ADVERTISEMENT

ಸ್ನೇಹಿತರು, ಕುಟುಂಬದೊಂದಿಗೆ ಕಾಲಹರಣ!

ಚುನಾವಣೆ ಒತ್ತಡದಿಂದ ಹೊರಬಂದ ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳು

ನಾಗರಾಜ ಚಿನಗುಂಡಿ
Published 24 ಏಪ್ರಿಲ್ 2019, 20:16 IST
Last Updated 24 ಏಪ್ರಿಲ್ 2019, 20:16 IST
ರಾಯಚೂರಿನಿಂದ ಲಿಂಗಸುಗೂರಿಗೆ ಪ್ರಯಾಣಿಸಿದ ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ. ನಾಯಕ ಅವರು ಶಾಸಕ ಡಿ.ಎಸ್‌. ಹುಲಗೇರಿ ಹಾಗೂ ಇತರೆ ಮುಖಂಡರೊಂದಿಗೆ ಬುಧವಾರ ಚರ್ಚಿಸಿದರು
ರಾಯಚೂರಿನಿಂದ ಲಿಂಗಸುಗೂರಿಗೆ ಪ್ರಯಾಣಿಸಿದ ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ. ನಾಯಕ ಅವರು ಶಾಸಕ ಡಿ.ಎಸ್‌. ಹುಲಗೇರಿ ಹಾಗೂ ಇತರೆ ಮುಖಂಡರೊಂದಿಗೆ ಬುಧವಾರ ಚರ್ಚಿಸಿದರು   

ರಾಯಚೂರು: ಮಾರ್ಚ್‌ ಆರಂಭದಿಂದ ಸುಮಾರು ಎರಡು ತಿಂಗಳು ಲೋಕಸಭೆ ಚುನಾವಣೆ ಒತ್ತಡದಲ್ಲಿ ಮುಳುಗಿದ್ದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ. ನಾಯಕ ಅವರು ಮತದಾನದ ಮರುದಿನ ಬುಧವಾರ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಹರಟೆಯೊಂದಿಗೆ ದಿನ ಆರಂಭಿಸಿ ಮನಸು ಹಗುರ ಮಾಡಿಕೊಂಡರು.

ಇನ್ನೊಂದು ವಿಶೇಷವೆಂದರೆ, ರಾಯಚೂರು ನಗರದ ಐಡಿಎಸ್‌ಎಂಟಿ ಬಡಾವಣೆಯಲ್ಲಿ ಇಬ್ಬರೂ ಅಭ್ಯರ್ಥಿಗಳ ಮನೆಗಳಿವೆ. ಪ್ರತಿದಿನ ಚಕ್ರದಂತೆ ಸುತ್ತಾಡಿ ಸುಸ್ತಾಗಿರುವ ರಾಜಾ ಅಮರೇಶ್ವರ ನಾಯಕ ಅವರು ಮೂರು ದಿನ ಮನೆಯಲ್ಲಿಯೇ ಉಳಿಯುವುದಕ್ಕೆ ತೀರ್ಮಾನಿಸಿದ್ದಾರೆ.

ಬೆಳಿಗ್ಗೆ ಕುಟುಂಬದ ಸದಸ್ಯರೊಂದಿಗೆ ಉಪಹಾರ, ಚಹಾ ಸೇವಿಸಿದರು. ಆನಂತರ ಆರಾಮದಿಂದ ಕುಳಿತು ನ್ಯೂಸ್‌ ಪೇಪರ್‌ಗಳನ್ನು ಓದಿದರು. ಭೇಟಿ ಮಾಡುವುದಕ್ಕೆ ಬಂದಿದ್ದ ಪಕ್ಷದ ಒಡನಾಡಿಗಳು, ಸ್ನೇಹಿತರೊಂದಿಗೆ ಕುಶಲೋಪರಿ ಮಾತನಾಡಿಕೊಂಡು ಕಾಲ ಕಳೆದರು.

ADVERTISEMENT

ಯಾವ ವಿಧಾನಸಭೆ ಕ್ಷೇತ್ರದಲ್ಲಿ ಎಷ್ಟು ಮತಗಳು ಬಂದಿರಬಹುದು. ಯಾವ ಊರಲ್ಲಿ ಕೈ ಮತಗಳು ಬಂದಿಲ್ಲ ಎನ್ನುವ ಲೆಕ್ಕಾಚಾರವೂ ಶುರುವಾಗಿತ್ತು. ಆದರೆ ಧಾವಂತ, ಒತ್ತಡ ಇರಲಿಲ್ಲ. ಚುನಾವಣೆಯಲ್ಲಿ ಗೆಲ್ಲುತ್ತೇನೆ ಎನ್ನುವ ವಿಶ್ವಾಸ ಮನೆ ಮಾಡಿತ್ತು.

‘ಈಗಷ್ಟೇ ಚುನಾವಣೆ ಮುಗಿದಿದೆ. ಎಲ್ಲಿಯೂ ಹೊರಗಡೆ ಹೋಗಬಾರದು ಎಂದು ನಿರ್ಧಾರ ಮಾಡಿದ್ದೇನೆ. ಕನಿಷ್ಠ ಮೂರು ದಿನ ಮನೆಯಲ್ಲಿಯೇ ಇರುತ್ತೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು

ಬಿ.ವಿ. ನಾಯಕ ಪ್ರಯಾಣ: ಚುನಾವಣೆಗಾಗಿ ನಿದ್ದೆಯಿಲ್ಲದೆ ಸುತ್ತಾಡಿ ಸುಸ್ತಾಗಿದ್ದ ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ. ನಾಯಕ ಅವರು ಬುಧವಾರ ತಡಾವಾಗಿಯೇ ಹಾಸಿಗೆಯಿಂದ ಎದ್ದರು. ಹೊರಗಡೆ ಹೊಗಲೇಬೇಕು ಎನ್ನುವ ಒತ್ತಡ ಅವರಲ್ಲಿ ಇರಲಿಲ್ಲ. ಆದರೂ ಸಂಬಂಧಿಯೊಬ್ಬರ ಮಗಳ ನಿಶ್ಚಿತಾರ್ಥದ ಆಹ್ವಾನ ಬಂದಿರುವುದನ್ನು ಮನ್ನಿಸಿ ಸುರಪುರಕ್ಕೆ ಹೊರಟರು.

ಎರಡು ತಿಂಗಳುಗಳ ಬಳಿಕ ಮನಸ್ಸಿನಲ್ಲಿ ಯಾವುದೇ ಒತ್ತಡವಿಲ್ಲದೆ ಪ್ರಯಾಣಿಸಿದ ದಿನ ಅವರದ್ದಾಗಿತ್ತು. ಚುನಾವಣೆ ಇದ್ದಾಗ ಮನೆ ಎದುರು ಬಂದು ನಿಲ್ಲುತ್ತಿದ್ದ ಜನರು ಹಾಗೂ ಪಕ್ಷದ ಮುಖಂಡರು ಬುಧವಾರ ಕಾಣಿಸಲಿಲ್ಲ. ಸುರಪುರ ಮಾರ್ಗಮಧ್ಯೆ ಲಿಂಗಸುಗೂರಿನಲ್ಲಿ ಕೆಲಕಾಲ ಉಳಿದುಕೊಂಡಿದ್ದರು.

ಶಾಸಕ ಡಿ.ಎಸ್‌.ಹುಲಗೇರಿ ಹಾಗೂ ಇತರೆ ಸ್ನೇಹಿತರೊಂದಿಗೆ ಕುಳಿತು ಚರ್ಚಿಸಿದರು. ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಎಷ್ಟು ಮತಗಳು ಬಂದಿವೆ. ಎಲ್ಲಿ ಬಂದಿಲ್ಲ ಎನ್ನುವ ತರ್ಕಬದ್ಧ ಯೋಚನೆ ಆಯಿತು. ಬಿಜೆಪಿಯಿಂದ ಯಾವುದೇ ಅಲೆ ಇದ್ದರೂ ಕಾಂಗ್ರೆಸ್‌ ಮತಗಳನ್ನು ಸಂಪೂರ್ಣ ಸೆಳೆಯವುದಕ್ಕೆ ಆಗಿಲ್ಲ. ಕಾಂಗ್ರೆಸ್‌ ಗೆಲುವು ನಿಶ್ಚಿತ ಎನ್ನುವ ಲೆಕ್ಕಾಚಾರ ಅವರದ್ದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.