ADVERTISEMENT

ಸಮಾಜ ವಿರೋಧಿಗಳಿಂದ ಸಮಿಕ್ಷೆಯ ಅಪಪ್ರಚಾರ: ಯತೀಂದ್ರ ಸಿದ್ದರಾಮಯ್ಯ

ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 6:48 IST
Last Updated 13 ಅಕ್ಟೋಬರ್ 2025, 6:48 IST
ರಾಯಚೂರಲ್ಲಿ ಭಾನುವಾರ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಮಾತನಾಡಿದರು. ಶರಣಪ್ಪ ಅಷ್ಟೂರ್, ಶ್ರೀಜ್ಞಾನಾನಂದ ಸ್ವಾಮೀಜಿ, ಬಸನಗೌಡ ದದ್ದಲ್, ಅಯ್ಯಣ್ಣ ವಡವಾಟಿ, ನಿಕೇತರಾಜ್‌ ಎಂ., ಎ. ಈರಣ್ಣ ಉಪಸ್ಥಿತರಿದ್ದರು
ರಾಯಚೂರಲ್ಲಿ ಭಾನುವಾರ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಮಾತನಾಡಿದರು. ಶರಣಪ್ಪ ಅಷ್ಟೂರ್, ಶ್ರೀಜ್ಞಾನಾನಂದ ಸ್ವಾಮೀಜಿ, ಬಸನಗೌಡ ದದ್ದಲ್, ಅಯ್ಯಣ್ಣ ವಡವಾಟಿ, ನಿಕೇತರಾಜ್‌ ಎಂ., ಎ. ಈರಣ್ಣ ಉಪಸ್ಥಿತರಿದ್ದರು   

ರಾಯಚೂರು: ‘ಸಮಸಮಾಜದ ವಿರೋಧಿಗಳು ರಾಜ್ಯದಲ್ಲಿ ನಡೆಯುತ್ತಿರುವ ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಅಪಪ್ರಚಾರ ಮಾಡುತ್ತಿದ್ದಾರೆ‘ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಇಲ್ಲಿಯ ಸಿದ್ಧರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಕೆಸಿಬಿ ಆ್ಯಂಡ್ ಸನ್ಸ್ ಕೆ. ಅಯ್ಯಣ್ಣ ವಡವಾಟಿ ಹಾಗೂ ಜಿಲ್ಲಾ ಕನಕ ನೌಕರ ಸಂಘದ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಜಾತಿ ಗಣತಿ ಹೆಸರಲ್ಲಿ ಕಾಂಗ್ರೆಸ್‌ ಸರ್ಕಾರ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಸರ್ಕಾರದ ಹೊಸ ಯೋಜನೆಗಳನ್ನು ಕಣ್ಣುಮುಚ್ಚಿಕೊಂಡು ಜಾರಿಗೆ ತರಲು ಸಾಧ್ಯವಾಗುವುದಿಲ್ಲ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಒಂದು ಸಮುದಾಯವನ್ನು ಮುಂದೆ ತರಲು ಅಗತ್ಯ ಮಾಹಿತಿಬೇಕು. ಅದಕ್ಕೆ ಪೂರಕವಾಗಿ ಸಮೀಕ್ಷೆ ನಡೆಸಲಾಗುತ್ತಿದೆ’ ಎಂದು ಸಮರ್ಥಿಸಿಕೊಂಡರು.

ADVERTISEMENT

‘ರೋಗ ಪತ್ತೆಗೆ ಮೊದಲು ಪರೀಕ್ಷೆ ಮಾಡಬೇಕಾಗುತ್ತದೆ. ರೋಗ ಯಾವುದು ಎನ್ನುವುದು ಗೊತ್ತಾದರೆ ಚಿಕಿತ್ಸೆ ಸುಲಭವಾಗುತ್ತದೆ. ಅದರಂತೆ ಸಮುದಾಯಗಳಲ್ಲಿನ ಕೊರತೆ ನೀಗಿಸಲು ಹಾಗೂ ಅಭಿವೃದ್ಧಿ ಪರ ಯೋಜನೆ ರೂಪಿಸಲು ದತ್ತಾಂಶಗಳು ಅಗತ್ಯ’ ಎಂದು ಅಭಿಪ್ರಾಯಪಟ್ಟರು.

‘ಜಾತಿ ವ್ಯವಸ್ಥೆ ಇಂದಿಗೂ ನಿಂತಿಲ್ಲ. ಹಿಂದೆ ಶೂದ್ರರನ್ನು ಸಾಮಾಜಿಕವಾಗಿ ದೂರ ಇಟ್ಟಿದ್ದರು. ಸವರ್ಣಿಯರಿಗೆ ಮಾತ್ರ ವಿದ್ಯೆ ಕಲಿಯುವ ಅವಕಾಶವಿತ್ತು. ಡಾ.ಅಂಬೇಡ್ಕರ್‌ ಸಂವಿಧಾನ ರಚಿಸಿದ ನಂತರ ಎಲ್ಲರೂ ಶಿಕ್ಷಣ ಪಡೆಯಲು ಸಾಧ್ಯವಾಯಿತು’ ಎಂದು ತಿಳಿಸಿದರು.

‘ರಾಜಕೀಯ ಮೀಸಲಾತಿ ದೊರೆತ ನಂತರ ಶೂದ್ರರಿಗೆ ಶಾಸಕಾಂಗದಲ್ಲಿ ಒಂದಿಷ್ಟು ಅವಕಾಶ ದೊರೆತಿದೆ. ಆದರೆ, ಮುಂದುವರಿದ ಸಮುದಾಯಗಳಂತೆ ಕಾರ್ಯಾಂಗ ಹಾಗೂ ಶಾಸಕಾಂಗದಲ್ಲಿ ಗುರುತಿಸಿಕೊಂಡಿಲ್ಲ. ನಮ್ಮ ಹಕ್ಕುಗಳನ್ನು ಪಡೆಉಲು ಡಾ.ಅಂಬೇಡ್ಕರ್‌ ಅವರ ಮೂರು ಮಂತ್ರಗಳಾದ ಶಿ್ಕ್ಷಣ ಸಂಘಟನೆ ಹಾಗೂ ಹೋರಾಟವನ್ನು ಎಂದಿಗೂ ಮರೆಯಬಾರದು‘ ಎಂದು ಹೇಳಿದರು.

‘ಒಂದು ಸಮುದಾಯ ಅಭಿವೃದ್ಧಿ ಹೊಂದಲು ಅದಕ್ಕೆ ಶಿಕ್ಷಣವೇ ತಳಪಾಯ. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಸಾಧನೆ ಮಾಡಿದರೆ ಸಾಲದು ಉನ್ನತ ಶಿಕ್ಷಣದಲ್ಲೂ ಪ್ರಗತಿ ಸಾಧಿಸಬೇಕು. ಶಾಸಕಾಂಗ ಹಾಗೂ ನ್ಯಾಯಾಂಗದಲ್ಲೂ ಉನ್ನತ ಹುದ್ದೆಗಳಿಗೆ ನೇಮಕಗೊಳ್ಳಬೇಕು’ ಎಂದು ಹೇಳಿದರು.

ಮುಖ್ಯ ಅತಿಥಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ ಮಾತನಾಡಿದರು. ವೆಂಕಟೇಶ ಜಾಲಿಬೆಂಚಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಟಮಾರಿಯ ಶ್ರೀಜ್ಞಾನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೆಸಿಬಿ ಆ್ಯಂಡ್ ಸನ್ಸ್ ಅಯ್ಯಣ್ಣ ವಡವಾಟಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಮಹಾನಗರ ಸಾರಿಗೆ ಉಪಾಧ್ಯಕ್ಷ ನಿಕೇತರಾಜ್‌ ಎಂ., ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ರಾಮಕೃಷ್ಣ ರೊಳ್ಳೆ, ರಾಜ್ಯ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಎ. ಈರಣ್ಣ, ಕೆಪಿಸಿಸಿ ಸದಸ್ಯೆ ಶ್ರೀದೇವಿ ನಾಯಕ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಬಸವಂತಪ್ಪ, ಆನಂದ ಬುಂದ್ರಕಳ್ಳಿ, ಗಂಗಾಧರ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮುಖ್ಯ ಲೆಕ್ಕಾಧಿಕಾರಿ ಶ್ರೀದೇವಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಶರಣಪ್ಪ ಅಷ್ಟೂರ್, ಮಹಾದೇವಪ್ಪ ಮಿರ್ಜಾಪುರ, ಈಶಪ್ಪ, ರಾಮು ಗಿಲೇರಿ, ಡಿ.ಶ್ರೀನಿವಾಸ್, ನಂದ ಕಟ್ಟಿಮನಿ, ಬಸವರಾಜ ಕೊಂಕಲ್, ಬಸಪ್ಪ ಹ್ಯಾಟಿ, ನಾಗರತ್ನ, ಹನುಮಂತ ವಕೀಲ, ನಾಗರಾಜ ಮಡ್ಡಿಪೇಟ, ಅಶೋಕ ಬಿ. ಜಾಮುಂಡಿ ಉಪಸ್ಥಿತರಿದ್ದರು.

ರಾಯಚೂರಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜನ
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ | ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಕೆ |ಸಮಾರಂಭದಲ್ಲಿ ಗಣ್ಯರಿಗೆ ಸ್ಮರಣಿಕೆ ವಿತರಣೆ
ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡುತ್ತಿದೆ. ಗ್ಯಾರಂಟಿಗಳಿಂದ ಸಮಾಜದಲ್ಲಿ ಬದಲಾವಣೆ ಕಂಡು ಬರುತ್ತಿದೆ
ಯತೀಂದ್ರ ಸಿದ್ದರಾಮಯ್ಯ ವಿಧಾನ ಪರಿಷತ್ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.