ಸ್ಥಳದಲ್ಲಿ ಒಂದೇ ಜೆಸಿಬಿ ಕೆಲಸ ಮಾಡುತ್ತಿದೆ. ಇದೇ ರೀತಿ ಕಾಮಗಾರಿ ಮುಂದುವರಿದರೆ 1 ಸೇತುವೆ ಮುಗಿಯಬೇಕಾದರೆ 1 ವರ್ಷ ಬೇಕಾಗುತ್ತದೆ. ಮೂರು ಜೆಸಿಬಿ ಮತ್ತು 5 ಟ್ರಾಕ್ಟರ್‌ಗಳು ಹಾಗೂ ನೂರಾರು ಜನ ಕೆಲಸ ಮಾಡಿದರೆ ನಿಗದಿತ ಅವಧಿಯಲ್ಲಿ ಸೇತುವೆ ಪೂರ್ಣಗೊಳ್ಳುತ್ತದೆ’ ಎನ್ನುವುದು ಕಲ್ಲೂರು ಮತ್ತು ಮುಳ್ಳೂರು ಗ್ರಾಮಸ್ಥರ ಅಭಿಪ್ರಾಯವಾಗಿದೆ.
‘ಒಂದು ಸೇತುವೆ ನಿರ್ಮಾಣಕ್ಕೆ ಗರಿಷ್ಠ 4 ತಿಂಗಳು ಕಾಲಾವಧಿ ಸಾಕಾಗುತ್ತದೆ. 6 ತಿಂಗಳಾದರೂ 1 ಸೇತುವೆ ಕಾಮಗಾರಿ ಪೂರ್ಣಗೊಳ್ಳದಿರುವುದನ್ನು ಗಮನಿಸಿದರೆ ಗುತ್ತಿಗೆದಾರರು 7 ಸೇತುವೆಗಳನ್ನು ಪೂರ್ಣಗೊಳಿಸಬೇಕಾದರೆ ಎಷ್ಟು ವರ್ಷ ತೆಗೆದುಕೊಳ್ಳುತ್ತಾರೋ ದೇವರೇ ಬಲ್ಲ. ಅಲ್ಲಿಯವರೆಗೆ ವಾಹನ ಸಂಚಾರ ಪರಿಸ್ಥಿತಿ ಅಯೋಮಯ’ ಎನ್ನುತ್ತಾರೆ ಗುತ್ತಿಗೆದಾರ ರಾಜಾಸಾಬ್.
ಮಳೆ ಮತ್ತು ಎಡದಂಡೆ ನಾಲೆಗೆ ನೀರು ಬಿಟ್ಟಿರುವುದರಿಂದ ಹಳ್ಳಕ್ಕೆ ನೀರು ಹರಿದು ಬರುತ್ತಿರುವುದರಿಂದ ಕೆಲಸ ವಿಳಂಬವಾಗುತ್ತಿದೆ. ನಿಗದಿತ ಅವಧಿಯಲ್ಲಿ ಸೇತುವೆ ಕಾಮಗಾರಿಗಳನ್ನು ಮುಗಿಸಲು ಕೆಸಲ ಚುರುಕುಗೊಳಿಸಲಾಗುವುದುವಿಜಯ ಪಾಟೀಲ ಕಾರ್ಯಪಾಲಕ ಎಂಜಿನಿಯರ್ ರಾಷ್ಟ್ರೀಯ ಹೆದ್ದಾರಿ ಯೋಜನೆ
ಗುತ್ತಿಗೆದಾರರು ಮತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆ ಅಧಿಕಾರಿಗಳು ತ್ವರಿತಗತಿಯಲ್ಲಿ ಸೇತುವೆಗಳ ಕೆಲಸ ಮುಗಿಸದಿದ್ದರೆ ಈ ಭಾಗದ ಗ್ರಾಮಸ್ಥರ ನೇತೃತ್ವದಲ್ಲಿ ರಸ್ತೆ ಸಂಚಾರ ತಡೆ ಚಳವಳಿ ನಡೆಸಲಾಗುವುದುಬಸವಂತರಾಯಗೌಡ ಕಲ್ಲೂರು ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.