ರಾಯಚೂರು: ತಜ್ಞರ ಪ್ರಕಾರ ದೇಶದಲ್ಲಿ ಕೋವಿಡ್ ಮೂರನೇ ಅಲೆ ಬರುವ ಮುನ್ಸೂಚನೆ ಶುರುವಾಗಿದೆ. ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮುಂಜಾಗೃತೆ ವಹಿಸಿಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷ ಇ.ವಿನಯಕುಮಾರ್ ಸಲಹೆ ನೀಡಿದರು.
ನಗರದ ರಿಮ್ಸ್ ಆಸ್ಪತ್ರೆಯ ಪ್ರೇಕ್ಷಕರ ಸಭಾಂಗಣದಲ್ಲಿ ನಗರಸಭೆಯ ವತಿಯಿಂದ ಶುಕ್ರವಾರ ರಿಮ್ಸ್ ಆಸ್ಪತ್ರೆಗೆ ₹15 ಲಕ್ಷ ವೆಚ್ಚದ ಯುಎಸ್‌ಜಿ 2ಡಿ ಎಕೋ ಯಂತ್ರ ಹಸ್ತಾಂತರಿಸಿ ಮಾತನಾಡಿದರು.
ಕೋವಿಡ್ ಬಗ್ಗೆ ಪ್ರತಿಯೊಬ್ಬರೂ ಜಾಗೃತಿ ವಹಿಸಿಕೊಳ್ಳಬೇಕು. ವೈಯಕ್ತಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸಿದ ಮರೆಯದೇ ಕೋವಿಡ್ ನಿಯಮ ಪಾಲನೆ ಮಾಡಬೇಕು. ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಯುಎಸ್ ಜಿ 2ಡಿ ಎಕೋ ಯಂತ್ರ ನೀಡಲಾಗಿದೆ. ಇದರ ಸಮರ್ಪಕ ಉಪಯೋಗ ಮಾಡಿಕೊಂಡು ಮಕ್ಕಳ ಆರೋಗ್ಯಕ್ಕೆ ಕಾಳಜಿ ವಹಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ ಮಾತನಾಡಿ, ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಕೋವಿಡ್ ಮೊದಲ ಹಾಗೂ ಎರಡನೇ ಅಲೆ ಸಮರ್ಥವಾಗಿ ನಿರ್ವಾಹಣೆ ಮಾಡುವ ಮೂಲಕ ಸಾರ್ವಜನಿಕ ಆರೋಗ್ಯಕ್ಕೆ ಕೆಲಸ ಮಾಡಿದೆ. ರಿಮ್ಸ್ ಕ್ಯಾಂಪಸ್‌ನಲ್ಲಿ ಕೇರಳ ಮೂಲದ ಐದು ಜನ ವಿದ್ಯಾರ್ಥಿಗಳಿಗೆ ಕೋವಿಡ್ ಪ್ರಕರಣ ದೃಢಪಟ್ಟಿದ್ದು ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ತಿಳಿಸಿದರು.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮೂರನೇ ಅಲೆಯ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುವುದು. ಮೂರನೇ ಅಲೆ ಬರದಂತೆ ಸಮಗ್ರ ಯೋಜನೆ ರೂಪಿಸಿ ಅಗತ್ಯ ಎಚ್ಚರ ಎಲ್ಲರ ಜವಾಬ್ದಾರಿಯಾಗಿದೆ. ಕೋವಿಡ್ ವೇಳೆಯಲ್ಲಿ ಆರೋಗ್ಯ ಇಲಾಖೆಗೆ ನಗರಸಭೆ ಅಗತ್ಯ ಸಹಕಾರ ನೀಡಿದೆ. ಸ್ವಚ್ಛತೆ, ಕುಡಿಯುವ ನೀರು ಇತರೆ ಸೌಕರ್ಯ ನೀಡಿದ್ದು ಮುಂಬರುವ ದಿನಗಳಲ್ಲಿ ಇಲಾಖೆಯ ಜೊತೆ ಕೈಜೋಡಿಸಬೇಕು. ಮೂರನೇ ಅಲೆಯ ಮುನ್ನೆಚ್ಚರಿಕಾ ಕ್ರಮವಾಗಿ ನಗರಸಭೆ 2ಡಿ ಎಕೋ ಮಕ್ಕಳ ತಪಾಸಣಾ ಯಂತ್ರ ನೀಡಿದ್ದು ಅಭಿನಂದನೀಯ ಎಂದರು.
ರಿಮ್ಸ್ ನಿರ್ದೇಶಕ ಡಾ. ಬಸವರಾಜ ಪೀರಾಪುರ, ಡಾ.ಭಾಸ್ಕರ್, ನಗರಸಭೆ ಉಪಾಧ್ಯಕ್ಷೆ ನರಸಮ್ಮ ಮಾಡಗಿರಿ, ಸದಸ್ಯ ನಾಗರಾಜ, ದರೂರ ಬಸವರಾಜ, ತಿಮ್ಮಪ್ಪ ನಾಯಕ, ಡಾ.ವಿಜಯಶಂಕರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.