ADVERTISEMENT

ನಗರಸಭೆಗೆ ₹8.8. ಕೋಟಿ ಆಸ್ತಿ ತೆರಿಗೆ ಸಂಗ್ರಹ

ಒಳ್ಳೆಯ ಪರಿಣಾಮ ಬೀರಿದ ಚಾಲನ್‌ ಮೂಲಕ ಕರ ಸಂಗ್ರಹಿಸುವ ಪದ್ಧತಿ

ನಾಗರಾಜ ಚಿನಗುಂಡಿ
Published 3 ಮೇ 2019, 20:00 IST
Last Updated 3 ಮೇ 2019, 20:00 IST
ಆಸ್ತಿ ತೆರಿಗೆ ಪಾವತಿಸಲು ರಾಯಚೂರು ನಗರಸಭೆ ಕಚೇರಿ ಎದುರು ಚಾಲನ್‌ ಪಡೆದುಕೊಳ್ಳಲು ಜನರು ಸರದಿಯಲ್ಲಿ ನಿಂತಿರುವುದು
ಆಸ್ತಿ ತೆರಿಗೆ ಪಾವತಿಸಲು ರಾಯಚೂರು ನಗರಸಭೆ ಕಚೇರಿ ಎದುರು ಚಾಲನ್‌ ಪಡೆದುಕೊಳ್ಳಲು ಜನರು ಸರದಿಯಲ್ಲಿ ನಿಂತಿರುವುದು   

ರಾಯಚೂರು: ನಗರದಲ್ಲಿರುವ ಕಟ್ಟಡಗಳು ಮತ್ತು ನಿವೇಶನಗಳ ಆಸ್ತಿ ತೆರಿಗೆಯನ್ನು ಚಾಲನ್‌ ಮೂಲಕ ಸಂಗ್ರಹಿಸುವ ಪದ್ಧತಿ ಜಾರಿ ಮಾಡಿ ಎರಡು ವರ್ಷಗಳಾಗಿದ್ದು, ನಗರಸಭೆಗೆ ಹಿಂದಿನ ವರ್ಷಗಳಿಗಿಂತಲೂ ಹೆಚ್ಚು ಕರ ಕ್ರೋಢೀಕರಣ ಆಗುತ್ತಿದೆ.

ಮಾರ್ಚ್‌ 31 ಕ್ಕೆ ಅಂತ್ಯವಾದ 2018–19ನೇ ಹಣಕಾಸು ವರ್ಷದಲ್ಲಿ ₹8.8 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಶೇ 83.11 ರಷ್ಟು ತೆರಿಗೆ ಗುರಿ ಸಾಧನೆಯಾಗಿದೆ. ಇದರ ಹಿಂದಿನ ವರ್ಷವೂ ಶೇ 83.8 ರಷ್ಟು ಕರ ಸಂಗ್ರಹ ಗುರಿ ಸಾಧಿಸಲಾಗಿತ್ತು. ಅಂದರೆ, 2017–18ನೇ ಹಣಕಾಸು ವರ್ಷದಲ್ಲಿ ಒಟ್ಟು ₹7.93 ಕೋಟಿ ಸಂಗ್ರಹವಾಗಿತ್ತು.

ಹಿಂದಿನ ವರ್ಷದ ಆಸ್ತಿ ತೆರಿಗೆ ಬಾಕಿ ಉಳಿದಿರುವುದು ₹1.53 ಕೋಟಿ ಸೇರಿದಂತೆ 2018–19ನೇ ಹಣಕಾಸು ವರ್ಷದಲ್ಲಿ ಒಟ್ಟು 10.59 ಕೋಟಿ ಆಸ್ತಿ ತೆರಿಗೆಯು ನಗರಸಭೆಗೆ ಬರಬೇಕಿತ್ತು. ಅದರಲ್ಲಿ ₹1.79 ಕೋಟಿ ಕರ ಸಂಗ್ರಹ ಆಗಬೇಕಿರುವ ಬಾಕಿಯನ್ನು ಪ್ರಸಕ್ತ ಹಣಕಾಸು ವರ್ಷದ ಲೆಕ್ಕದಲ್ಲಿ ಸೇರ್ಪಡೆ ಮಾಡಲಾಗಿದೆ.

ADVERTISEMENT

ಹಣಕಾಸು ವರ್ಷದ ಆರಂಭದಲ್ಲಿ ಏಪ್ರಿಲ್‌ ತಿಂಗಳು ಮತ್ತು ಕೊನೆಯ ತಿಂಗಳು ಮಾರ್ಚ್‌ನಲ್ಲಿ ಆಸ್ತಿ ತೆರಿಗೆ ಸಂಗ್ರಹವು ಸಾಮಾನ್ಯವಾಗಿ ಹೆಚ್ಚಳವಾಗುತ್ತದೆ. ಆರಂಭದಲ್ಲಿಯೇ ತೆರಿಗೆ ಕಟ್ಟುವವರಿಗೆ ನಗರಸಭೆಯು ಈ ವರ್ಷ ಶೇ 5 ರಷ್ಟು ರಿಯಾಯ್ತಿ ಘೋಷಣೆ ಮಾಡಿತ್ತು. ಈ ಯೋಜನೆಯ ಪ್ರಯೋಜನ ಪಡೆಯಲು ನಗರಸಭೆ ಕಚೇರಿಯಲ್ಲಿ ಅನೇಕ ಜನರು ಸರದಿ ಸಾಲುಗಳಲ್ಲಿ ನಿಂತು ಚಾಲನ್‌ ಪಡೆದುಕೊಂಡು, ಅದರಂತೆ ಬ್ಯಾಂಕ್‌ ಶಾಖೆಗಳಲ್ಲಿ ತೆರಿಗೆ ಪಾವತಿಸಿದರು.

‘ಏಪ್ರಿಲ್‌ ಒಂದೇ ತಿಂಗಳಲ್ಲಿ ಸುಮಾರು ₹1 ರಿಂದ ₹1.5 ಕೋಟಿಯಷ್ಟು ತೆರಿಗೆ ಸಂಗ್ರಹ ಆಗುತ್ತದೆ. ನಗರಸಭೆಯಲ್ಲಿ ಯಾವುದೇ ಕಾರಣಕ್ಕೂ ನಗದು ಪಡೆಯುವ ಪದ್ಧತಿಯಿಲ್ಲ. ಸರದಿಯಲ್ಲಿ ನಿಂತವರಿಗೆ ಅವರ ಮನೆ ಅಥವಾ ನಿವೇಶನ ಸಂಖ್ಯೆ ಆಧರಿಸಿ ಅಬ್‌ಸ್ಟ್ರ್ಯಾಕ್‌ ತೆಗೆದುಕೊಡಲಾಗುತ್ತದೆ. ಎಷ್ಟು ತೆರಿಗೆ ಕಟ್ಟಬೇಕು ಎನ್ನುವ ವಿವರ ಅದರಲ್ಲಿ ಇರುತ್ತದೆ. ಬ್ಯಾಂಕ್‌ ಶಾಖೆಗಳಲ್ಲಿ ಚಾಲನ್‌ ಕಟ್ಟಿದರೆ ಮುಗಿಯಿತು. ತೆರಿಗೆಯಲ್ಲಿ ರಿಯಾಯ್ತಿ ಘೋಷಣೆ ಮಾಡಿದ್ದರಿಂದ ಏಪ್ರಿಲ್‌ನಲ್ಲಿ ಬಹಳಷ್ಟು ಜನರು ಆಸ್ತಿ ತೆರಿಗೆ ಪಾವತಿಸಿದ್ದಾರೆ’ ಎಂದು ನಗರಸಭೆ ಪರಿಸರ ಎಂಜಿನಿಯರ್‌ ಶರಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತೆರಿಗೆ ಹೆಚ್ಚಳ: ಎರಡು ವರ್ಷಗಳ ಹಿಂದೆ ಆಸ್ತಿ ತೆರಿಗೆಗಳನ್ನು ಪರಿಷ್ಕರಣೆ ಮಾಡಿ ಶೇ 30 ರಷ್ಟು ಹೆಚ್ಚಳ ಮಾಡಲಾಗಿತ್ತು. ಪ್ರತಿ ಮೂರು ವರ್ಷಗಳಿಗೊಮ್ಮೆ ಆಸ್ತಿ ತೆರಿಗೆಯನ್ನು ಪರಿಷ್ಕರಣೆ ಮಾಡಬೇಕಿದ್ದು, 2019–20ನೇ ಹಣಕಾಸು ವರ್ಷ ಮುಕ್ತಾಯದ ಬಳಿಕ ಮತ್ತೆ ಕರಗಳು ಪರಿಷ್ಕರಣೆ ಆಗಲಿವೆ.

ತೆರಿಗೆ ಬಾಕಿ

ನಗರಸಭೆಯು ಆಸ್ತಿ ತೆರಿಗೆಯೊಂದಿಗೆ ನೀರಿನ ತೆರಿಗೆ, ಜಾಹೀರಾತು ತೆರಿಗೆ, ಪರವಾನಿಗೆ ಶುಲ್ಕಗಳನ್ನು ಸಂಗ್ರಹಿಸುತ್ತದೆ. ನೀರಿನ ತೆರಿಗೆ ಸಂಗ್ರಹವು ನಿಯಮಿತವಾಗಿ ನಡೆದಿಲ್ಲ. ಹೀಗಾಗಿ ಕೋಟ್ಯಂತರ ತೆರಿಗೆ ಬಾಕಿ ಇದ್ದು, ವಸೂಲಿಗೆ ಈಗಷ್ಟೇ ಕ್ರಮಕ್ಕೆ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.